ರಾಜ್ಯದ ಕತ್ತಲು ನೀಗಿಸುತ್ತಿರುವ ಶರಾವತಿ

Team Udayavani, May 21, 2019, 6:00 AM IST


ಶಿವಮೊಗ್ಗ: ಅತಿ ಕಡಿಮೆ ದರಕ್ಕೆ ರಾಜ್ಯಕ್ಕೆ ವಿದ್ಯುತ್‌ ಪೂರೈಸುವ ಶರಾವತಿ ಜಲ ವಿದ್ಯುದಾಗಾರ ನಾಲ್ಕು ವರ್ಷದ ನಂತರ ನಿರಂತರವಾಗಿ ವಿದ್ಯುತ್‌ ಪೂರೈಸುತ್ತಿದೆ. ನಾಲ್ಕು ವರ್ಷ ನಂತರ ಡ್ಯಾಂ ಗರಿಷ್ಠ ಮಟ್ಟಕ್ಕೇರಿದ್ದರಿಂದ ವಿದ್ಯುತ್‌ ಉತ್ಪಾದನೆ ನಿರಂತರವಾಗಿ ನಡೆಯುತ್ತಿದೆ.

ಇಡೀ ರಾಜ್ಯಕ್ಕೆ ಶಾಖೋತ್ಪನ್ನ ಘಟಕ, ಸೋಲಾರ್‌, ಪವನ ವಿದ್ಯುತ್‌ ಕೇಂದ್ರಗಳು ಬೆಳಗ್ಗೆ ವಿದ್ಯುತ್‌ ಕೊಟ್ಟರೆ, ಶರಾವತಿ ಜಲ ವಿದ್ಯುದಾಗಾರ ರಾತ್ರಿ ಪಾಳಿಯಲ್ಲಿ ಎಡಬಿಡದೆ ಕೆಲಸ ಮಾಡುತ್ತಿದೆ. ಗೇರುಸೊಪ್ಪ, ಶರಾವತಿ, ಎಲ್ಪಿಎಚ್, ಎಂಜಿಎಚ್‌ನ 10 ಯುನಿಟ್‌ಗಳೂ ಸಕ್ರಿಯವಾಗಿದ್ದು ಗರಿಷ್ಠ ಪ್ರಮಾಣದ ಉತ್ಪಾದನೆ ನಡೆಯುತ್ತಿದೆ.

ರಾಜ್ಯದ ಪ್ರತಿದಿನದ ಬೇಡಿಕೆ 230 ಮಿಲಿಯನ್‌ ಯುನಿಟ್. ಅದರಲ್ಲಿ ಅಂದಾಜು 19 ಮಿಲಿಯನ್‌ ಯುನಿಟ್ ಅನ್ನು ಶರಾವತಿಯಿಂದ ಪೂರೈಸಲಾಗುತ್ತಿದೆ. ಸೋಲಾರ್‌ ಘಟಕಗಳು ಬೆಳಗ್ಗಿನ ಅವಧಿಯಲ್ಲಿ ಮಾತ್ರ ಕಾರ್ಯನಿರ್ವಹಿಸುವುದರಿಂದ ರಾತ್ರಿಗೆ ಅಗತ್ಯವಿರುವ ವಿದ್ಯುತ್‌ ಅನ್ನು ಶರಾವತಿ ಪೂರೈಸುತ್ತಿದೆ. ಗರಿಷ್ಠ 24 ಮಿಲಿಯನ್‌ ಯುನಿಟ್ವರೆಗೂ ವಿದ್ಯುತ್‌ ಪೂರೈಸುವ ಶಕ್ತಿಯನ್ನು ಇಲ್ಲಿನ ಜಲ ವಿದ್ಯುದಾಗಾರ ಹೊಂದಿದೆ.

