ಅಂತರ್ಜಾಲದಲ್ಲಿನ ಮಾಹಿತಿ ಜ್ಞಾನವಲ್ಲ

Team Udayavani, Jul 31, 2017, 11:58 AM IST

ಶಿವಮೊಗ್ಗ: ಕನ್ನಡ ಭಾಷೆ ಮತ್ತಷ್ಟು ಶ್ರೀಮಂತಗೊಳ್ಳಲು ವಿಶ್ವದ ಶ್ರೇಷ್ಠ ಎನಿಸುವ ಎಲ್ಲಾ ಸಂಗತಿಗಳೂ ಕನ್ನಡದಲ್ಲೇ ಪ್ರಕಟಗೊಳ್ಳಬೇಕು ಎಂದು ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ 2016ನೇ ಸಾಲಿನ ಪುಸ್ತಕ ಬಹುಮಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಎಲ್ಲಾ ವಿಚಾರಗಳ ಬಗ್ಗೆಯೂ ಕನ್ನಡದಲ್ಲಿ ಸಾಹಿತ್ಯ ಪ್ರಕಟವಾಗಬೇಕು. ಆಗ ಮಾತ್ರ ಭಾಷೆ ಮತ್ತಷ್ಟು ಶ್ರೀಮಂತಗೊಳ್ಳುತ್ತದೆ. ಜತೆಗೆ ಸದೃಢವಾಗುತ್ತದೆ ಎಂದು ಹೇಳಿದರು. ಪ್ರಸ್ತುತ ಆಧುನಿಕ ಕಾಲಘಟ್ಟದಲ್ಲಿ ಪ್ರತಿಯೊಂದು ಮಾಹಿತಿ ಅಂತರ್ಜಾಲ ತಾಣದ ಮೂಲಕ ದೊರಕುತ್ತಿದೆ. ಹಾಗೆ ಸಿಕ್ಕ ಮಾಹಿತಿಯನ್ನು ಕೃತಿಯ ರೂಪಕ್ಕೆ ಇಳಿಸಿದರೆ ತಪ್ಪುಗಳು ಆಗುತ್ತದೆ.  ಸಾಮಾಜಿಕ ಜಾಲತಾಣಗಳಲ್ಲಿ ನಾವು ಪಡೆಯುವ ಮಾಹಿತಿಯನ್ನೇ
ಜ್ಞಾನ ಎಂದು ಅರ್ಥೈಸಿಕೊಳ್ಳುತ್ತಿದ್ದೇವೆ. ಮಾಹಿತಿ ಸಮಸ್ಯೆಗೆ ಪರಿಹಾರವಾಗಬಲ್ಲದೇ ಹೊರತು ಜ್ಞಾನವಾಗುವುದಿಲ್ಲ. ನಾವು ಪಡೆದ ಮಾಹಿತಿ ಅರಿವಾಗಿ ಪರಿವರ್ತನೆಯಾದರೆ ಅದು ಜ್ಞಾನ ಎನಿಸಿಕೊಳ್ಳುತ್ತದೆ ಎಂದರು. 

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೆ ಏನೋ ಆಗಿ ಬಿಡುತ್ತದೆ ಎಂದು ಭಾವಿಸಿದ್ದೆವು ಆದರೆ ಏನೂ ಆಗಲಿಲ್ಲ. ಕನ್ನಡ ಭಾಷೆ ಇನ್ನಷ್ಟು ವಿಸ್ತಾರಗೊಳ್ಳಬೇಕು. ಭಾಷೆಯೆಡೆಗೆ ಪ್ರೀತಿ ಹೊಂದಬೇಕು ಎಂದು ಹೇಳಿದರು. ಜಗತ್ತಿನಲ್ಲಿ 3ನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿ ಎಂದು ಹೇಳುತ್ತೇವೆ. ಮಂಗಳ ಗ್ರಹದಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿದೆ ಎಂದು ತಿಳಿದು ಅಲ್ಲಿಗೆ ತೆರಳಲು ಬುಕ್ಕಿಂಗ್‌ ಶುರುವಾಗಿದೆ. ಆದರೆ ಇಲ್ಲಿರುವ ಅಂತರ್ಜಲದ ಬಳಕೆ ಬಗ್ಗೆ ನಾವು ಯೋಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ| ಡಿ.ಎಸ್‌. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ| ಎಚ್‌.ಎಸ್‌. ನಾಗಭೂಷಣ ಇದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಾಹಿತಿಗಳ ಹೆಸರಿನಲ್ಲಿ ನೀಡಲಾಗುವ 12 ಪುಸ್ತಕ ಬಹುಮಾನಗಳನ್ನು ಪ್ರದಾನ ಮಾಡಲಾಯಿತು.

