ಜೋಗ-ವಿಮಾನ ನಿಲ್ದಾಣ ಅಭಿವೃದ್ಧಿಗೆ ಕ್ರಮ

Team Udayavani, Sep 25, 2018, 4:07 PM IST

ಶಿವಮೊಗ್ಗ: ಜೋಗ ಅಭಿವೃದ್ಧಿ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಮುಂದಿನ 15 ದಿನಗಳ ಒಳಗಾಗಿ ಬೆಂಗಳೂರಿನಲ್ಲಿ ಸಭೆ ಕರೆಯಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜೋಗಫಾಲ್ಸ್‌ ಸರ್ವಋತು ಫಾಲ್ಸ್‌ ಮಾಡುವ ಯೋಜನೆಯನ್ನು ಬಿ.ಆರ್‌.ಶೆಟ್ಟಿ ಅವರ ಖಾಸಗಿ ಕಂಪನಿಗೆ ವಹಿಸಲಾಗಿದ್ದು, ಇದಕ್ಕೆ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಇಲಾಖೆಯ ಪರವಾನಗಿ ದೊರೆಯಬೇಕಿದೆ. ಪರವಾನಗಿ ದೊರೆತ ಬಳಿಕ ಯೋಜನೆ ಅನುಷ್ಠಾನ ಆರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಎಲ್ಲಾ ನೆರವು ಒದಗಿಸಲಾಗುವುದು. ಸದರಿ ಯೋಜನೆಗೆ ಸ್ಥಳೀಯರಿಂದ ಹಾಗೂ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಸಮಾಲೋಚನೆ ನಡೆಸುವ ಅಗತ್ಯವಿದೆ ಎಂದು ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯಿಸಿದರು. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದ್ದು, ಇದನ್ನು ಶೀಘ್ರವೇ ಕಾರ್ಯಾರಂಭ ಮಾಡಬೇಕಿದೆ. ಈಗಾಗಲೇ ಭೂಸ್ವಾಧೀನ ಪಡಿಸಿರುವ ಭೂಮಿಗೆ ಪರಿಹಾರವನ್ನು ಸಹ ಒದಗಿಸಲಾಗಿದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಪ್ರವಾಸಿ ರೂಟ್‌ ಮ್ಯಾಪ್‌ ಸಿದ್ಧಪಡಿಸಿ: ಶಿವಮೊಗ್ಗ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ಈ ಎಲ್ಲಾ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಬೇಕಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸಿ ನಕಾಶೆ ಸಿದ್ಧಪಡಿಸಬೇಕಾಗಿದ್ದು, ಕನಿಷ್ಠ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ನೋಡಬಹುದಾದ ಪ್ರವಾಸಿ ತಾಣಗಳ ರೂಟ್‌ ಮ್ಯಾಪ್‌ ಸಿದ್ಧಪಡಿಸುವಂತೆ ಸಚಿವರು ಸೂಚನೆ ನೀಡಿದರು.

ಕೊಡಚಾದ್ರಿ ಪ್ರವಾಸಿ ತಾಣಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಒಂದು ಕಡೆ ಅರಣ್ಯ ಇಲಾಖೆ ಜಮೀನು ಇದ್ದು, ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ತುಂಗಾ-ಭದ್ರಾ ಸಂಗಮ ಸ್ಥಳವಾದ ಕೂಡ್ಲಿಯನ್ನು ಅಭಿವೃದ್ಧಿ ಪಡಿಸಲಾಗುವುದು.

ಇದಕ್ಕಾಗಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು. ಶಾಸಕರಾದ ಈಶ್ವರಪ್ಪ, ಕುಮಾರ ಬಂಗಾರಪ್ಪ, ಅಶೋಕ ನಾಯ್ಕ, ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ವಿಧಾನ ಪರಿಷತ್‌ ಸದಸ್ಯರಾದ ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಎಸ್‌. ದಯಾನಂದ, ಜಿಪಂ ಸಿಇಒ ಶಿವರಾಮೇಗೌಡ, ಎಸ್ಪಿ ಅಭಿನವ ಖರೆ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹನುಮ ನಾಯಕ್‌ ಇದ್ದರು.  

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