“ಪ್ರಾಥಮಿಕ ಶಿಕ್ಷಣ ಕನ್ನಡಲ್ಲೆ ನೀಡುವಂತಾಗಲಿ’
8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷ ಡಾ| ಎಂ. ಕೆ. ಭಟ್ ಅಭಿಮತ
Team Udayavani, Feb 11, 2021, 4:18 PM IST
ಸೊರಬ: ಆಧುನಿಕತೆ ಭರಾಟೆಯಲ್ಲಿ ಕನ್ನಡ ಭಾಷೆ ಬಗ್ಗೆಕೀಳರಿಮೆ ಸಲ್ಲದು. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ನೀಡುವ ಜತೆಗೆ ಇಲಾಖೆಗಳಲ್ಲಿ ಕನ್ನಡ ಆಡಳಿತ ಭಾಷೆಯಾದಾಗ ಮಾತ್ರ ಕನ್ನಡ ಭಾಷೆ ಮತ್ತು ಸಾಹಿತ್ಯ ಜೀವಂತವಾಗಿರಿಸಲು ಸಾಧ್ಯ ಎಂದು 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ|ಎಂ.ಕೆ.ಭಟ್ ಅಭಿಪ್ರಾಯಪಟ್ಟರು.
ತಾಲೂಕಿನ ಜಡೆ ಗ್ರಾಮದ ಶ್ರೀ ಜಗದ್ಗುರುಸಿದ್ಧವೃಷಭೇಂದ್ರ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸಿ ಅವರು ಮಾತನಾಡಿದರು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ. ಇಂಗ್ಲಿಷ್ ಹಾಗೂ ಪರಭಾಷೆಗಳ ವ್ಯಾಮೋಹ, ಭಾಷೆ ಬಗ್ಗೆ ಇರುವ ನಿರಭಿಮಾನ ನಾವೇ ಸೃಷ್ಟಿಸಿಕೊಂಡ ಕಂದಕಗಳು ಎಂದು ಆತಂಕ ವ್ಯಕ್ತಪಡಿಸಿದ ಅವರು, ನೆರೆಯ ರಾಜ್ಯಗಳಲ್ಲಿನ ಭಾಷಾ ನೀತಿಯಿಂದ ಶಾಲೆಗಳಲ್ಲಿ ಕನ್ನಡ ತೆಗೆದು ಹಾಕಿದ್ದಾರೆ. ಅಲ್ಲಿನ ಕನ್ನಡಿಗರು ಅಲ್ಲಿಯ ಭಾಷೆಯನ್ನೇ ಕಲಿಯಬೇಕಾಗಿದೆ. ಇನ್ನು ಕೆಲ ವರ್ಷಗಳಲ್ಲಿ ಆ ರಾಜ್ಯಗಳಲ್ಲಿ ಕನ್ನಡ ನಶಿಸಿ ಹೋಗುವುದರಲ್ಲಿ ಸಂಶಯವಿಲ್ಲ ಎಂದರು.
