5 ಹೊಸ ನಾಡಕಚೇರಿ ಸ್ಥಾಪನೆಗೆ ಪ್ರಸ್ತಾವನೆ

Team Udayavani, Jul 31, 2017, 11:55 AM IST

ಸಾಗರ: ರೈತ ವರ್ಗ ದಾಖಲೆ, ಅರ್ಜಿ ಸಲ್ಲಿಕೆಗೆ ಹತ್ತಾರು ಕಿಮೀ ಅಲೆದಾಡುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ತಾಲೂಕಿನ ಐದು ಭಾಗಗಳಲ್ಲಿ ಹೊಸದಾಗಿ ನಾಡಕಚೇರಿಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ನಗರದ ಸಾಮರ್ಥ್ಯಸೌಧದಲ್ಲಿ ಕರೆಯಲಾಗಿದ್ದ ತ್ತೈಮಾಸಿಕ ಅಭಿವೃದ್ಧಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಹೆಗ್ಗೊಡಿನಲ್ಲಿ ನೆಮ್ಮದಿ ಕೇಂದ್ರ ಸ್ಥಾಪನೆಯ ಪ್ರಕ್ರಿಯೆ ನಡೆದಿದೆ. ಈ ತರಹದ ಅರ್ಜಿ ಸ್ವೀಕಾರ ಕೇಂದ್ರಗಳನ್ನು ಗ್ರಾಪಂಗಳು ಅವಕಾಶ ಕೊಟ್ಟರೆ ಆಯಾ ಪಂಚಾಯತ್‌ ಕಟ್ಟಡದಲ್ಲಿಯೇ ನಿರ್ವಹಿಸಬಹುದು. ಈ ನಿಟ್ಟಿನಲ್ಲಿ ಸಮನ್ವಯದಿಂದ ಕೆಲಸ ಮಾಡಿ ಎಂದು ಸೂಚಿಸಿದರು.

ತಾಲೂಕು ಕಚೇರಿಗೆ ಸಲ್ಲಿಕೆಯಾದ 4088 ಬಿಪಿಎಲ್‌ ಅರ್ಜಿ ಸಂಬಂಧ 1,500 ಅರ್ಜಿಗಳು ವಿಲೇ ಮಾಡಿ ಕಂಪ್ಯೂಟರ್‌ ದಾಖಲೀಕರಣ ನಡೆಸಲಾಗಿದೆ. ಮುಂದಿನ 15 ದಿನಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ಕೂ ಗಣಕೀಕರಣಗೊಳ್ಳುತ್ತವೆ ಎಂದು ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರ್‌ ತಿಳಿಸಿದರು.

ಕಾಗೋಡು ಗಮನ ಸೆಳೆದ ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ಅಂಗನವಾಡಿ ಶಿಕ್ಷಕಿಯರು, ಕಾರ್ಯಕರ್ತರ ವೇತನ ಆರೂವರೆ ಸಾವಿರ ರೂ. ಗಳಷ್ಟೇ. ಆದರೆ ಅವರ ಮಕ್ಕಳು ಹಿಂದುಳಿದ ವರ್ಗದವರ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ಪಡೆಯಲು ಬೇಕಾಗುವ ಆದಾಯ ಪ್ರಮಾಣ ಪತ್ರ ಪಡೆಯಲು ಈ ಆದಾಯ ತೊಡಕಾಗುತ್ತದೆ. ಆರೂವರೆ ಸಾವಿರ ರೂ. ಸಂಬಳ ಇಂದಿನ ಸಮಾಜದಲ್ಲಿ ಏನೇನೂ ಅಲ್ಲ. ಅವರು ಬಡತನದ ರೇಖೆಗಿಂತ ಕೆಳಗೇ ಬರುತ್ತದೆ. ಆದರೆ ಕಾರ್ಯಕರ್ತೆಯರೆಂಬ ಪಟ್ಟ ಅವರಿಗೆ ಸೌಲಭ್ಯ ಸಿಗದಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಪರಿಹಾರ
ಹುಡುಕಿಕೊಡಬೇಕು ಎಂದು ವಿನಂತಿಸಿದರು.

ಶಿಕ್ಷಕರ ವಿಚಾರ ಪ್ರಸ್ತಾಪಿಸಿದ ತಾಪಂ ಅಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ, ತಾಲೂಕಿನಲ್ಲಿ 20 ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೇರು ಬಿಟ್ಟಿರುವ ಸಾಕಷ್ಟು ಸಂಖ್ಯೆಯ ಶಿಕ್ಷಕರಿದ್ದಾರೆ. ಹೆಗ್ಗೊàಡು ಹೊನ್ನೇಸರದ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 216 ವಿದ್ಯಾರ್ಥಿಗಳಿದ್ದಾರೆ. 200 ಮಕ್ಕಳಿದ್ದರೆ ದೈಹಿಕ ಶಿಕ್ಷಕರನ್ನು ಕಡ್ಡಾಯವಾಗಿ ಒದಗಿಸಬೇಕು ಎಂಬ ನಿಯಮವಿದೆ. ಅದರ ಸಮರ್ಪಕ ಪಾಲನೆಯಾಗುತ್ತಿಲ್ಲ ಎಂದು ದೂರಿದರು. 

ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯ ಉಜ್ವಲವಾಗಿರುವುದಿಲ್ಲ. ಹೀಗಾದಾಗ ನಮ್ಮ ತಾಲೂಕು ಬರಗಾಲಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆ ಇದೆ. ಕೃಷಿ ಉತ್ಪನ್ನಗಳನ್ನು ಬಾಡಿಗೆ ಕೊಡುವ ಯೋಜನೆಯ  ಗುತ್ತಿಗೆದಾರರು ತಾಳಗುಪ್ಪ, ಆವಿನಹಳ್ಳಿಯಲ್ಲಿ ಹಿಂದೆ ಸರಿದಿದ್ದಾರೆ. ಎರಡೂ ಕಡೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಟನೆ ಇದನ್ನು ತೆಎಗೆದುಕೊಂಡಿತ್ತು. ಈ ಬಗ್ಗೆ ಪರ್ಯಾಯಗಳ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತದೆ ಎಂದು ಕಾಗೋಡು ತಿಳಿಸಿದರು.

ತೋಟಗಾರಿಕೆ ಇಲಾಖೆ ವಿತರಣೆ ಮಾಡುವ ಕಾಳು ಮೆಣಸಿನ ಗಿಡ ಕಳಪೆಯಾಗಿರುವ ಬಗ್ಗೆ ಮಾತನಾಡಿದ ತಾಪಂ ಉಪಾಧ್ಯಕ್ಷ ಕೆ.ಎಚ್‌. ಪರಶುರಾಮ್‌, ಕಾಳುಮೆಣಸಿನ ಗಿಡ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ. ಒಂದೂವರೆ ಲಕ್ಷ ಗಿಡಗಳನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ ನರ್ಸರಿಯಲ್ಲಿ 10 ಸಾವಿರ ಗಿಡ ಕೂಡ ಇಲ್ಲ. ಖಾಸಗಿಯವರಲ್ಲಿ 7 ರೂ.ಗೆ ಆರೋಗ್ಯವಂತ ಗಿಡ ಸಿಕ್ಕರೆ, ಒಂದು ಪ್ಯಾಕ್‌ನಲ್ಲಿ ನಾಲ್ಕು ಕಡ್ಡಿಗಳನ್ನು ಹೊಂದಿರುವ ಇಲಾಖಾ ಪ್ಯಾಕ್‌ಗೆ 16 ರೂ. ವೆಚ್ಚ ಕೇಳಲಾಗುತ್ತಿದೆ. ಕೋಟ್ಯಂತರ ರೂಪಾಯಿ ಪಾಲಿ ಹೌಸ್‌ ಮೊದಲಾದ ಸೌಲಭ್ಯ ಕೊಡಲಾಗಿದ್ದರೂ ರೈತರಿಗೆ ಅನುಕೂಲವಾಗಿಲ್ಲ ಎಂದು ದೂರಿದರು.

ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ದೊಡ್ಡಮಟ್ಟದ ಗೋಲ್‌ಮಾಲ್‌ ನಡೆಯುತ್ತಿರುವ ಬಗ್ಗೆ ತಾಪಂ ಅಧ್ಯಕ್ಷ ಹಕ್ರೆ, ಸಾಗರ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಪಡವಗೋಡು ಸುಬ್ರಾವ್‌ ಇನ್ನಿತರರು ಎತ್ತಿದ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿದ ಕಾಗೋಡು, ಇದು ಈಗ ನನ್ನ ಗಮನಕ್ಕೆ ಬಂದಿದೆ. ಕಳೆದ ವರ್ಷ ನಮ್ಮ ತಾಲೂಕಿನಲ್ಲಿ 98 ಲಕ್ಷ ರೂ. ರೈತರು ವಿಮೆ ಪಾವತಿ ಮಾಡಿದ್ದು, ಕೇವಲ ನಾಲ್ಕು ಗ್ರಾಪಂಗೆ 63 ಲಕ್ಷ ರೂ. ಪರಿಹಾರ ಬಂದಿದೆ. ವಿಮೆ ಕಡ್ಡಾಯ ಮಾಡಿರುವ ಸರ್ಕಾರದ ಆದೇಶ, ವಿಮಾ ನಿಯಮಗಳು, ರೈತರಿಗಾದ ವಂಚನೆ ಕುರಿತಾಗಿ ಸಮಗ್ರ ಚರ್ಚೆ ನಡೆಸಿ ನನಗೆ ವರದಿ ಕೊಡಿ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಕಲ್ಲಪ್ಪ ಅವರಿಗೆ ಸೂಚನೆ ನೀಡಿದರು.

ಜಿಪಂ ಸದಸ್ಯರಾದ ಕಾಗೋಡು ಅಣ್ಣಪ್ಪ, ಅನಿತಾ ಕುಮಾರಿ ಇನ್ನಿತರರು ಇದ್ದರು. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