22ರಿಂದ ಸಾಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಹಾಲಪ್ಪ

Team Udayavani, Nov 20, 2019, 12:40 PM IST

ಸಾಗರ: ನ. 22ರಿಂದ 24ರವರೆಗೆ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ರಂಗಕರ್ಮಿ ಹಾಗೂ ಲೇಖಕ ಕೆ.ವಿ. ಅಕ್ಷರ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಅತ್ಯಂತ ವೈಭವದಿಂದ ಆಚರಿಸಲು ಸಕಲ ಸಿದ್ದತೆ ನಡೆಸಲಾಗಿದೆ ಎಂದು ಸಮ್ಮೇಳನ ಸಂಚಾಲನ ಸಮಿತಿ ಗೌರವಾಧ್ಯಕ್ಷ, ಶಾಸಕ ಎಚ್‌. ಹಾಲಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪರಿಷತ್‌ ವತಿಯಿಂದ ಸಮ್ಮೇಳನಾಧ್ಯಕ್ಷ ಕೆ.ವಿ. ಅಕ್ಷರ ಅವರಿಗೆ ಆಹ್ವಾನ ನೀಡಲಾಗಿದೆ. ಸಮ್ಮೇಳನದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ಸಹ ರಚಿಸಲಾಗಿದ್ದು, ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರು ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌ ಮಾತನಾಡಿ, ಮೂರು ದಿನಗಳ ಸಮ್ಮೇಳನಕ್ಕೆ ಸಾರ್ವಜನಿಕರಿಂದ ಮತ್ತು ಸಾಹಿತ್ಯಾಸಕ್ತರಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನ. 22ರಂದು ಬೆಳಗ್ಗೆ 8ಕ್ಕೆ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್‌ ಧ್ವಜರೋಹಣ ನಡೆಯಲಿದೆ. ನಂತರ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದ್ದು, ಕ್ಷೇತ್ರ ಶಿಕ್ಷಣಾಧಿ ಕಾರಿ ಬಿಂಬ ಕೆ.ಆರ್‌. ಉದ್ಘಾಟನೆ ನೆರವೇರಿಸಲಿದ್ದಾರೆ.

ಮಧ್ಯಾಹ್ನ 3ಕ್ಕೆ ಕನ್ನಡಮಾತೆ ಭುವನೇಶ್ವರಿಯ ಮೆರವಣಿಗೆ ನಡೆಯಲಿದ್ದು, ಮಹಾಗಣಪತಿ ದೇವಸ್ಥಾನದಿಂದ ಹೊರಡುವ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮ್ಮೇಳನ ನಡೆಯುವ ಸ್ಥಳಕ್ಕೆ ಆಗಮಿಸಲಿದೆ ಎಂದರು.

