ಶಿರಾಳಕೊಪ್ಪದಲ್ಲಿ ಸಿಎಫ್‌ಐ ಪರ ಗೋಡೆ ಬರಹ: ಪ್ರಕರಣ ದಾಖಲು
Team Udayavani, Dec 4, 2022, 9:45 PM IST
ಶಿರಾಳಕೊಪ್ಪ: ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಪಟ್ಟಣದ ವಿವಿಧೆಡೆ ನಿಷೇಧಿತ ಸಿಎಫ್‌ಐ ಸಂಘಟನೆ ಸೇರುವಂತೆ ಕಿಡಿಗೇಡಿಗಳು ಬರೆದ ಗೋಡೆ ಬರಹ ಮತ್ತೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಪಟ್ಟಣದ 9ಕ್ಕೂ ಹೆಚ್ಚು ಕಡೆ ಪೊಲೀಸರು ಇದನ್ನು ಪತ್ತೆ ಹಚ್ಚಿದ್ದಾರೆ. ಈ ಗೋಡೆ ಬರಹವನ್ನು ನೀಲಿ ಮತ್ತು ಕೆಂಪು ಬಣ್ಣದ ಸ್ಪ್ರೇ ಬಳಸಿ ಬರೆಯಲಾಗಿದ್ದು ಬರಹದ ಮೇಲೆ ಸ್ಟಾರ್ ಇಡಲಾಗಿದೆ. ಸರ್ಕಾರ ಪಿಎಫ್‌ಐ ಮತ್ತು ಸಿಎಫ್‌ಐ ಸಂಘಟನೆ ನಿಷೇಧಿಸಿದ್ದು, ಸರ್ಕಾರದ ಆದೇಶ ಉಲ್ಲಂಘಿಸಿ ಕೆಲ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.
ಹಳೇ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಸಿಮೆಂಟ್ ಕಾಂಪೌಂಡ್, ಭೋವಿ ಕಾಲೋನಿಗೆ ಹೋಗುವ ವಿದ್ಯುತ್ ಕಂಬ, ದೊಡ್ಡ ಬ್ಯಾಣದಕೇರಿಗೆ ತೆರಳುವ ಕ್ರಾಸ್ ಬಳಿಯ ಸಿಮೆಂಟ್ ಬೋರ್ಡ್ ಮತ್ತು ವಿದ್ಯುತ್ ಕಂಬ, ಚಂದ್ರಪ್ಪ ಎಂಬುವವರ ಮನೆಯ ಕ್ರಾಸ್‌ನ ವಿದ್ಯುತ್ ಕಂಬ, ಬಿಲಾಲ್ ಎಂಬುವವರ ಮನೆಯ ಬಳಿ ಇರುವ ಗ್ಯಾರೇಜ್‌ನ ಗೋಡೆ, ದೊಡ್ಡ ಬ್ಯಾಣದ ಕೇರಿಯ ರಸ್ತೆಯಿಂದ ಮಠದ ಕೇರಿಯ ರಸ್ತೆ ಪಕ್ಕದ ಗೋಡೆಗಳು, ಫಾರೂಕ್ ಮಸೀದಿ ಹಾಗೂ ಬಿಲಾಲ್ ಮಸೀದಿ ಪಕ್ಕದ ಮನೆಯ ಗೋಡೆಗಳ ಮೇಲೆ ಸಿಎಫ್‌ಐ ಸೇರುವಂತೆ ಆಂಗ್ಲ ಭಾಷೆಯಲ್ಲಿ ಕಿಡಿಗೇಡಿಗಳು ಬರೆದಿದ್ದಾರೆ. ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.