ಗ್ರಂಥಾಲಯಕ್ಕೆ ಆಸನದ್ದೇ ಸಮಸ್ಯೆ

Team Udayavani, Nov 3, 2019, 2:53 PM IST

ಶಿವಮೊಗ್ಗ: ಯುವಕರು ಪುಸ್ತಕ ಓದುತ್ತಿಲ್ಲ ಎಂಬ ಅಪವಾದಗಳ ನಡುವೆ ಇಲ್ಲೊಂದು ಲೈಬ್ರರಿ ಮಾದರಿಯಾಗಿ ನಿಂತಿದೆ. ಲೈಬ್ರರಿಯಲ್ಲಿ ಕೂರಲು ನೂಕು ನುಗ್ಗಲು ಕಾಣುವುದು ಬಹುಶಃ ಇಂದೊಂದೇ ಗ್ರಂಥಾಲಯದಲ್ಲಿ ಇರಬಹುದು. ಓದುಗರಿಗೆ ಪ್ರಿಯವಾದ ಗ್ರಂಥಾಲಯವಾದರೂ ಮೌಲಸೌಕರ್ಯ ಸಮಸ್ಯೆಯನ್ನೇ ಹೊದ್ದು ಮಲಗಿದೆ.

ನಗರದ ಗಾಂಧಿ ಪಾರ್ಕ್‌ ಬಳಿ ಇರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಕಿಕ್ಕಿರಿದು ವಿದ್ಯಾರ್ಥಿಗಳು, ವಯಸ್ಕರು, ವೃದ್ಧರು ಸೇರಿರುತ್ತಾರೆ. ಯಾವಾಗಲೂ ಚಟುವಟಿಕೆಯಿಂದ ಕೂಡಿರುವ ಈ ಗ್ರಂಥಾಲಯಕ್ಕೆ ಪ್ರತಿ ದಿನ ಭೇಟಿ ಕೊಡುವವರ ಸಂಖ್ಯೆ 1500ಕ್ಕೂ ಹೆಚ್ಚು. ಇಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆ ಮಾತ್ರ 200ರ ಅಸುಪಾಸು. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳು ಇಲ್ಲಿರುವುದರಿಂದ ಬೇರೆ ಊರು, ತಾಲೂಕುಗಳಿಂದ ಇಲ್ಲಿ ಬಂದು ಓದುತ್ತಾರೆ. ಬೆಳಗ್ಗೆ 8ಕ್ಕೆ ಬಂದು ರಾತ್ರಿ 8ಕ್ಕೆ ವಾಪಸ್‌ ಹೋಗುವವರೂ ಇದ್ದಾರೆ. ಇಲ್ಲಿ ಓದಿದ ಸಾವಿರಾರು ಮಂದಿ ಪಿಡಿಒ, ಎಸ್‌ ಡಿಎ, ಎಫ್‌ಡಿಎ, ಪೊಲೀಸ್‌ ಕಾನ್ಸ್‌ಟೇಬಲ್‌ ಕೂಡ ಆಗಿದ್ದಾರೆ. ಇಷ್ಟೊಂದು ಬೇಡಿಕೆ ಇರುವ ಗ್ರಂಥಾಲಯದ ಮುಖ್ಯ ಕೊರತೆ ಆಸನ.

ಪ್ರತಿ ಬೆಳಗ್ಗೆ 8.25ಕ್ಕೆ ಗ್ರಂಥಾಲಯ ತೆರೆಯಲಿದ್ದು 8ಗಂಟೆಗೆ ಬಂದು ವಿದ್ಯಾರ್ಥಿಗಳು ಒಳ ಹೋಗಲು ಕ್ಯೂನಲ್ಲಿ ನಿಲ್ಲುತ್ತಾರೆ. ಸೀಟು ಸಿಗದೆ ಪ್ರತಿ ದಿನ 50ರಿಂದ 100 ಮಂದಿ ವಾಪಸ್‌ ಹೋಗುತ್ತಾರೆ. ಪ್ರತಿ ದಿನ ಇದೇ ಪರಿಸ್ಥಿತಿ ಹಲವು ವರ್ಷಗಳಿಂದ ಹೆಚ್ಚುವರಿ ಕೊಠಡಿ ಬೇಡಿಕೆ ಇದ್ದು ಈವರೆಗೂ ಈಡೇರಿಲ್ಲ. ಶಿವಮೊಗ್ಗ ಸ್ಮಾರ್ಟ್‌ಸಿಟಿ ಅನುದಾನದಲ್ಲಿ ವಚ್ಯುವಲ್‌ ಲೈಬ್ರರಿ ಮಾಡುವ ಭರವಸೆ ಸಿಕ್ಕಿದ್ದು ಕಟ್ಟಡದ ಭರವಸೆ ಹಾಗೆಯೇ ಉಳಿದಿದೆ. ಸುಮಾರು 500 ಜನ ವಿದ್ಯಾರ್ಥಿಗಳು ಕೂರಲು ಸ್ಥಳಾವಕಾಶ ಇರುವ ಕಟ್ಟಡಕ್ಕೆ ಅನೇಕ ಬಾರಿ ಮನವಿ ಮಾಡಲಾಗಿದೆ.