ಕನ್ನಡದ ಉಳಿವಿಗೆ ನಾವೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ಕನ್ನಡ ಬರೆಯಲು, ಮಾತನಾಡಲು ಕಲಿಯಬೇಕು. ಕನ್ನಡಿಗರಿಗೆ ಉದ್ಯೋಗದ ಜತೆಗೆ ಕನ್ನಡದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉದ್ಯೋಗ ಮೀಸಲಾತಿ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕನ್ನಡಿಗರಿಗೆ ಶೇ.10 ಕೃಪಾಂಕ ನೀಡಬೇಕು. ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕನ್ನಡ ನಾಡು, ನುಡಿ, ಜಲ ಸಮಸ್ಯೆಗಳು ಎದುರಾದಾಗ ಪಕ್ಷಭೇದ ಮರೆತು ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್. ಕುಮಾರ್ ಬಂಗಾರಪ್ಪ, ರಾಜಕೀಯ ದುರುದ್ದೇಶಕ್ಕಾಗಿ ನಾಡು, ನುಡಿ, ಭಾಷೆ, ಜಾತಿ ಬಳಕೆ ಸಲ್ಲದು. ಕಾವೇರಿ ನೀರನ್ನು ಕುಡಿಯುವ ಎಲ್ಲರೂ ಕಾವೇರಿ ಪುತ್ರರಾಗಿದ್ದಾರೆ. ಕನ್ನಡದ ಮೊದಲ ರಾಜವಂಶಸ್ಥರು ಆಳಿದ ಬನವಾಸಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿ,ಐತಿಹಾಸಿಕ ಹಾಗೂ ಪೌರಾಣಿಕವಾಗಿ ಜಡೆ ಗ್ರಾಮಕ್ಕೆ ಸಾಕಷ್ಟು ಇತಿಹಾಸವಿದೆ. ಪ್ರತಿ ಮನೆ, ಮನಗಳಿಗೂ ಕನ್ನಡ ಸಾಹಿತ್ಯ ತಲುಪಿಸುವ ನಿಟ್ಟಿನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಕಸಾಪ ತಾಲೂಕು ಅಧ್ಯಕ್ಷ ಮಧುರಾಯ್ ಜಿ. ಶೇಟ್ ಅವರು ಅತ್ಯಂತ ಕಡಿಮೆ ಅವ ಧಿಯಲ್ಲಿ ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆಂದು ಶ್ಲಾಘಿಸಿದರು.
ಇದನ್ನೂ ಓದಿ :ಚಿಕ್ಕಮುದಿಗೆರೆ ಗ್ರಾಪಂ ಮತ್ತೆ ಕಾಂಗ್ರೆಸ್ ತೆಕ್ಕೆಗೆ
ಇದಕ್ಕೂ ಮೊದಲು ಗ್ರಾಮದ ಈಶ್ವರ ದೇವಸ್ಥಾನ ದಿಂದ ಸಭಾಭವನದವರೆಗೆ ಸಮ್ಮೇಳನಾಧ್ಯಕ್ಷ ಡಾ|ಎಂ. ಕೆ. ಭಟ್ ದಂಪತಿಯನ್ನು ತೆರೆದ ವಾಹನದಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಕರೆಯಲಾಯಿತು. ಜಡೆ ಸಂಸ್ಥಾನಮಠದ ಡಾ|ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಂತಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಕಸಾಪ ತಾಲೂಕು ಅಧ್ಯಕ್ಷ ಮಧುರಾಯ್ ಜಿ.ಶೇಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಪಂ ಸದಸ್ಯ ಶಿವಲಿಂಗೇಗೌಡ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಹಾಲೇಶ್ ನವುಲೆ, ಕೋಶಾಧ್ಯಕ್ಷ ಮಹೇಶ್ ಗೋಖಲೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸೂರ್ಯನಾರಾಯಣ ಹೆಗಡೆ, ಜಡೆ ಕಸಾಪ ಘಟಕದ ಅಧ್ಯಕ್ಷ ಮೃತ್ಯುಂಜಯ ಗೌಡ, ವಿಜೇಂದ್ರಕುಮಾರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರುದ್ರಮನಿ ಎನ್.ಸಜ್ಜನ್, ಎಪಿಎಂಸಿ ಅಧ್ಯಕ್ಷ ಜಯ ಶೀಲಪ್ಪ, ಜಡೆ ತಾವೃಸೇಸ ಸಂಘದ ಅಧ್ಯಕ್ಷ ಶಿವಮೂರ್ತಿ ಗೌಡ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಗರಾಜಗೌಡ ಆಲಹಳ್ಳಿ, ತಾಪಂ ಸದಸ್ಯರಾದ ಅಂಜಲಿ ಸಂಜೀವ್, ಕಮಲಾ ಕುಮಾರ್, ಪ್ರಮುಖರಾದ ಉಮೇಶ್ ಬಿಚ್ಚುಗತ್ತಿ, ಈ. ಶಿವಕುಮಾರ್, ಪ್ರಶಾಂತ್ ಹುಣವಳ್ಳಿ, ಶ್ರೀದೇವಿ, ಜೋಷಿ, ಕೋಟೆ ಬಸವಂತಪ್ಪ ಇತರರಿದ್ದರು.