2018-19ನೇ ಸಾಲಿನಲ್ಲಿ 4500 ಮಿಲಿಯನ್‌ ಯುನಿಟ್ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. ರಾಯಚೂರಿನ ಥರ್ಮಲ್ ಪವರ್‌ ಏನಾದರೂ ಕೈಕೊಟ್ಟರೆ ಶರಾವತಿ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. 2015ರಿಂದ 2018ರವರೆಗೆ ಅಣೆಕಟ್ಟು ಶೇ. 60ರಷ್ಟು ಮಾತ್ರ ಭರ್ತಿಯಾಗಿದ್ದರಿಂದ ಅಂದಾಜು 3 ಸಾವಿರದಿಂದ 3200 ಮಿಲಿಯನ್‌ ಯುನಿಟ್ವರೆಗೆ ಮಾತ್ರ ವಿದ್ಯುತ್‌ ಉತ್ಪಾದನೆ ಮಾಡಲಾಗಿತ್ತು. ಆದರೆ ಈ ಬಾರಿ ಎಲ್ಲ ವಿದ್ಯುತ್‌ ಕೇಂದ್ರಗಳು ಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅಧಿಕ ಒತ್ತಡ ಇಲ್ಲದೇ ಕೆಲಸ ನಡೆಯುತ್ತಿದೆ.

ಅತಿ ಕಡಿಮೆ ಬೆಲೆ: ಪ್ರತಿ ಯುನಿಟ್ ವಿದ್ಯುತ್‌ಗೆ 3ರಿಂದ 5 ರೂ. ವರೆಗೆ ಖರ್ಚು ಮಾಡಿ ಖರೀದಿ ಮಾಡುವ ರಾಜ್ಯ ಸರಕಾರ ಶರಾವತಿ ಜಲವಿದ್ಯುದಾಗಾರದಿಂದ ಕೇವಲ 44 ಪೈಸೆಗೆ ಒಂದು ಯುನಿಟ್ ವಿದ್ಯುತ್‌ ಖರೀದಿಸುತ್ತಿದೆ. ಗೇರುಸೊಪ್ಪದಿಂದ 1.66 ರೂ.ಗೆ ಖರೀದಿ ಮಾಡುತ್ತಿದೆ. ಅತಿ ಕಡಿಮೆ ಬೆಲೆಗೆ ಹಾಗೂ ಪರಿಸರಕ್ಕೆ ಯಾವುದೇ ಹಾನಿ ಇಲ್ಲದಂತೆ ವಿದ್ಯುತ್‌ ಪೂರೈಕೆ ಮಾಡುವ ರಾಜ್ಯದ ಏಕೈಕ ಜಲ ವಿದ್ಯುದಾಗಾರ ಇದಾಗಿದೆ.

ರಾಜ್ಯದಲ್ಲಿ ಪ್ರತಿ ದಿನ 200ರಿಂದ 230 ಮಿಲಿಯನ್‌ ಯುನಿಟ್ ವಿದ್ಯುತ್‌ ಬೇಡಿಕೆ ಇರುತ್ತದೆ. ಬೇಸಿಗೆಯಲ್ಲಿ ಗರಿಷ್ಠ ಪ್ರಮಾಣದ ಬೇಡಿಕೆ ಇದೆ. ಇದರ 10ನೇ ಒಂದು ಭಾಗದ ವಿದ್ಯುತ್‌ ಅನ್ನು ಶರಾವತಿ ಒಂದೇ ಪೂರೈಸುತ್ತದೆ. ಈ ವರ್ಷ ಮಳೆ ಉತ್ತಮವಾಗಿದ್ದರಿಂದ ಅವಧಿಗೆ ಮುನ್ನವೇ ಅಣೆಕಟ್ಟು ಭರ್ತಿಯಾಗಿತ್ತು.

