ವಿಷ ಸೇವನೆಗೆ ರೈತನ ಪ್ರಯತ್ನ; ಮೆಸ್ಕಾಂ ಕಚೇರಿ ಎದುರು ರೈತರ ಅರೆಬೆತ್ತಲೆ ಪ್ರತಿಭಟನೆ
Team Udayavani, Jan 11, 2022, 12:48 PM IST
ಸಾಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರೈತರಿಗೆ ಮೆಸ್ಕಾಂ ನೀಡುತ್ತಿರುವ ಕಿರುಕುಳವನ್ನು ಖಂಡಿಸಿ ಸೋಮವಾರ ತಾಲೂಕು ರೈತ ಸಂಘದ ವತಿಯಿಂದ ಮೆಸ್ಕಾ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ನಂತರ ರೈತ ಸೂರಜ್ ತಮಗೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ವಿಷ ಸೇವಿಸುವ ಪ್ರಯತ್ನ ನಡೆಸಿದಾಗ ಪೊಲೀಸರು ಮತ್ತು ರೈತ ಸಂಘದವರು ತಡೆದ ಘಟನೆ ಸಹ ನಡೆಯಿತು.
ರೈತರಿಗೆ ರಾಜಕಾರಣಿಗಳೇ ಶತ್ರುಗಳಾಗಿದ್ದಾರೆ. ರೈತರು ಮೆಸ್ಕಾಂಗೆ ಸಂಬಂಧಪಟ್ಟಂತೆ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಮುಂದಾದರೆ ಜನಪ್ರತಿನಿಧಿಗಳ ಪಟಾಲಂಗಳು ವಿರೋಧ ಮಾಡುವ ಮೂಲಕ ರೈತವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಸಾಗರ, ಹೊಸನಗರ, ಸೊರಬ ತಾಲ್ಲೂಕಿನ ರೈತರಿಗೆ ಈತನಕ ಗುಣಮಟ್ಟದ ವಿದ್ಯುತ್ ಸಿಗುತ್ತಿಲ್ಲ. ಅಕ್ರಮ ಸಕ್ರಮದಲ್ಲಿ ರೈತರಿಗೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಟ್ರಾನ್ಸ್‌ಫಾರ್ಮರ್ ಹಾಕಿಕೊಡಿ ಎಂದು ಕೇಳಿದರೆ ಅದಕ್ಕೂ ಸ್ಪಂದಿಸುತ್ತಿಲ್ಲ. ಒಂದರ್ಥದಲ್ಲಿ ರೈತರಿಗೆ ಮೆಸ್ಕಾಂ ಶಾಪವಾಗಿ ಪರಿಣಮಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.
ಮೆಸ್ಕಾಂನ ಪ್ರಚಾರ ಸಮಿತಿ ಸಂಚಾಲಕ ಸೂರಜ್ ಎಂಬುವವರು ತಮ್ಮ ಜಮೀನಿಗೆ ಟ್ರಾನ್ಸ್‌ಫಾರ್ಮರ್ ಹಾಕಿಕೊಡಿ ಎಂದು ಹಣ ಕಟ್ಟಿದ್ದರೂ ಈತನಕ ಸಂಪರ್ಕ ನೀಡಿಲ್ಲ. ಶಾಸಕರ ಹಿಂಬಾಲಕರು ಒತ್ತಡ ತರುತ್ತಿದ್ದಾರೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಿರುವುದು ದುರದೃಷ್ಟಕರ ಸಂಗತಿ. ತಕ್ಷಣ ರೈತ ಸೂರಜ್ ಅವರ ಸಮಸ್ಯೆಯನ್ನು ಬಗೆಹರಿಸಬೇಕು. ತಾಲೂಕಿನಲ್ಲಿ ರೈತರ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ರೈತ ಸಂಘ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಶಾಸಕರ ಹಿಂಬಾಲಕರು ಎಲ್ಲದ್ದಕ್ಕೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಶಾಸಕರು ತಮಗೆ ಮತ ನೀಡಿದವರಿಗೆ ಮಾತ್ರ ಸೌಲಭ್ಯ ಕೊಡುತ್ತಿದ್ದಾರೆ. ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಶಾಸಕರು ಗಮನ ಹರಿಸುತ್ತಿಲ್ಲ ಎಂದು ದೂರಿದರು.
ವಿಷ ಸೇವನೆ ಯತ್ನ: ರೈತರು ಮತ್ತು ಮೆಸ್ಕಾಂ ಅಧಿಕಾರಿಗಳು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ಕೊಠಡಿಯಲ್ಲಿ ಸಭೆ ನಡೆಯುತ್ತಿದ್ದಾಗ ರೈತ ಸೂರಜ್ ವಿಷ ಸೇವನೆ ಮಾಡಲು ಮುಂದಾದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಮತ್ತು ರೈತರು ಸೂರಜ್ ಅವರಿಂದ ವಿಷದ ಬಾಟಲ್ ಕಿತ್ತುಕೊಂಡರು. ನಂತರ ಸೂರಜ್ ನಮ್ಮ ಹಕ್ಕು ಪಡೆಯಲು ಸಾಧ್ಯವಾಗದೆ ಇದ್ದಲ್ಲಿ ಬದುಕಿದ್ದು ಏನು ಪ್ರಯೋಜನ ಸತ್ತು ಹೋಗುತ್ತೇನೆ ಎಂದು ಪಟ್ಟುಹಿಡಿದ ಘಟನೆ ನಡೆಯಿತು. ನಂತರ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ಅವರು ತ್ರೈಮಾಸಿಕ ಸಭೆಗೆ ಹೋಗಲು ಮುಂದಾದಾಗ ಸೂರಜ್ ಅವರು ಜೀಪ್‌ಗೆ ಅಡ್ಡ ಮಲಗಿದ ಘಟನೆ ಸಹ ನಡೆಯಿತು.
ಪ್ರತಿಭಟನೆಯಲ್ಲಿ ಹೊಯ್ಸಳ ಗಣಪತಿಯಪ್ಪ, ಸುರೇಶ್ ಬೆಳ್ಳಿಕೊಪ್ಪ, ಸೂರಜ್, ಮಾಲತೇಶ್, ಚಂದ್ರಪ್ಪ, ದೇವರಾಜ್, ಲೋಹಿತ್, ಶಶಿ ಬರೂರು, ಕುಮಾರ ಗೌಡ, ಸುನಿಲ್, ಕಿರಣ್, ಬದರೀಶ್, ಅಮೃತರಾಜ್, ಓಂಕಾರ್ ಎಸ್.ವಿ., ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್, ತೀ.ನ.ಶ್ರೀನಿವಾಸ್ ಇನ್ನಿತರರು ಹಾಜರಿದ್ದರು.