ಸಿಎಂ ಕಾರ್ಯಕ್ರಮದಲ್ಲಿ ಅನುಮತಿ ಇಲ್ಲದೆ ಡ್ರೋಣ್ ಹಾರಾಟ: ಪ್ರಕರಣ ದಾಖಲು
Team Udayavani, Mar 3, 2021, 7:18 PM IST
ಸೊರಬ: ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಅನುಮತಿ ಇಲ್ಲದೆ ಡ್ರೋಣ್ ಹಾರಿಸಿದ ವ್ಯಕ್ತಿಯ ವಿರುದ್ಧ ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಆನವಟ್ಟಿಯಲ್ಲಿ ಫೆ. 28ರಂದು ಮೂಗೂರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮದ ಚಿತ್ರೀಕರಣದ ಗುತ್ತಿಗೆ ಪಡೆದಿದ್ದ ಶಿವಮೊಗ್ಗದ ಮದನ್ ಯಾವುದೇ ಅನುಮತಿ ಇಲ್ಲದೇ ಡ್ರೋಣ್ ಹಾರಿಸಿದ್ದರು. ಗಣ್ಯವಕ್ತಿಗಳ ಕಾರ್ಯಕ್ರಮಗಳಲ್ಲಿ ಡ್ರೋಣ್ ಮೂಲಕ ಚಿತ್ರೀಕರಣ ಮಾಡುವಾಗ ಮೊದಲು ಡ್ರೋಣ್ ಹಾರಿಸಲು ಡಿಜಿಸಿಎ ಮಾನದಂಡ ಪಾಲಿಸಬೇಕು ಮತ್ತು ವ್ಯಾಪ್ತಿಯೊಳಗಿನ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಮುಖ್ಯಮಂತ್ರಿಗಳ ಭದ್ರತೆ ದೃಷ್ಟಿಯಿಂದ ಲೈಸೆನ್ಸ್ ಇಲ್ಲದೆ ಡ್ರೋಣ್ ಹಾರಿಸಿರುವುದನ್ನು ಗಮನಿಸಿದ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಶಿವಮೊಗ್ಗದ ಮದನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.