ಮಲೆನಾಡು ಅಭಿವೃದ್ದಿಗೆ ಆದ್ಯತೆ: ಬಿಎಸ್‌ವೈ

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 1300 ಕೋಟಿ ರೂ. ಬಿಡುಗಡೆ•ಕೈಗಾರಿಕಾ ವಲಯ ಅಭಿವೃದ್ಧಿಗೂ ಬದ್ಧ

Team Udayavani, Aug 14, 2019, 12:28 PM IST

ತೀರ್ಥಹಳ್ಳಿ: ಮಂಡಗದ್ದೆ ಸಮೀಪದ ಹೆಗಲತ್ತಿಯಲ್ಲಿ ಭಾರೀ ಮಳೆಗೆ ಹಾನಿಯಾದ ತೋಟ-ಗದ್ದೆಗಳನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ವೀಕ್ಷಿಸಿದರು.

ಶಿಕಾರಿಪುರ: ಶಿವಮೊಗ್ಗ ಜಿಲ್ಲೆ ಹಾಗೂ ಶಿಕಾರಿಪುರ ತಾಲೂಕನ್ನು ರಾಜ್ಯದಲ್ಲಿನ ಜನತೆ ಗುರುತಿಸುವಂತೆ ಅಭಿವೃದ್ಧಿ ಮಾಡುವುದು ನನ್ನ ಕರ್ತವ್ಯವಾಗಿದ್ದು, ಮಲೆನಾಡು ಭಾಗವು ಪ್ರವಾಸೋದ್ಯಮಕ್ಕೆ ಸೀಮಿತವಾಗಿದ್ದು, ಇದರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮ ಉದ್ಘಾಟಿಸಿ ಮತ್ತು ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ರಾಜ್ಯವು ಈ ಹಿಂದೆ ಬರಗಾಲದಿಂದ ತತ್ತರಿಸಿ ಹೋಗಿದ್ದು, ಕಳೆದ ಹದಿನೈದು ದಿನದಿಂದ ಸುರಿಯುತ್ತಿರುವ ಮಹಾಮಳೆಯಿಂದ ಕೆಲಭಾಗದಲ್ಲಿ ರೈತರು ಹಾಗೂ ಸಾವಿರಾರು ಗ್ರಾಮಗಳು ತೊಂದರೆಗೆ ಒಳಗಾಗಿದ್ದು, ಸರ್ಕಾರದಿಂದ ಪರಿಹಾರವನ್ನು ಸೂಕ್ತ ಸಮಯದಲ್ಲಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದು, ಯಾರಿಗೂ ತೊಂದರೆ ಆಗದಂತೆ ಜಾಗೃತೆ ವಹಿಸಲು ಆದೇಶಿಸಲಾಗಿದೆ ಎಂದರು.

ತಾಲೂಕಿನ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ಹೊಸೂರು, ತಾಳಗುಂದ ಹಾಗೂ ಉಡುಗಣಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಈಗಾಗಲೇ 1300 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ಬರುವ ಎರಡು ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ತಾಲೂಕಿನಲ್ಲಿ ಹತ್ತಾರು ಯೋಜನೆಗಳು ಅನುಷ್ಠಾನಗೊಳ್ಳಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.

ಜಿಲ್ಲೆಯ ವಿದ್ಯಾವಂತ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್‌ ಕೈಗಾರಿಕೆ ಸ್ಥಾಪನೆಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲು ಬದ್ಧನಾಗಿದ್ದು, ಅರ್ಧಕ್ಕೆ ನಿಂತಿರುವ ವಿಮಾನ ನಿಲ್ದಾಣದ ಕಾಮಗಾರಿಯನ್ನು ಪುನರ್‌ ಚಾಲನೆಗೆ ಸುಮಾರು 50 ಕೋಟಿ ರೂ. ಮಂಜೂರಾತಿ ನೀಡಿ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವುದಾಗಿ ತಿಳಿಸಿದರು.

ಅಂಜನಾಪುರ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ರೈತರ ಮಾಹಿತಿ ತಿಳಿದುಕೊಳ್ಳಲು ವಿಗ್ರಹ ರೂಪದಲ್ಲಿ ಗೊಂಬೆಗಳನ್ನು ಮಾಡಿಸಿದ್ದು, ಇನ್ನೂ ಹೆಚ್ಚಿನ ವ್ಯವಸ್ಥೆಗೆ ದೋಣಿ ವಿಹಾರಕ್ಕೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು

ನಂತರ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲೆಯಲ್ಲಿ ಶಿಕಾರಿಪುರ ತಾಲೂಕು ಸೇರಿದಂತೆ ಸೊರಬ ತಾಲೂಕು ನಂಜುಂಡಪ್ಪ ವರದಿಯಿಂದೆ ಹಿಂದುಳಿತ್ತು. ಯಡಿಯೂರಪ್ಪನವರು ಉಪಮುಖ್ಯಮಂತ್ರಿ ಮುಖ್ಯಮಂತ್ರಿಯಾಗಿದ್ದ ಸದಂರ್ಭದಲ್ಲಿ ತಾಲೂಕುಗಳನ್ನು ಅಭಿವೃದ್ಧಿಪಡಿಸಿ ತಾಲೂಕಿನ ಹಣೆಪಟ್ಟಿಯಲ್ಲಿದ್ದ ವರದಿಯನ್ನು ತೆಗೆದು ಹಾಕಲಾಯಿತು. ಶಿವಮೊಗ್ಗ-ಶಿಕಾರಿಪುರ ರಾಣಿಬೆನ್ನೂರು ಮಾರ್ಗದ ರೈಲ್ವೆ ಯೋಜನೆಗೆ ಚಾಲನೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಯ ಮಾಲೀಕರಿಗೆ 17,000 ಸಾವಿರ ರೂ. ಚೆಕ್‌ಗಳನ್ನು ಮತ್ತು ವಿದ್ಯುತ್‌ ತಗುಲಿ ಮೃತಪಟ್ಟ ರೈತನ ಕುಟುಂಬದವರಿಗೆ 1 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರದ ನಿಧಿಯಿಂದ ನೀಡಲಾಯಿತು.

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಜಿಲ್ಲಾಧಿಕಾರಿ ಶಿವಕುಮಾರ್‌, ವಿಪ ಸದಸ್ಯರಾದ ರವಿಕುಮಾರ್‌, ತಹಶೀಲ್ದಾರ್‌ ಎಂ.ಪಿ. ಕವಿರಾಜ್‌, ನೀರಾವರಿ ಇಲಾಖೆ ಎಇಇ ರಾಮಪ್ಪ, ಮೆಸ್ಕಾಂ ಅಧಿಕಾರಿ ಪರಶುರಾಮಪ್ಪ ಮುಂತಾದವರು ಹಾಜರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