
ಕೆಎಫ್‌ಡಿ ಲಸಿಕೆ ಉತ್ಪಾದನೆ ಸ್ಥಗಿತ!
Team Udayavani, Dec 8, 2022, 6:30 AM IST

ಶಿವಮೊಗ್ಗ: ಪಶ್ಚಿಮಘಟ್ಟ, ಅಕ್ಕಪಕ್ಕದ ಜಿಲ್ಲೆ ಜನರ ಜೀವ ಹಿಂಡುವ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಅಥವಾ ಮಂಗನ ಕಾಯಿಲೆಗೆ ನೀಡುತ್ತಿದ್ದ ಲಸಿಕೆ ಉತ್ಪಾದನೆ ನಿಲ್ಲಿಸಲಾಗಿದ್ದು, ದಾಸ್ತಾನು ಲಭ್ಯವಿಲ್ಲ ಎಂಬ ಸುತ್ತೋಲೆ ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ.
ವಿಚಿತ್ರವೆಂದರೆ, ಲಸಿಕೆಗೆ ನೀಡಲಾಗಿದ್ದ ಅನುಮತಿ ಮೀರಿದ್ದರೂ, ಕಳೆದ ಎರಡು ದಶಕಗಳಿಂದಲೂ ನಿರಂತರವಾಗಿ ಲಸಿಕೆ ಪೂರೈಸಲಾಗುತ್ತಿದ್ದುದು ಈಗ ಬೆಳಕಿಗೆ ಬಂದಿದೆ. ಆರಂಭದಲ್ಲಿ ಒಂದು ವರ್ಷಕ್ಕೆ ಮಾತ್ರ ಲಸಿಕೆಗೆ ಅನುಮತಿ ನೀಡಲಾಗಿತ್ತು. ಆದರೆ ಅನಂತರ ಯಾವ ಅನುಮತಿಯೂ ಇಲ್ಲದೆ 20 ವರ್ಷ ಲಸಿಕೆಯನ್ನು ಉತ್ಪಾದನೆ ಮಾಡಿ ಪೂರೈಸಲಾಗುತ್ತಿತ್ತು. ಇದೀಗ ದಿಢೀರಾಗಿ ಲಸಿಕೆ ಉತ್ಪಾದನೆಯನ್ನು ಸ್ಥಗಿತಗೊಂಡಿರುವುದು ಮಲೆನಾಡು ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.
ಪ್ರತಿಕ್ರಿಯೆ ಬಂದಿರಲಿಲ್ಲ
2000ನೇ ಇಸವಿವರೆಗೆ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲೇ ಲಸಿಕೆ ತಯಾ ರಾ ಗು ತ್ತಿತ್ತು. ಬಳಿಕ ಪಶುಗಳ ಲಸಿಕೆ ತಯಾರಿಸುತ್ತಿದ್ದ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಆ್ಯನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯೋಲಾಜಿಕಲ್ಸ್ (ಐಎಎಚ್‌ವಿಬಿ)ಗೆ ವರ್ಗಾಯಿಸಲಾಯಿತು. ಇದಕ್ಕಾಗಿ ಈ ಸಂಸ್ಥೆ ಸೆಂಟ್ರಲ್ ಡ್ರಗ್ಸ್ ಸ್ಟಾಡಂರ್ಡ್ ಕಂಟ್ರೋಲ್ ಆರ್ಗನೈಜೇಷನ್ (ಸಿಡಿಎಸ್‌ಸಿಒ) ವತಿಯಿಂದ ಲಸಿಕೆ ತಯಾರಿಕೆ ಲೈಸೆನ್ಸ್ ಕೂಡ ಪಡೆಯಿತು. ಈ ಲೈಸೆನ್ಸ್ ಅವಧಿ ಒಂದು ವರ್ಷದ ಅವಧಿಗೆ ಮಾತ್ರ ಇತ್ತು. ಅನಂತರ ವರ್ಷಗಳಲ್ಲಿ ಒಪ್ಪಿಗೆ ಪಡೆಯಲು ಅರ್ಜಿ ಹಾಕಿದ್ದರೂ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕಾಯ್ದೆಯಲ್ಲಿರುವ ದುರ್ಬಲ ಅಂಶವನ್ನೇ ಇಟ್ಟುಕೊಂಡು ಐಎಎಚ್‌ವಿಬಿ 20 ವರ್ಷ ಲಸಿಕೆ ತಯಾರಿಸಿದೆ.
