ಜೋಗಕ್ಕೆ ಸೈಕಲ್ ಹೊಡೆದ ಸಾಗರ ಸೈಕ್ಲಿಂಗ್‌ ಕ್ಲಬ್‌ ಸದಸ್ಯರು!

14 ಜನರ ತಂಡದಿಂದ ಪ್ರವಾಸ

Team Udayavani, May 13, 2019, 1:29 PM IST

ಸಾಗರ: ನಗರದಿಂದ ಜೋಗದವರೆಗೆ ಸೈಕಲ್ ತುಳಿದ ಸಾಗರದ ಯುವಕರು ಸಂಭ್ರಮಿಸಿದರು.

ಸಾಗರ: ಪೆಟ್ರೋಲ್ ವಾಹನಗಳ ಬಳಕೆಯನ್ನು ಕಡಿಮೆಗೊಳಿಸುವ ಅಸ್ತ್ರವೂ ನಮ್ಮದೇ ಕೈಯಲ್ಲಿದೆ ಎಂದು ಜಾಗೃತಿ ಮೂಡಿಸುವ ನಿರಂತರ ಪ್ರಯತ್ನದಲ್ಲಿರುವ ನಗರದ ಸೈಕ್ಲಿಂಗ್‌ ಕ್ಲಬ್‌ ಸದಸ್ಯರು ಈ ಭಾನುವಾರ ಸಾಗರದಿಂದ ಜೋಗ ಜಲಪಾತದವರೆಗೆ ಸೈಕಲ್ ಹೊಡೆದರು. ಈವರೆಗಿನ ವಾರಾಂತ್ಯದ ಸೈಕಲ್ ಪ್ರವಾಸದಲ್ಲಿ 68 ಕಿಮೀ ದೂರ ಸೈಕಲ್ ಹೊಡೆದ ಈ ಪ್ರವಾಸ ದೀರ್ಘ‌ ಪೆಡಲಿಂಗ್‌ನದಾಗಿತ್ತು. 14 ಜನರ ತಂಡ ಈ ಜೋಗ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿತು.

ಬೆಳಗ್ಗೆ ಐದೂವರೆಗೆ ಹೊರಟ ನಟರಾಜ, ಮುರುಳಿ ಗೀಜಗಾರು, ಕೀರ್ತಿ, ಕಿರಣ್‌, ವಿಶಾಲ್ ಪಟೇಲ್, ಮೇಘ ಮಂಕಾಳೆ, ಭಾವೇಶ್‌ ಪಟೇಲ್, ಆದಿತ್ಯ ಮಂಕಳಲೆ, ಸೂರಜ್‌, ಜಗದೀಶ್‌, ಸಮರ್ಥ, ಮಹೇಶ್‌ ಮಧುಸೂಧನ್‌ ಶೇಟ್ ಮೊದಲಾದವರಿದ್ದ ತಂಡ 7-15ರ ವೇಳೆಗೆ ಜೋಗ ತಲುಪಿದೆ. ಕಳೆದ ಕೆಲವು ತಿಂಗಳಿನಿಂದ ಈ ವಾರಾಂತ್ಯ ಸೈಕಲ್ ಪ್ರವಾಸ ಜಾರಿಯಲ್ಲಿದೆ. ಸುತ್ತಮುತ್ತಲ ಹಳ್ಳಿಗಳ ಪುಟ್ಟ ಪ್ರವಾಸಗಳನ್ನು ದಾಟಿ ಕ್ಲಬ್‌ ಸದಸ್ಯರು ದೀರ್ಘಾಂತರದ ಪ್ರಯಾಣಕ್ಕೂ ಸೈ ಎನ್ನುತ್ತಿದ್ದಾರೆ. ಎರಡು ವಾರಗಳ ಹಿಂದೆ 48 ಕಿಮೀ ಪೆಡಲ್ ಹೊಡೆದು ಹಸಿರುಮಕ್ಕಿ ಶರಾವತಿ ಹಿನ್ನೀರಿನ ದಡವನ್ನು ತಂಡ ಮುಟ್ಟಿತ್ತು. ಕಾನ್ಲ, ಸೈದೂರು, ಮಾಸೂರು, ಸಾಗರ ಮಾರ್ಗದಲ್ಲಿ 47 ಕಿಮೀ, ಸಾಗರ, ಶಿರೂರು, ಬೆಳ್ಳೆಣ್ಣೆ ಮಾರ್ಗದಲ್ಲಿ 46 ಕಿಮೀ ಸೈಕಲ್ ಹೊಡೆದಿದ್ದು ಇತಿಹಾಸದ ಪುಟಗಳನ್ನು ಸೇರಿದೆ.

