ದಿಢೀರ್ ಕಾರ್ಯಾಚರಣೆ : ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭಿಕ್ಷುಕರ ರವಾನೆ
Team Udayavani, Apr 28, 2021, 9:03 PM IST
ಶಿವಮೊಗ್ಗ: ಬುಧವಾರ ದಿಢೀರ್ ಕಾರ್ಯಾಚರಣೆ ನಡೆಸಿದ ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿ ನಗರದಾದ್ಯಂತ ನಿರ್ಗತಿಕರನ್ನು ಪರಿಹಾರ ಕೇಂದ್ರಕ್ಕೆ ರವಾನಿಸಿದರು.
ಕಳೆದ ಕೆಲ ದಿನಗಳಿಂದ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಗತಿಕರ ಸಂಖ್ಯೆ ಹೆಚ್ಚಾಗಿತ್ತು. ಇಂದು ( ಏ್ರಪಿಲ್ 28) ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ನಿರ್ಗತಿಕರು ಹಾಗೂ ಭಿಕ್ಷುಕರನ್ನು ಕರೆದೊಯ್ದರು.
ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ನಿರ್ಗತಿಕರು ಇರುವುದನ್ನು ಗಮನಿಸಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್, ಅವರನ್ನೆಲ್ಲ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಗುರುರಾಜ್ ಅವರಿಗೆ ಇದರ ಜವಾಬ್ದಾರಿ ನೀಡಿದ್ದರು. ನಿರ್ಗತಿಕರನ್ನು ಗುರುತಿಸಿದ ಗುರುರಾಜ್ ಅವರು ಪರಿಹಾರ ಕೇಂದ್ರಕ್ಕೆ ಮಾಹಿತಿ ನೀಡಿ, ಕಾರ್ಯಾಚರಣೆ ನಡೆಸಿದರು. ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣ, ಬಿ.ಹೆಚ್.ರಸ್ತೆ, ಮಹಾನಗರ ಪಾಲಿಕೆ ಸಮೀಪ, ನೆಹರೂ ರೋಡ್ ಸೇರಿದಂತೆ ವಿವಿಧೆಡೆ ಕಾರ್ಯಚರಣೆ ನಡೆಸಲಾಯಿತು.