ಮತ್ತೆ ಭೂಗರ್ಭ ವಿದ್ಯುತ್ ಉತ್ಪಾದನೆ ಗುಮ್ಮ
ಪರಿಸರಾಸಕ್ತರ ವಿರೋಧದ ಮಧ್ಯೆಯೂ ಸರಕಾರದ ಆಸಕ್ತಿ
Team Udayavani, Apr 4, 2022, 2:36 PM IST
ಶಿವಮೊಗ್ಗ: ಪಶ್ಚಿಮ ಘಟ್ಟದ ದಟ್ಟಕಾಡಿನ ಮಧ್ಯೆ ಭೂಗರ್ಭಕ್ಕೆ ನೀರು ಹರಿಸಿ ವಿದ್ಯುತ್ ಉತ್ಪಾದನೆ ಮಾಡುವ ವ್ಯರ್ಥ ಸಾಹಸಕ್ಕೆ ಸರಕಾರ ಮತ್ತೆ ಮನಸ್ಸು ಮಾಡಿದೆ. ಅಪಾರ ಪರಿಸರ ಹಾನಿ, ಜೀವ ಸಂಕುಲಕ್ಕೆ ಧಕ್ಕೆ ತರುವ ಈ ಯೋಜನೆಗೆ ಮಲೆನಾಡಿಗರು ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದರೂ ಸರಕಾರ ಮತ್ತೆ ಮುಂದಡಿ ಇಡಲು ಯೋಚಿಸಿದ್ದು ಬಜೆಟ್ ನಲ್ಲಿ ಬಹಿರಂಗಗೊಂಡಿದೆ.
ಈ ಯೋಜನೆಗೆ ರಾಜ್ಯ ಸರಕಾರ ಈ ವರ್ಷದ ಬಜೆಟ್‌ನಲ್ಲಿ 5391 ಕೋಟಿ ರೂ. ಹಣ ಮೀಸಲಿಟ್ಟಿದೆ. ಈಗಾಗಲೇ ಮಲೆನಾಡು ಜಲಾಶಯಗಳ ಬೀಡಾಗಿದ್ದು ಇದರ ನಡುವೆ ಪ್ರಕೃತಿ ನಾಶದ ಮತ್ತೂಂದು ಯೋಜನೆ ಬೇಕಿತ್ತೇ ಎಂದು ಮಲೆನಾಡಿಗರು ಪ್ರಶ್ನಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಏಳು ಜಲಾಶಯಗಳಿದ್ದು ಲಕ್ಷಾಂತರ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗಿದೆ. ಅಭಿವೃದ್ಧಿ ಯೋಜನೆಗಳು, ಒತ್ತುವರಿ ಕಾರಣಕ್ಕೆ ಅರಣ್ಯ ಭೂಮಿ ಕುಸಿಯುತ್ತಿದೆ. ಮತ್ತಷ್ಟು ಯೋಜನೆಗಳನ್ನು ಕೈಗೊಂಡರೆ ಅಪರೂಪದ ಜೀವ ವೈವಿಧ್ಯಕ್ಕೆ ಧಕ್ಕೆ ಬರಲಿದೆ ಎಂಬ ಆತಂಕ ಮನೆ ಮಾಡಿದೆ.
ಸಾವಿರಾರು ಎಕರೆ ಅರಣ್ಯ ನಾಶ?
ಯೋಜನೆಗೆ 378 ಎಕರೆ ಅರಣ್ಯ ಭೂಮಿ ಸಾಕು ಎನ್ನಲಾಗಿದ್ದರೂ 15 ಕಿ.ಮೀ ಉದ್ದ, 10 ಮೀಟರ್ ಅಗಲದ 6 ಟನಲ್‌ಗಳ ನಿರ್ಮಾಣಕ್ಕೆ 140 ಎಕರೆ, ಪವರ್‌ಹೌಸ್ ಗೆ ಅಂದಾಜು 60 ಎಕರೆ, ಅಲ್ಲಿಗೆ ತಲುಪುವ 20 ಕಿ.ಮೀ ರಸ್ತೆಗೆ 110 ಎಕರೆ, ಬೃಹತ್ ತಂತಿ ಮಾರ್ಗಕ್ಕೆ 490 ಎಕರೆ ಅರಣ್ಯ ನಾಶ ಆಗಲಿದೆ ಎಂದು ಅಂದಾಜಿಸಲಾಗಿದೆ. ಪವರ್‌ಹೌಸ್ ನಿಂದ ದೊಡ್ಡ ದೊಡ್ಡ ನಗರಗಳಿಗೆ ವಿದ್ಯುತ್ ಕೊಂಡೊಯ್ಯಲು ಅದೆಷ್ಟು ಸಾವಿರ ಎಕರೆ ಅರಣ್ಯ ನಾಶವಾಗುತ್ತದೆಯೋ ದೇವರೇ ಬಲ್ಲ. ಈ ಬಗ್ಗೆ ಯೋಜನೆಯಲ್ಲಿ ಪ್ರಸ್ತಾಪ ಇಲ್ಲ.