ಕೇವಲ ವಾರಾಂತ್ಯದಲ್ಲಿ ಸೈಕಲ್ ಹೊಡೆಯುವುದರಿಂದ ಆಗುವ ಜಾಗೃತಿಯೇನು ಎಂದು ಸಾಮಾನ್ಯವಾಗಿ ಕಾಡುವ ಪ್ರಶ್ನೆಗೆ ಉತ್ತರಿಸುವ ತಂಡದ ನಟರಾಜ್‌ ಗುಲಗಂಜಿಮನೆ, ವೀಕೆಂಡ್‌ ರೈಡ್‌ ಮಾಡುವುದು ಸುಲಭವಲ್ಲ. ಇದಕ್ಕೆ ಸಿದ್ಧಗೊಳ್ಳಲು ಸೈಕಲ್ ಸವಾರ ಪ್ರತಿದಿನ ಸೈಕಲ್ ಹೊಡೆದು ಫಿಟ್ ಎನ್ನಿಸಿಕೊಳ್ಳಬೇಕು. ಇಂದು ನಾವು 15 ಜನ ಷಟಲ್ ಅಭ್ಯಾಸಕ್ಕೆ ತೆರಳುವಾಗ ಸೈಕಲ್ನ್ನೇ ಬಳಸುತ್ತೇವೆ ಎಂದರೆ ಅಷ್ಟರಮಟ್ಟಿಗೆ ಪೆಟ್ರೋಲ್ ಬಳಕೆಯನ್ನು ತಗ್ಗಿಸಿದ್ದೇವೆ ಎಂದೇ ಹೇಳಬೇಕು. ನಮ್ಮ ಪ್ರವಾಸಗಳಿಗೆ ಸಾಥ್‌ ನೀಡುವವರು ಪರಿಸರಕ್ಕೆ ಒಳಿತು ಮಾಡುವ ದೀಕ್ಷೆ ತೆಗೆದುಕೊಂಡಿದ್ದಾರೆ ಎಂಬುದು ಸ್ಪಷ್ಟ ಎಂದರು.

ನಾನು ಒಂದೂವರೆ ವರ್ಷದ ಹಿಂದೆಯೇ ಬೈಕ್‌ ಮಾರಿಬಿಟ್ಟೆ. ನಗರದ ಓಡಾಟದ ಕೆಲಸಗಳಿಗೆ ಸೈಕಲ್ ಬಳಸುತ್ತೇನೆ. ಸೈಕಲ್ಗೆ ಮೀಟರ್‌ ಅಳವಡಿಸಿದ ನಂತರವೇ ಒಂದೂವರೆ ಸಾವಿರ ಕಿಮೀ ಸಂಚರಿಸಿದ್ದೇನೆ. ಅಂದರೆ ಕಾರು ಓಡಿಸಲು ಬೇಕಾದ ಸರಿಸುಮಾರು 100 ಲೀಟರ್‌ ಪೆಟ್ರೋಲ್ ಸುಡುವುದನ್ನು ತಪ್ಪಿಸಿದ್ದೇನೆ. ನಾವು ಸೈಕಲ್ ಸವಾರಿಯ ನಿರ್ಧಾರ ಮಾಡಿದರೆ ಇಂದಿನ ರಸ್ತೆಗಳ ಗುಣಮಟ್ಟ ಉತ್ತಮವಾಗಿರುವಾಗ ತ್ರಾಸವೂ ಆಗುವುದಿಲ್ಲ, ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತದೆ ಎಂದರು. ಕ್ಲಬ್‌ಗ ಸದಸ್ಯರಾಗಲು ಯಾವುದೇ ಶುಲ್ಕವಿಲ್ಲ. ಮಕ್ಕಳು ಸದಸ್ಯರಾಗಲು ಪೋಷಕರ ಅನುಮತಿ ಪತ್ರ ಅಗತ್ಯ. ವಾರಾಂತ್ಯದ ಪ್ರವಾಸದ ಸಂದರ್ಭದಲ್ಲಿ ಒಯ್ಯುವ ತಿಂಡಿ ಪಾನೀಯಗಳ ಖರ್ಚನ್ನು ಪರಸ್ಪರರ ಹಂಚಿಕೆ ವಿಧಾನದಲ್ಲಿ ಭರಿಸುವುದು ಮಾತ್ರ ಜಾರಿಯಲ್ಲಿದೆ. ವಾರಾಂತ್ಯದ ಸ್ಥಳ ನಿರ್ಧರಿಸುವಲ್ಲಿಯೂ ಎಲ್ಲರಿಗೂ ದೂರದ ಗುರಿ ನಿಗದಿಪಡಿಸುವುದಿಲ್ಲ. ಜೋಗದತ್ತ ಹಲವರು ತೆರಳಿದರೆ ಅವರಲ್ಲೇ ಕೆಲವರು ಕೇವಲ ತಾಳಗುಪ್ಪದವರೆಗೆ ಬಂದು ತಂಡದ ಜಾಗೃತಿ ಅಭಿಯಾನಕ್ಕೆ ಸಾಥ್‌ ನೀಡಿದರು. ನಿಧಾನವಾಗಿಯಾದರೂ ನಗರದಲ್ಲಿ ಸೈಕಲ್ಗಳ ಸಂಖ್ಯೆ ಹೆಚ್ಚಲು ಈ ಪ್ರಯೋಗ ಸಫಲವಾಗಬೇಕಾಗಿದೆ.