ಲಸಿಕೆ ಸಾಮರ್ಥ್ಯ ಕುಸಿತ
1957ರಲ್ಲಿ ಸಂಗ್ರಹಿಸಿದ್ದ ಕೆಎಫ್‌ಡಿ ವೈರಸ್‌ನ ಭಾಗಗಳನ್ನು ಬಳಸಿ 1989ರಿಂದ ಲಸಿಕೆ ತಯಾರಿಸಲಾಗುತ್ತಿದೆ. ಇದನ್ನು ಮಾಸ್ಟರ್ ಸೀಡ್ ಎನ್ನುತ್ತಾರೆ. 2001 ರಿಂದ ಅನಂತರ ನಡೆದ ಪೂಟೆನ್ಸಿ (ಕಾರ್ಯಕ್ಷಮತೆ) ಪರೀಕ್ಷೆಗಳಲ್ಲಿ ಲಸಿಕೆ ಸಾಮರ್ಥ್ಯ ಕುಸಿದಿರುವುದು ಅಧ್ಯಯನ ವರದಿಗಳಲ್ಲಿ ಬಹಿರಂಗಗೊಂಡಿದೆ. 2005-2010, 2011-12ರಲ್ಲಿ ನಡೆದ ಅಧ್ಯಯನ ವರದಿಗಳು ಇದೇ ಅಂಶ ಹೊರ ಹಾ ಕಿ ವೆ. ಎರಡು ಡೋಸ್ ಪಡೆದವರಲ್ಲಿ ಶೇ.94ರಷ್ಟು ರಕ್ಷಣಾ ಸಾಮರ್ಥ್ಯ ನೀಡುವ ಬದಲಿಗೆ ಶೇ.62.4ರಷ್ಟು ಮಾತ್ರ ರಕ್ಷಣೆ ನೀಡುತ್ತಿದ್ದವು. ಆದರೂ ಜನರಿಗೆ ಈ ಲಸಿಕೆ ಮುಂದುವರೆಸಲಾಗಿತ್ತು.
ಪರೀಕ್ಷೆ ನಡೆಯಲಿಲ್ಲ
ಎನ್‌ಐವಿ ಪುಣೆ ವಿಜ್ಞಾನಿ ಸಿ.ಎನ್. ದಂಡಾವತರೆ ಅವರಿಂದ ಫಾರ್ಮುಲಾ ಪಡೆದ ಬಳಿಕ ಎಐಎಚ್‌ವಿಬಿ ಲಸಿಕೆ ತಯಾರಿಕೆ ಆರಂಭಿಸಿತ್ತು. 2000ರಲ್ಲಿ ಒಂದು ವರ್ಷದ ಅವಧಿಗೆ ಅದು ಲೈಸನ್ಸ್ ಪಡೆದಿತ್ತು. ಅನಂತರ ಅದು ಮೂರು ಬಾರಿ ಅನುಮತಿ ಕೇಳಿ ಅರ್ಜಿ ಸಲ್ಲಿಸಿದೆ. ಆದರೆ ಒಮ್ಮೆಯೂ ಈ ಅವಧಿಯಲ್ಲಿ ಅದು ಸೆಂಟ್ರಲ್ ಡ್ರಗ್ ಲ್ಯಾಬೋರೇಟರಿ (ಸಿಡಿಎಲ್) ಲಸಿಕೆ ಕ್ಷಮತೆ, ಸಾಮರ್ಥ್ಯ (ಪೂಟೆನ್ಸಿ) ಪರೀಕ್ಷೆ ನಡೆಸಲಿಲ್ಲ. ಜತೆಗೆ ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಜೇಷನ್ (ಸಿಡಿಎಸ್‌ಸಿಒ) ಕೂಡ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿಲ್ಲ. ಇದು ಕೂಡ ಲಸಿಕೆ ಸಾಮರ್ಥ್ಯ ಹಾದಿ ತಪ್ಪಲು ಕಾರಣಗಳಾಗಿವೆ. ಲಸಿಕೆ ಕ್ಷಮತೆ ಪರಿಶೀಲನೆಗೆ ಒಳಪಡಿಸುವುದು ಲೈಸನ್ಸ್ ಪಡೆದ ಸಂಸ್ಥೆ ಜವಾಬ್ದಾರಿ ಕೂಡ ಹೌದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೈಸನ್ಸ್ ಕಿತಾಪತಿ