ಮಹಾನಗರ  ಲೆಕ್ಕಕಷ್ಟೇ ಮಕ್ಕಳ ಲೈಬ್ರರಿ ಮಕ್ಕಳಿಗಾಗಿಯೇ ಒಂದು ಕೊಠಡಿಯನ್ನು ಮೀಸಲಿಡಲಾಗಿದ್ದು ಅಲ್ಲಿ ಈಗ ಮಹಿಳಾ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಮಕ್ಕಳ ಲೈಬ್ರರಿಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಸಮಯ ನಿಗದಿ ಮಾಡಿದ್ದು, ಈ ಸಮಯದಲ್ಲೇ ಮಕ್ಕಳು ಶಾಲೆಯಲ್ಲೇ ಇರುತ್ತಾರೆ. ಇನ್ನು ಲೈಬ್ರರಿಗೆ ಹೇಗೆ ಬರುತ್ತಾರೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ. ವಿದ್ಯಾರ್ಥಿಗಳ ಆರೋಪ

ಕೆಲವೊಮ್ಮೆ ಬುಕ್ಸ್‌ ಕೊಡಲು ಯಾರೂ ಇರುವುದಿಲ್ಲ. ಕೇಳಿದರೆ ಮೀಟಿಂಗ್‌ ಕಾರಣ ಹೇಳುತ್ತಾರೆ. ದಾಖಲೆಯಲ್ಲಿ ಮಾತ್ರ ಬುಕ್ಸ್‌ಗಳಿವೆ. ಹೆಚ್ಚು ಬೇಡಿಕೆ ಇರುವ ಪುಸ್ತಕಗಳು ಒಂದೆರಡು ಮಾತ್ರ ಇವೆ. ಉಳಿದಂತೆ ವಿದ್ಯಾರ್ಥಿಗಳಿಗೆ ಅಗತ್ಯವಿಲ್ಲದ ಪುಸ್ತಕಗಳೇ ಹೆಚ್ಚಾಗಿವೆ. ಈಗಿರುವ ಲೈಬ್ರರಿ ಹಿಂದೆ ಹೊಸ ಕಟ್ಟಡ ಕಟ್ಟಲಾಗಿದ್ದು ಅದಿನ್ನು ಉದ್ಘಾಟನೆಗೊಂಡಿಲ್ಲ. ಕೆಲ ಪ್ರತಿಕೆಗಳು ಮೂರು ಕಾಪಿ ಬಂದರೆ, ಉಳಿದವು ಒಂದೆರಡು ಬರುತ್ತವೆ. ಓದಲು ಪೇಪರ್‌ ಸಾಕಾಗೋದಿಲ್ಲ. ಮ್ಯಾಗಜಿನ್‌ ಗಳು ಸರಿಯಾಗಿ ಬರುವುದಿಲ್ಲ. ಲೈಟ್‌, ಫ್ಯಾನ್‌ ಸರಿ ಇಲ್ಲ ಎಂದು ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು ದೂರಿದ್ದಾರೆ. ಕುಡಿವ ನೀರು ತಾರತಮ್ಯ

ಓದಲು ಬರುವ ವಿದ್ಯಾರ್ಥಿಗಳಿಗೆ ಸಾಮಾನ್ಯ ನೀರನ್ನೆ ನೀಡಲಾಗುತ್ತಿದೆ. ಅ ಧಿಕಾರಿಗಳು ಮತ್ತು ಸಿಬ್ಬಂದಿ ಕ್ಯಾನ್‌ ನೀರು ಬಳಸುತ್ತಾರೆ. ಇಂತಹ ತಾರತಮ್ಯ ಏಕೆ ಎಂದು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಯೊಬ್ಬರು ಪ್ರಶ್ನಿಸಿದರು.

 

ಹೆಚ್ಚುವರಿ ಕಟ್ಟಡಕ್ಕೆ ಈಗಾಗಲೇ ಅನೇಕ ಬಾರಿ ಮನವಿ ಮಾಡಲಾಗಿದೆ. ಕೂರಲು ಜಾಗವಿಲ್ಲದೇ ನೂರಾರು ವಿದ್ಯಾರ್ಥಿಗಳು ವಾಪಸ್‌ ಹೋಗುತ್ತಾರೆ. ಮಹಾನಗರ ಪಾಲಿಕೆ ಅಥವಾ ಜಿಲ್ಲಾಡಳಿತ ಕನಿಷ್ಠ 500 ಮಂದಿ ಕೂರಲು ಕಟ್ಟಡದ ವ್ಯವಸ್ಥೆ ಮಾಡಿಕೊಟ್ಟರೆ ಸಾಕಷ್ಟು ಅನುಕೂಲವಾಗಲಿದೆ.  –ಪ್ರೇಮಲತಾ, ಚೀಫ್‌ ಲೆಬ್ರರಿಯನ್‌, ನಗರ ಕೇಂದ್ರ ಗ್ರಂಥಾಲಯ.

 

-ಶರತ್‌ ಭದ್ರಾವತಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