ಸೈಕಲ್ಗೂ 10 ರೂ. ಪ್ರವೇಶ
ಜೋಗ ತಲುಪಿದ ಸಾಗರ ಸೈಕ್ಲಿಂಗ್‌ ಕ್ಲಬ್‌ ಸದಸ್ಯರಿಗೆ ಜೋಗ ಅಭಿವೃದ್ಧಿ ಪ್ರಾಧಿಕಾರದ ಸುಪರ್ದಿಯಲ್ಲಿರುವ ಮೈಸೂರು ಬಂಗ್ಲೋ ಪ್ರದೇಶಕ್ಕೆ ಮಾತ್ರ ಉಚಿತವಾಗಿ ಪ್ರವೇಶ ಸಿಗಲಿಲ್ಲ. ಪರಿಸರ ಉಳಿಸುವ ಕಾಳಜಿಯ ಸೈಕಲ್ ಸವಾರರು ತಮ್ಮ ಉದ್ದೇಶ ಹೇಳಿದರೂ ರಿಯಾಯ್ತಿ ಜಾರಿಯಾಗಲಿಲ್ಲ. ಸೈಕ್ಲಿಂಗ್‌ ಕ್ಲಬ್‌ ಸದಸ್ಯರು ಕೂಡ ವಾದಗಳನ್ನು ಮಾಡದೆ ತಲಾ 10 ರೂ. ಹಾಗೂ ಕಾರಿನ ಬಾಬತ್ತಾಗಿ 50 ರೂ. ತೆತ್ತು ಜೋಗ ಜಲಪಾತದ ಆವರಣಕ್ಕೆ ಪ್ರವೇಶ ಪಡೆದರು. ಸಾಮಾಜಿಕ ಕಳಕಳಿ ಅರ್ಥವಾಗದೆ ಇರುವುದರಿಂದ ನಮ್ಮ ಸರ್ಕಾರಿ ವ್ಯವಸ್ಥೆಗಳ ವಿಫಲವಾಗುತ್ತವೆ. ನಾಳೆ ಇದೇ ಜೋಗ ಅಭಿವೃದ್ಧಿ ಪ್ರಾಧಿಕಾರ ಜಾಗೃತಿ ಕಾರ್ಯಕ್ರಮದ ಪ್ರಹಸನ ಮಾಡಿ ಒಂದೆರಡು ಲಕ್ಷ ರೂ. ಖರ್ಚು ಮಾಡಿದರೂ ಅಚ್ಚರಿಯಿಲ್ಲ ಎಂದು ಜೋಗದ ಫೋಟೋಗ್ರಾಫರ್‌ ಶಂಕರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ನಗರದ ಜನನಿಬಿಡ ಪ್ರದೇಶ, ಪ್ಯಾಲೆಸ್‌ ಗುಟ್ಟಹಳ್ಳಿಯ ಸಾಮ್ರಾಟ್‌ ಜ್ಯುವೆಲ್ಲರಿ ಒಳಗೆ ನುಗ್ಗಿ, ದರೋಡೆಗೆ ಯತ್ನಿಸಿ, ವಿಫ‌ಲರಾಗಿ ಗುಂಡು ಹಾರಿಸಿ ಮರಳಲು...

  • ಬೆಂಗಳೂರು: ನಗರದ ವಿವಿಧ ಮಾರುಕಟ್ಟೆಗಳಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳ ಅಬ್ಬರ ನಡೆಯುತ್ತಿದೆ. ಕೆಲವು ಅಧಿಕಾರಿಗಳು ಸದ್ದಿಲ್ಲದೆ...

  • ಬೆಂಗಳೂರು: ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಪುತ್ರಿಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ತಂದೆಯನ್ನು ಭೀಕರವಾಗಿ ಕೊಲೆಮಾಡಿದ ಘಟನೆಯ ನೆನಪು ಮಾಸುವ ಮುನ್ನವೇ,...

  • ಬೆಂಗಳೂರು: ಪ್ರತಿನಿತ್ಯ 40 ಲಕ್ಷ ಪ್ರಯಾಣಿಕರಿಗೆ ಸುರಕ್ಷಿತ ಸಂಚಾರ ಸೇವೆ ನೀಡುತ್ತಿರುವ ಬಿಎಂಟಿಸಿ ಸಿಬ್ಬಂದಿಯ ಜೀವನಕ್ಕೆ ಭದ್ರತೆ ಇಲ್ಲದಂತಾಗಿದ್ದು, ಒಂದು...

  • ಬೆಂಗಳೂರು: ಮೂತ್ರಪಿಂಡ ವೈಫ‌ಲ್ಯದಿಂದ ಬಳಲುತ್ತಿದ್ದ ತಾಯಿಗೆ ಮಗಳು ತನ್ನ ನಿಶ್ಚಿತಾರ್ಥ ರದ್ದು ಮಾಡಿಕೊಂಡು ಮೂತ್ರಪಿಂಡ ದಾನಮಾಡಿ ಜನ್ಮದಾತೆಯ ಜೀವ ಉಳಿಸಿದ್ದಾಳೆ....

ಹೊಸ ಸೇರ್ಪಡೆ