2000ರಲ್ಲಿ ಒಂದು ವರ್ಷದ ಅವಧಿಗೆ ಅನುಮತಿ ಪಡೆದಿದ್ದ ಐಎಎಚ್‌ವಿಬಿ ಮಧ್ಯ ದಲ್ಲಿ ಆಗಾಗ್ಗೆ ಅನು ಮ ತಿಗೆ ಅರ್ಜಿ ಸಲ್ಲಿ ಸಿತ್ತು. ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. 2017ರಲ್ಲಿ ಮತ್ತೆ ಅರ್ಜಿ ಸಲ್ಲಿಸಿತ್ತು. ಅನುಮತಿ ನೀಡಿದ ಪಟ್ಟಿಯಲ್ಲಿ ಕೆಎಫ್‌ಡಿ ಲಸಿಕೆಯನ್ನು ಅದು ಕೈಬಿಟ್ಟಿತ್ತು. ಇದು ಪೂರ್ವಾನ್ವಯ ಆಗುವಂತೆ ಅನುಮತಿ ರದ್ದಾಗಿತ್ತು. ಈಗ 2022ರಲ್ಲಿ ಲಸಿಕೆ ಉತ್ಪಾದನೆಯನ್ನು ಈ ಸಂಸ್ಥೆ ಕೈಬಿಟ್ಟಿದೆ.
ಸಿಡಿಎಲ್‌ಗೆ ಗೊತ್ತೆ ಇಲ್ಲ
ಭಾರತದಲ್ಲಿ ಯಾವುದೇ ವ್ಯಾಕ್ಸಿನ್‌ಗಳು ತಯಾರಾಗಿ ಮಾರಾಟಕ್ಕೆ ಲೈಸನ್ಸ್ ಪಡೆದ ಮೇಲೆ ಅದನ್ನು ಸೆಂಟ್ರಲ್ ಡ್ರಗ್ ಲ್ಯಾಬೋರೇಟರಿಯಲ್ಲಿ ಪರೀಕ್ಷೆಗೆ ಒಳಪಡಿಸಿ ಅನುಮತಿ ಪಡೆಯಬೇಕು. ಅಲ್ಲಿ ಅದು ತೇರ್ಗಡೆ ಆಗದಿದ್ದರೆ ಬಳಸುವಂತಿಲ್ಲ. 2001ರಿಂದ ಇಲ್ಲಿವರೆಗೆ ಕೆಎಫ್‌ಡಿ ಲಸಿಕೆಯನ್ನು ಇಲ್ಲಿ ಪರೀಕ್ಷೆಗೆ ಒಳಪಡಿಸಿಲ್ಲ. ಈ ಬಗ್ಗೆ ಆರ್‌ಟಿಐ ದಾಖಲೆ ದೃಢಪಡಿಸಿದೆ.
ಕೊನೆ ಬ್ಯಾಚ್‌ನ ಲಸಿಕೆ 50 ಸಾವಿರ ವಯಲ್ಸ್ ಇದೆ. ಅದನ್ನು ಪೊಟೆನ್ಸಿ ಟೆಸ್ಟ್‌ಗೆ ತಮ್ಮ ತಂಡ ಸಿಡಿಎಲ್‌ಗೆ ಹೋಗಿದೆ. ಅಲ್ಲಿಂದ ವರದಿ ಬಂದ ಕೂಡಲೇ ಲಸಿಕೆ ವಿತರಣೆ ಮಾಡಲಿದ್ದೇವೆ. ಲಸಿಕೆ ಸಾಮರ್ಥ್ಯ ಕುಸಿದಿದೆ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ. ಅದನ್ನು ಸಿಡಿಎಲ್‌ನವರೇ ಹೇಳಬೇಕು. ಹಿಂದೆ ಬಂದ ವರದಿಗಳಲ್ಲಿ ಲಸಿಕೆ ವಿಫಲ ಎಂದು ಹೇಳಲು ಸಾಧ್ಯವಿಲ್ಲ.
– ಡಿ. ರಂದೀಪ್, ಆರೋಗ್ಯ ಇಲಾಖೆ ಆಯುಕ್ತರು
-ಶರತ್ ಭದ್ರಾವತಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