ಸಿಂಗಳೀಕ ಆವಾಸಸ್ಥಾನ
ಪ್ರಪಂಚದಲ್ಲೇ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಪರಿಗಣಿಸಲ್ಪಟ್ಟ ಸಿಂಗಳೀಕ ಈ ಅರಣ್ಯ ಪ್ರದೇಶದಲ್ಲಿ ಹೆಚ್ಚು ಕಂಡುಬರುತ್ತವೆ. ಇಡೀ ದೇಶದಲ್ಲಿ ಮೂರು ಸಾವಿರ ಸಿಂಗಳೀಕ ಇರಬಹುದು ಎಂದು ಅಂದಾಜಿಸಲಾಗಿದೆ. ಅವುಗಳ ಆವಾಸಸ್ಥಾನಕ್ಕೆ ಧಕ್ಕೆಯಾದರೆ ಸಂತತಿ ನಾಶವಾಗಬಹುದು. ಜತೆಗೆ ಈ ಭಾಗದಲ್ಲಿ ಹೆಚ್ಚು ಮಂಗೋಟೆ ಪಕ್ಷಿಗಳು ಕಂಡುಬರುತ್ತವೆ. ಅವು ಸಹ ಬೇರೆಡೆ ವಲಸೆ ಹೋಗುವ ಸಾಧ್ಯತೆ ಇದೆ.
ಯೋಜನೆಯಿಂದ ಆದಾಯಕ್ಕಿಂತ ಖರ್ಚು ಹೆಚ್ಚು
ತಲಕೆಳಲೆ ಮತ್ತು ಗೇರುಸೊಪ್ಪ ಜಲಾಶಯಗಳ ನಡುವೆ ಭೂಮಿಯ ಆಳದಲ್ಲಿ ಸುರಂಗ ಕೊರೆದು ವಿದ್ಯುದಾಗಾರ ನಿರ್ಮಿಸಲಾಗುತ್ತದೆ. ಇದಕ್ಕೆ ತಲಕೆಳಲೆ ಜಲಾಶಯದಿಂದ ಸುರಂಗಕ್ಕೆ ನೀರು ಹರಿಸಿ ವಿದ್ಯುತ್ ಉತ್ಪಾದಿಸಿ ಅದನ್ನು ಗೇರುಸೊಪ್ಪ ಜಲಾಶಯಕ್ಕೆ ಸೇರಿಸಲಾಗುತ್ತದೆ. ಗೇರುಸೊಪ್ಪ ಜಲಾಶಯದಿಂದ ಮೋಟಾರ್ ಗಳ ಮೂಲಕ 500 ಮೀಟರ್ ಎತ್ತರವಿರುವ ತಲಕೆಳಲೆ ಜಲಾಶಯಕ್ಕೆ ಮತ್ತೆ ನೀರು ತುಂಬಿಸಲಾಗುತ್ತದೆ. 100 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದರೆ 125 ಯೂನಿಟ್ ನೀರು ಪಂಪ್ ಮಾಡಲು ಖರ್ಚಾಗುತ್ತದೆ. ಇಂತಹ ದುಬಾರಿ ಯೋಜನೆ ಏಕೆ ಎಂಬುದು ತಜ್ಞರ ಅಭಿಪ್ರಾಯ.
ಭೂಗರ್ಭ ಜಲವಿದ್ಯುತ್ ಯೋಜನೆ ಪ್ರದೇಶ ದಟ್ಟ ಅರಣ್ಯಪ್ರದೇಶವಾಗಿದ್ದು ಸಿಂಗಳೀಕದಂತಹ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಆವಾಸಸ್ಥಾನವಾಗಿದೆ. ಲಕ್ಷಾಂತರ ಮರಗಳು ಇದಕ್ಕೆ ಬಲಿಯಾಗುತ್ತವೆ. ಪಶ್ಚಿಮ ಘಟ್ಟದಲ್ಲಿ ಇಂತಹ ಯೋಜನೆಗಳನ್ನು ತರುವುದು ಸರಕಾರ ನಿಲ್ಲಿಸಬೇಕು. -ಅಖೀಲೇಶ್ ಚಿಪ್ಳಿ, ಪರಿಸರ ಹೋರಾಟಗಾರ
-ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ
ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು
ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ
ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು
ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್
ಹೊಸ ಸೇರ್ಪಡೆ
ಕನ್ನಡಿಗರಿಗೆ ತೊಂದರೆಯಾದರೆ ಕರ್ನಾಟಕ ಸರ್ಕಾರ ಸಹಿಸಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ
ಗರ್ಭಗುಡಿಯ ಮೂರ್ತಿ ಶ್ರೀಚಕ್ರ ಸ್ಥಳಾಂತರ: ಸ್ಥಳಕ್ಕೆ ಭೇಟಿ ನೀಡದ ಸಚಿವ ಆನಂದ್ ಸಿಂಗ್; ಆಕ್ರೋಶ
‘ವೀಲ್ ಚೇರ್ ರೋಮಿಯೋ’ ಚಿತ್ರ ವಿಮರ್ಶೆ; ವೀಲ್ಚೇರ್ನಿಂದ ಮೇಲೇಳುವ ಸಿನಿಮಾವಿದು…
ಎಸಿಬಿ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಮಾಜಿ ಪೊಲೀಸ್ ಸಿಬ್ಬಂದಿ
ಮತ್ತೊಂದು ಶತಕ: ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಬಟ್ಲರ್