ಚೆಕ್‌ಪೋಸ್ಟ್ ಬಿಗಿಗೊಳಿಸಿ ಲಾಕ್‌ಡೌನ್ ಕಾಪಾಡಿಕೊಳ್ಳಿ
Team Udayavani, Apr 12, 2020, 4:33 PM IST
ಸೊರಬ: ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶಿಲನಾ ಸಭೆ ನಡೆಯಿತು
ಸೊರಬ: ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಮತ್ತಷ್ಟು ಬಿಗಿಗೊಳಿಸಿ ಹೊರಗಿನವರು ಬರದಂತೆ ನೋಡಿ ಕೊಳ್ಳುವುದರ ಮೂಲಕ ಲಾಕ್‌ಡೌನ್ ಯಥಾಸ್ಥಿತಿ ಮುಂದುವರಿಸುವಂತೆ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ನೋಡಿಕೊಳ್ಳಬೇಕು ಎಂದು ಶಾಸಕ ಕುಮಾರ್ ಬಂಗಾರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ರಂಗ ಮಂದಿರದಲ್ಲಿ ಕೋವಿಡ್-19 ಬಗ್ಗೆ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚೆಕ್‌ಪೋಸ್ಟ್ ಗಳಲ್ಲಿ ಮಹಾರಾಷ್ಟ್ರ ಹಾಗೂ ವಿವಿಧ ರಾಜ್ಯಗಳಿಂದ ಬರುವವರು ಹುಬ್ಬಳ್ಳಿ-ಧಾರವಾಡದಿಂದ ಬಂದಿರುವುದಾಗಿ ಸುಳ್ಳು ಹೇಳಿ ಚೆಕ್ ಪೋಸ್ಟ್ ಗಳಲ್ಲಿ ನುಸುಳಲು ಯತ್ನಿಸುತ್ತಿದ್ದಾರೆ. ಅಗಸನಹಳ್ಳಿ ಚೆಕ್‌ಪೋಸ್ಟ್ ಜಿಲ್ಲೆ ಹಾಗೂ ರಾಜ್ಯ ಹೆದ್ದಾರಿ ಸಂಪರ್ಕ ಹೊಂದಿದ್ದು, ಇಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಸಿಬ್ಬಂದಿ ಮುಂದುವರಿಸಬೇಕಿದೆ ಎಂದು ಎಂದು ವೃತ್ತ ನಿರೀಕ್ಷಕ ಮರಳಸಿದ್ದಪ್ಪ ಪರಿಸ್ಥಿತಿ ವಿವರಿಸಿದರು. ಇದಕ್ಕೆ ಶಾಸಕರು, ಚೆಕ್‌ಪೋಸ್ಟ್‌ನ್ನು ಮತ್ತಷ್ಟು ಬಿಗಿಗೊಳಿಸಿ ಯಾವುದೇ ವಾಹನ ಒಳ ಬರದಂತೆ ನೋಡಿಕೊಳ್ಳಿ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಮುಸ್ಲಿಂ ಹಾಗೂ ಕ್ರೈ„ಸ್ತ ಬಾಂಧವರು ಮಸೀದಿ ಹಾಗೂ ಚರ್ಚ್ ಗಳಿಗೆ ಹೋಗಿ ಪ್ರಾರ್ಥನೆ ಮಾಡುವ ಬದಲು ಮನೆಯಲ್ಲಿಯೇ ಇದ್ದು ಪ್ರಾರ್ಥನೆ ಮಾಡುವಂತೆ ಶಾಸಕರು ಮನವಿ ಮಾಡಿದರು. ತಾಲೂಕಿನಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ನೆರವಿನಿಂದ ಒಂದು ದಿನಕ್ಕೆ 50 ಜನರಂತೆ ವ್ಯವಸ್ಥಿತವಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ತುರ್ತು ನಿಗಾ ಘಟಕ ಕೆಲಸ ಮಾಡುತ್ತಿದ್ದು, ಪ್ರತಿದಿನ ವರದಿ ಪಡೆಯಲಾಗುತ್ತಿದೆ. ಎಂದು ತಹಶೀಲ್ದಾರ್ ಪಟ್ಟರಾಜಗೌಡ ತಿಳಿಸಿದರು.
ತಾಲೂಕಿನಲ್ಲಿ 130 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ಇದರ ಬಗ್ಗೆ ನಿಗಾ ಇಡಲಾಗಿದೆ ಎಂದು ಇಒ ನಂದಿನಿ ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳಿದ್ದರು