ಮತ ಎಣಿಕೆಗೆ ಸಿದ್ಧತೆ ಪೂರ್ಣ

•8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭ: ಡಿಸಿ ದಯಾನಂದ್‌

Team Udayavani, May 22, 2019, 10:35 AM IST

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮೇ 23ರಂದು ನಡೆಯಲಿದ್ದು, ಸುಗಮವಾಗಿ ಮತ ಎಣಿಕೆ ಕಾರ್ಯ ನಡೆಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ತಿಳಿಸಿದರು.

ಮಂಗಳವಾರ ಜಿಲ್ಲಾಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಎಣಿಕೆ ಕಾರ್ಯ ಬೆಳಗ್ಗೆ 8ಗಂಟೆಯಿಂದ ಆರಂಭವಾಗಲಿದೆ. ಒಟ್ಟು 8 ಭದ್ರತಾ ಕೊಠಡಿಗಳಲ್ಲಿ ಮತಯಂತ್ರಗಳನ್ನು ಸುರಕ್ಷಿತವಾಗಿ ಇಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಭದ್ರತಾ ಕೊಠಡಿಯಿಂದ ಮತಯಂತ್ರಗಳನ್ನು ಎಣಿಕೆ ಕೊಠಡಿಗೆ ತರಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರವಾರು ತಲಾ ಎರಡು ಎಣಿಕೆ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದ್ದು, ಪ್ರತಿ ಕೊಠಡಿಯಲ್ಲಿ 14 ಮೇಜುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಎಣಿಕೆ ಕಾರ್ಯ ಮಾತ್ರ ಒಂದೇ ಕೊಠಡಿಯಲ್ಲಿ ನಡೆಯಲಿದೆ. ಹೀಗಾಗಿ ಒಟ್ಟು 15 ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.

ಪ್ರತಿ ಎಣಿಕೆ ಮೇಜಿನಲ್ಲಿ ಮತ ಎಣಿಕೆ ಅಧಿಕಾರಿ, ಸಹಾಯಕ ಹಾಗೂ ಮೈಕ್ರೋ ವೀಕ್ಷಕ ಇರುತ್ತಾರೆ. ಪ್ರತಿ ಅಭ್ಯರ್ಥಿ ಪರವಾಗಿ ಒಬ್ಬ ಏಜೆಂಟ್‌ಗೆ ನಿಗದಿತ ಸ್ಥಳದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. 14 ಮತದಾನ ಕೇಂದ್ರಕ್ಕೆ ಒಂದು ಸುತ್ತಿನಂತೆ ಮತ ಎಣಿಕೆ ನಡೆಯಲಿದೆ. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಗರಿಷ್ಟ 21 ಸುತ್ತು ಹಾಗೂ ಶಿಕಾರಿಪುರದಲ್ಲಿ ಕನಿಷ್ಟ 17 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಮತದಾನದ ಸಂದರ್ಭದಲ್ಲಿ ಅಣಕು ಮತಗಳನ್ನು ಅಳಿಸದೇ ಇರುವ 3 ಪ್ರಕರಣಗಳು ಜಿಲ್ಲೆಯಲ್ಲಿದ್ದು, ಇವುಗಳ ವಿವಿಪ್ಯಾಟ್ ಮತ ಎಣಿಕೆ ನಡೆಸಲಾಗುವುದು. ಇದರೊಂದಿಗೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಐದರಂತೆ ಒಟ್ಟು 40 ವಿವಿಪ್ಯಾಟ್‌ಗಳ ಎಣಿಕೆ ಕಾರ್ಯವನ್ನು ಈ ಬಾರಿ ಕೈಗೊಳ್ಳಲಾಗುವುದು ಎಂದರು.

ಮತ ಎಣಿಕೆ ಕೇಂದ್ರದೊಳಗೆ ಕಡ್ಡಾಯವಾಗಿ ಮೊಬೈಲ್ ನಿಷೇಧಿಸಲಾಗಿದೆ. ಮತ ಎಣಿಕೆ ಅಧಿಕಾರಿ ಹಾಗೂ ಸಿಬ್ಬಂದಿ ಬೆಳಗ್ಗೆ 7.30ರ ಒಳಗಾಗಿ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಲು ಸೂಚಿಸಲಾಗಿದೆ. ಅಭ್ಯರ್ಥಿಗಳ ಪರ ಏಜೆಂಟರು ಎಂಟು ಗಂಟೆಯೊಳಗಾಗಿ ಗುರುತಿನ ಚೀಟಿಯೊಂದಿಗೆ ಹಾಜರಾಗಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