ಜೂನ್‌ 30ರವರೆಗೂ ಲಭ್ಯ: ಲಿಂಗನಮಕ್ಕಿ ಜಲಾಶಯದಲ್ಲಿ ಲಭ್ಯವಿರುವ ನೀರಿನ ಆಧಾರದ ಮೇಲೆ ಜೂನ್‌ 30 ರವರೆಗೂ ದಿನಕ್ಕೆ ಅಂದಾಜು 19 ಮಿಲಿಯನ್‌ ಯುನಿಟ್ ವಿದ್ಯುತ್‌ ಉತ್ಪಾದನೆ ಮಾಡಬಹುದು ಎಂದು ಇಂಜಿನಿಯರ್‌ಗಳು ಅಂದಾಜಿಸಿದ್ದಾರೆ. ಈ ಬಾರಿಯೂ ಮುಂಗಾರು ಉತ್ತಮವಾಗಿ ಆರಂಭವಾದರೆ ಜೂನ್‌ ಕೊನೆ ವಾರದೊಳಗೆ ಜಲಾಶಯಕ್ಕೆ ನೀರು ಬರಲಿದೆ. ಇದರಿಂದ ಉತ್ಪಾದನೆ ಮುಂದುವರಿಸಬಹುದು. ಮೇ 11ರಂದು ಲಿಂಗನಮಕ್ಕಿ ಜಲಾಶಯದ ಮಟ್ಟ 1762.50 ಮೀಟರ್‌, ಒಳಹರಿವು 503 ಕ್ಯೂಸೆಕ್‌, ಹೊರಹರಿವು 6318.80 ಕ್ಯೂಸೆಕ್‌ ಇತ್ತು.

ಬೆಳಗ್ಗೆ ವೇಳೆ ಸೋಲಾರ್‌ ಹಾಗೂ ಪವನ ವಿದ್ಯುತ್‌ ಕೇಂದ್ರಗಳು ಬೇಡಿಕೆ ಪೂರೈಸುತ್ತಿವೆ. ಆದ್ದರಿಂದ ರಾತ್ರಿ ವೇಳೆಗೆ ಶರಾವತಿ ಜಲ ವಿದ್ಯುದಾಗಾರದಿಂದ ವಿದ್ಯುತ್‌ ಪೂರೈಸಲಾಗುತ್ತಿದೆ. ಲಭ್ಯವಿರುವ ನೀರಿನ ಪ್ರಕಾರ ಜೂನ್‌ 30ರವರೆಗೂ ಅಂದಾಜು 19 ಮಿಲಿಯನ್‌ ಯೂನಿಟ್‌ನಲ್ಲಿ ವಿದ್ಯುತ್‌ ಉತ್ಪಾದಿಸಬಹುದು.
-ಮೋಹನ್‌, ಚೀಫ್‌ ಇಂಜಿನಿಯರ್‌, ಶರಾವತಿ ಜಲ ವಿದ್ಯುದಾಗಾರ

-ಶರತ್‌ ಭದ್ರಾವತಿ


ಈ ವಿಭಾಗದಿಂದ ಇನ್ನಷ್ಟು

  • ಕಾಂಗ್ರೆಸ್‌ಗೆ 5ಕ್ಕಿಂತ ಕಡಿಮೆ ಸ್ಥಾನ ಬಂದರೆ ಸಿದ್ದು ನಾಯಕತ್ವಕ್ಕೆ ಕುತ್ತು? ಉ.ಕ. ಭಾಗದಲ್ಲಿ ಬಿಜೆಪಿ ಹೆಚ್ಚು ಗೆಲ್ಲದಿದ್ದರೆ ಬಿಎಸ್‌ವೈಗೆ ವೈಯಕ್ತಿಕ ಹಿನ್ನಡೆ ಬೆಂಗಳೂರು:...

  • ಬೆಂಗಳೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿ ಗಳಿಗೆ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳ ದರ್ಶನ ಮಾಡಿಸುವ "ಕರ್ನಾಟಕ ದರ್ಶನ'ಕ್ಕೆ ಎಲ್ಲ ಸಮುದಾಯದವರಿಗೂ ಅವಕಾಶ ಕಲ್ಪಿಸಲು...

  • ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಲಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಮೂರೂ ರಾಜಕೀಯ ಪಕ್ಷಗಳ...

  • ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಮೂಲಕ ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲು ನಿರ್ಧರಿಸಲಾಗಿದೆ...

  • ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂಲ ಕಾಂಗ್ರೆಸ್ಸಿಗರಲ್ಲ. ಅಧಿಕಾರಕ್ಕಾಗಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಜಿಗಿದವರು ಎಂದು ಸಚಿವ ಬಿ.ಶ್ರೀರಾಮುಲು...

ಹೊಸ ಸೇರ್ಪಡೆ