ಪುಸ್ತಕ ಪ್ರಶಸ್ತಿ ಪ್ರದಾನ
ಕುವೆಂಪು ಪ್ರಶಸ್ತಿ- ರೇಖಾ ಕಾಖಂಡಕಿ- ವೈವಸ್ವತ ಕಾದಂಬರಿ, ಪ್ರೊ| ಎಸ್‌.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ- ಡಿ.ಎನ್‌.ಶ್ರೀನಾಥ್‌-ಅಸ್ಸಾಮಿ ಅನುವಾದಿತ ಕೃತಿಗೆ, ಎಂ. ಕೆ. ಇಂದಿರಾ ಪ್ರಶಸ್ತಿ- ಮಧುರಾ ಕರ್ಣಮ್‌- ಆಲದ ನೆರಳು ಕೃತಿಗೆ, ಪಿ. ಲಂಕೇಶ್‌ ಪ್ರಶಸ್ತಿ – ಡಾ.ಮಿರ್ಜಾ ಬಷೀರ್‌-ಜಿನ್ನಿ ಕೃತಿಗೆ, ಡಾ| ಜಿ. ಎಸ್‌. ಶಿವರುದ್ರಪ್ಪ ಪ್ರಶಸ್ತಿ-ವಾಸುದೇವ ನಾಡಿಗ್‌-ಅಲೆ ತಾಕಿದರೆ ದಡ ಕವನ ಸಂಕಲನಕ್ಕೆ, ಡಾ| ಹಾ.ಮಾ. ನಾಯಕ ಪ್ರಶಸ್ತಿ- ಡಾ| 
ಜಿ.ಎಸ್‌.ಭಟ್ಟ- ಮಲೆಯ ಮಾತು ಅಂಕಣ ಬರಹಕ್ಕೆ, ಡಾ| ಯು. ಆರ್‌. ಅನಂತಮೂರ್ತಿ ಪ್ರಶಸ್ತಿ-ಎಚ್‌.ಬಿ. ಇಂದ್ರಕುಮಾರ್‌-ಕಾಣದ ಕಡಲು ಸಣ್ಣ ಕಥಾ ಸಂಕಲನಕ್ಕೆ, ಡಾ| ಕೆ.ವಿ. ಸುಬ್ಬಣ್ಣ ಪ್ರಶಸ್ತಿ-ಸುಬ್ರಾವ ಕುಲಕರ್ಣಿ- ಓಕುಳಿ ಹಾಗೂ ಇತರ ನಾಟಕಗಳು, ಕುಕ್ಕೆ ಸುಬ್ರಹ್ಮಣ್ಯ ಪ್ರಶಸ್ತಿ- ಎಂ.ಜಾನಕಿ ಬ್ರಹ್ಮಾವರ- ನೈಲ್‌ ನದಿಯ ನಾಡಿನಲ್ಲಿ ಪ್ರವಾಸ ಕಥನಕ್ಕೆ, ಹಸೂಡಿ ವೆಂಕಟಶಾಸ್ತ್ರಿ ಪ್ರಶಸ್ತಿ-ಡಾ| ಎ.ಎಸ್‌. ಕುಮಾರಸ್ವಾಮಿ- ಅಂತರ್ಜಲ ಬಳಕೆ ವಿಜ್ಞಾನ ಕೃತಿಗೆ, ನಾ. ಡಿಸೋಜ ಪ್ರಶಸ್ತಿ- ಮತ್ತೂರು ಸುಬ್ಬಣ್ಣ- ಮಕ್ಕಳ ಕಥಾ ಲೋಕ ಮಕ್ಕಳ ಸಾಹಿತ್ಯಕ್ಕೆ ಹಾಗೂ ಡಾ| ಎಚ್‌. ಡಿ. ಚಂದ್ರಪ್ಪ ಗೌಡ- ಡಾ| ಎಚ್‌.ಎಸ್‌. ಮೋಹನ್‌- ವೈದ್ಯ ವಿನೂತನ ಕೃತಿಗೆ ಪ್ರಶಸ್ತಿ ನೀಡಲಾಯಿತು.


ಈ ವಿಭಾಗದಿಂದ ಇನ್ನಷ್ಟು

  • ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿವಿ ಪ್ಯಾಟ್ ಬಳಸುತ್ತಿಲ್ಲ. ಆದರೆ ಅಣಕು ಮತದಾನ ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ...

  • ಸಾಗರ: ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಅಕ್ರಮ ಗಣಿಗಾರಿಕೆ ಇದೆ. ಅರಣ್ಯ ನಾಶ ವ್ಯಾಪಕವಾಗಿದೆ. ಅರಣ್ಯ ಭೂಮಿ ಕಬಳಿಕೆ ಕೂಡ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ತಡೆ...

  • ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮೇ 23ರಂದು ನಡೆಯಲಿದ್ದು, ಸುಗಮವಾಗಿ ಮತ ಎಣಿಕೆ ಕಾರ್ಯ ನಡೆಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ...

  • ಶಿವಮೊಗ್ಗ: ನಮ್ಮ ಇತಿಹಾಸ ಹಾಗೂ ಪರಂಪರೆಯನ್ನು ಸಮಗ್ರವಾಗಿ ಅರಿತವ ಮಾತ್ರ ಸಮರ್ಥವಾಗಿ ಭವಿಷ್ಯವನ್ನು ರೂಪಿಸಬಲ್ಲ ಎಂದು ಇತಿಹಾಸ ತಜ್ಞ ಹಾಗೂ ಹೆಸರಾಂತ ಪ್ರಾಚ್ಯವಸ್ತು...

  • ಶಿವಮೊಗ್ಗ: ನಗರದಲ್ಲಿ ಅಟೋ ಮೀಟರ್‌ ಹಾಕದೆ ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಎಲ್ಲಾ ಅಟೋ ಚಾಲಕರು ಕಡ್ಡಾಯವಾಗಿ ಅಟೋ...

ಹೊಸ ಸೇರ್ಪಡೆ