ಸಂಜೆ 4ಕ್ಕೆ ಪುಸ್ತಕ ಮೇಳವನ್ನು ಹಿರಿಯ ಸಾಹಿತಿ ಡಾ| ನಾ.ಡಿಸೋಜಾ, ಆಹಾರ ಮೇಳವನ್ನು ಶಾಸಕ ಎಚ್‌.ಹಾಲಪ್ಪ ಹಾಗೂ ಖಾದಿ ಮೇಳವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟನೆ ಮಾಡಲಿದ್ದಾರೆ. ನಂತರ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ನಡೆಯುವ ಮೂರು ದಿನಗಳ ಅಕ್ಷರ ಜಾತ್ರೆ ಸಾಹಿತ್ಯ ಸಮ್ಮೇಳನವನ್ನು ಚಂದನ ವಾಹಿನಿಯ ಮಾಜಿ ಮಹಾ ನಿರ್ದೇಶಕ ಡಾ| ಮಹೇಶ್‌ ಜೋಷಿ ಉದ್ಘಾಟಿಸಲಿದ್ದಾರೆ. ವಿವಿಧ ಲೇಖಕರ ಪುಸ್ತಕವನ್ನು ಸಂಸದ ಬಿ.ವೈ.ರಾಘವೇಂದ್ರ ಲೋಕಾರ್ಪಣೆ ಮಾಡಲಿದ್ದಾರೆ. ವೇದಿಕೆಯಲ್ಲಿ ಕೆ.ವಿ.ಅಕ್ಷರ, ಚರಕ ಪ್ರಸನ್ನ, ಪರಿಷತ್‌ನ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಇತರರು ಉಪಸ್ಥಿರಿರುವರು ಎಂದು ಹೇಳಿದರು. ಸಂಜೆ 6-30ಕ್ಕೆ “ಪ್ರಾಚೀನ ಕನ್ನಡ ಸಾಹಿತ್ಯ-ಅನುಸಂಧಾನ ಮಾರ್ಗಗಳು’ ವಿಷಯ ಕುರಿತು ಸಹ ಪ್ರಾಧ್ಯಾಪಕ ಡಾ|ಜಿ.ಸಣ್ಣಹನುಮಪ್ಪ ಉಪನ್ಯಾಸ ನೀಡಲಿದ್ದು, ಉಪನ್ಯಾಸಕ ಡಾ| ಸಫ್ರಾìಜ್‌ ಚಂದ್ರಗುತ್ತಿ, ಡಾ| ಶಂಕರ ಶಾಸ್ತ್ರಿ ಪ್ರತಿಕ್ರಿಯೆ ನೀಡಲಿದ್ದು, ನಿವೃತ್ತ ಪ್ರಾಚಾರ್ಯ ಡಾ| ಜಿ.ಎಸ್‌. ಭಟ್‌ ಅಧ್ಯಕ್ಷತೆ ವಹಿಸಲಿದ್ದಾರೆ.

23ರಂದು ಬೆಳಗ್ಗೆ 10-30ಕ್ಕೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದ್ದು, ಉರ್ದು ಪ್ರೌಢಶಾಲೆ ಮುಖ್ಯ ಶಿಕ್ಷಕ ದತ್ತಾತ್ರೇಯ ಭಟ್‌ ಉದ್ಘಾಟನೆ ನೆರವೇರಿಸಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್‌. ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಲೇಖಕ ವಿಲಿಯಂ ವಹಿಸಲಿದ್ದಾರೆ. ಸಂಜೆ 4-30ಕ್ಕೆ “ಮಹಿಳೆ: ಅಸಮಾನತೆ, ಶೋಷಣೆಯ ಹೊಸ ವಿನ್ಯಾಸಗಳು’ ವಿಷಯ ಕುರಿತು ಸಹ ಪ್ರಾಧ್ಯಾಪಕಿ ಡಾ| ಸಬಿತಾ ಬನ್ನಾಡಿ ಉಪನ್ಯಾಸ ನೀಡಲಿದ್ದು, ವಿಧಾನ ಪರಿಷತ್‌ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಂತಕಿ ಕೃತಿ ಆರ್‌. ಪ್ರತಿಕ್ರಿಯೆ ನೀಡಲಿದ್ದಾರೆ. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 14 ಜನರನ್ನು ಸನ್ಮಾನಿಸಲಾಗುತ್ತಿದ್ದು, ಸಂಸದ ಬಿ.ವೈ. ರಾಘವೇಂದ್ರ, ಉಪಸ್ಥಿತರಿದ್ದು, ಶಾಸಕ ಎಚ್‌.ಹಾಲಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ಸಿಗಂದೂರು ಕ್ಷೇತ್ರದ ಪ್ರಧಾನ ಅರ್ಚಕ ಎಸ್‌.ಪಿ. ಶೇಷಗಿರಿ ಭಟ್‌ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರುವರು. ಮೂರೂ ದಿನ
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 23ರಂದು ಜ್ಯೂನಿಯರ್‌ ವಿಷ್ಣುವರ್ಧನ್‌, ಜ್ಯೂನಿಯರ್‌ ಶಂಕರನಾಗ್‌ ಒಳಗೊಂಡ ಸಂಗೀತಸಾಗರ ವಾದ್ಯವೃಂದ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.

24ರಂದು ಬೆಳಗ್ಗೆ 11 ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದ್ದು, ಶಾಸಕ ಎಚ್‌.ಹಾಲಪ್ಪ, ಸಾಹಿತಿ ಡಾ| ನಾ. ಡಿಸೋಜಾ, ಪರಿಷತ್‌ ಜಿಲ್ಲಾಧ್ಯಕ್ಷ ಡಿ.ಬಿ. ಶಂಕರಪ್ಪ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಇನ್ನಿತರರು ಉಪಸ್ಥಿತರಿದ್ದು, ಎಸ್‌.ವಿ. ಹಿತಕರ ಜೈನ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಬಹಿರಂಗ ಅಧಿವೇಶನದಲ್ಲಿ ಎಲ್ಲ ಗ್ರಾಪಂ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3ಕ್ಕೆ “ಮಲೆನಾಡಿನ ಪರಿಸರ: ಸಮಸ್ಯೆ-ಸವಾಲುಗಳು’ ವಿಷಯ ಕುರಿತು ಪರಿಸರವಾದಿ ಶಿವಾನಂದ ಕಳವೆ ಉಪನ್ಯಾಸ ನೀಡಲಿದ್ದು, ಪ್ರಗತಿಪರ ಕೃಷಿಕ ಉಳ್ಳೂರು ಚಂದ್ರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಗತಿಪರ ಕೃಷಿಕ ಸೀತಾರಾಮ ಕುರುವರಿ ಪ್ರತಿಕ್ರಿಯೆ ನೀಡಲಿದ್ದಾರೆ.

ಸಂಜೆ 4-30ಕ್ಕೆ “ಅಕ್ಷರ ಕೆ.ವಿ. ಅವರ ಬರಹಗಳಲ್ಲಿನ ತಾತ್ವಿಕ ನೆಲೆಗಟ್ಟುಗಳು’ ವಿಷಯ ಕುರಿತು ಸಹ ಪ್ರಾಧ್ಯಾಪಕ ಡಾ| ಮಲ್ಲಿಕಾರ್ಜುನ ಮೇಟಿ ಉಪನ್ಯಾಸ ನೀಡಲಿದ್ದಾರೆ. ರಂಗಕರ್ಮಿ ದೇವೇಂದ್ರ ಬೆಳೆಯೂರು ಅಧ್ಯಕ್ಷತೆ ವಹಿಸಲಿದ್ದು, ಲೇಖಕ ಮಾಧವ ಚಿಪ್ಳಿ ಪ್ರತಿಕ್ರಿಯೆ ನೀಡಲಿದ್ದಾರೆ. ಸಂಜೆ 6ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಡಾ| ನಾ.ಡಿಸೋಜಾ ಸಮಾರೋಪ ಭಾಷಣ ಮಾಡಲಿದ್ದಾರೆ. ನಂತರ ಪ್ರಜ್ಞಾಭಾರತಿ ವಿದ್ಯಾಮಂದಿರ ಮಕ್ಕಳಿಂದ ಸದಾನಂದ ಶರ್ಮ ವಿರಚಿತ “ಮಹಾರಾಣ ಪ್ರತಾಪ’ಮತ್ತು ಹೊಸೂರು ಭಾರತಿ ಕಲಾ ಪ್ರತಿಷ್ಟಾನದಿಂದ “ಭೌಮಾಸುರ ವಧೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.

ಗೋಷ್ಠಿಯಲ್ಲಿ ಪರಿಷತ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಮ.ಸ. ನಂಜುಂಡಸ್ವಾಮಿ, ಪ್ರಮುಖರಾದ ಎಂ. ನಾಗರಾಜ್‌, ಎಂ.ಸಿ. ಪರಶುರಾಮಪ್ಪ, ಜಿ.ಎಸ್‌.ವೆಂಕಟೇಶ್‌, ನಗರಸಭಾ ಸದಸ್ಯ ಟಿ.ಡಿ. ಮೇಘರಾಜ್‌, ತಾಪಂ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