ಕಲಾವಿದರ ಸ್ಮರಣೆಗೆ ಹಿರಿಯರ ನೆನಪು ವಿನೂತನ ಕಾರ್ಯಕ್ರಮ

Team Udayavani, Jul 11, 2019, 3:14 PM IST

ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ:
ಒಂದಿಲ್ಲೊಂದು ಚಟುವಟಿಕೆಗಳ ಮೂಲಕ ರಾಜ್ಯದ ಗಮನ ಸೆಳೆಯುತ್ತಿರುವ ಯಕ್ಷಗಾನ ಅಕಾಡೆಮಿ ನೂತನವಾಗಿ ಹಿರಿಯರ ನೆನಪು ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಮೂಲೆಗುಂಪಾಗಿದ್ದ, ಸಾಧನೆ ಮಾಡಿಯೂ ಮುಂಚೂಣಿಯಲ್ಲಿ ಕಾಣದವರನ್ನು ಮರಳಿ ನೆನಪಿಸುವ ಕಾರ್ಯಕ್ಕೆ ಯೋಜನೆ ರೂಪಿಸಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಎಂದು ಬಯಲಾಟ ಅಕಾಡೆಮಿಯಿಂದ ಪ್ರತ್ಯೇಕಗೊಂಡ ಬಳಿಕ ಅನೇಕ ಮಾದರಿ ಕಾರ್ಯವನ್ನು ಯಕ್ಷಗಾನ ಅಕಾಡೆಮಿ ನಡೆಸುತ್ತಿದೆ. ಅಕಾಡೆಮಿಯು ಬಡಗು, ಬಡಾ ಬಡಗು, ಮೂಡಲಪಾಯ, ಘಟ್ಟದ ಕೋರೆ, ತೆಂಕು, ತಾಳಮದ್ದಲೆ, ಹಿಮ್ಮೇಳ, ಮುಮ್ಮೇಳದಲ್ಲಿ ಕೆಲಸ ಮಾಡುತ್ತಿರುವ ಕಲಾವಿದರನ್ನು ಉತ್ತೇಜಿಸುವಲ್ಲೂ ಮುಂದಿದೆ.

ಏನಿದು ಸ್ಮರಣೆ?: ಯಕ್ಷಗಾನದಲ್ಲಿ ಆಗಿ ಹೋದ ಹಿರಿಯ ಸಾಧಕರ, ಎಲೆಮರೆಯ ಕಾಯಿಯಂಥ ಕಲಾವಿದರುಗಳನ್ನು ಗುರಿತಿಸಿ ನೆನಪಿಸುವ ಕಾರ್ಯವಿದು. ಕಲೆಯನ್ನು ಪ್ರೀತಿಸಿ, ಅದರ ಪೋಷಕ ಪಾತ್ರಧಾರಿಗಳ, ಹಿಮ್ಮೇಳ, ಮೇಕಪ್‌ ಕಲಾವಿದರ ಕುರಿತು ಸಂಸ್ಮರಣೆಯ ವಿಶಿಷ್ಟ ಕಾರ್ಯಕ್ರಮ ಇದಾಗಿದೆ.

ಇಡೀ ರಾಜ್ಯದಲ್ಲಿ ಇಂಥ ಕಾರ್ಯಕ್ರಮವನ್ನು ಗ್ರಾಮೀಣ ಹಾಗೂ ನಗರ ಕೇಂದ್ರಿತವಾಗಿ ನಡೆಸಲು ಯಕ್ಷಗಾನ ಅಕಾಡೆಮಿ ನಿರ್ಧರಿಸಿದೆ. ಯಕ್ಷಗಾನವನ್ನು ಪ್ರೀತಿಸಿ, ಅದರ ಉಳಿವಿಗೆ ತಮ್ಮ ಜೀವನವನ್ನೇ ಶ್ರಮಿಸಿದ ಹಾಗೂ ಸೀಮಿತ ಪ್ರದೇಶದಲ್ಲಿ ಪರಿಚಯಗೊಂಡ ಕಲಾವಿದರನ್ನು ಮುಖ್ಯ ವಾಹಿನಿಯಲ್ಲಿ ನೆನಪಿಸಿಕೊಳ್ಳುವುದು ಇದರ ಮೂಲ ಆಶಯ.

ಅಕಾಡೆಮಿ ಪಾಲೇನು?: ನೂತನ ಯೋಜನೆಗೆ ಯಕ್ಷಗಾನ ಅಕಾಡೆಮಿ ಕಲಾಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ನಡೆಸುವ ಕಾರ್ಯಕ್ರಮಗಳಿಗೆ ಹತ್ತು ಸಾವಿರ ರೂ.ಗಳ ನೆರವನ್ನು ಅಕಾಡೆಮಿ ಕೊಡಲಿದೆ. ಬೆಂಗಳೂರಿನ ಜೆ.ಸಿ.ರಸ್ತೆಯ ಕನ್ನಡ ಭವನದಲ್ಲಿರುವ ಅಕಾಡೆಮಿಗೆ ಜು.25 ರೊಳಗೆ ಅರ್ಜಿ ಸಲ್ಲಿಸುವ ಮೂಲಕ ಅಕಾಡೆಮಿ ಕಾರ್ಯಕ್ಕೆ ಕಲಾ ಸಂಸ್ಥೆಗಳೂ ಸಹಭಾಗಿತ್ವ ಕೊಡಬಹುದಾಗಿದೆ.

ಕಲಾ ಸಂಘಟನೆಗಳು ಯಾವ ಕಲಾವಿದರ ನೆನಪಿನ ಕಾರ್ಯಕ್ರಮ ಮಾಡುತ್ತಾರೆ? ಅಂಥ ಸ್ಮರಣಾರ್ಹ ಸಾಧಕರ ಅವರ ವಿವರಗಳೇನು? ಹಿರಿಯರ ನೆನಪಿನಲ್ಲಿ ಯಾರೆಲ್ಲ ಪಾಲ್ಗೊಳ್ಳುತ್ತಾರೆ? ಎಂಬ ಮಾಹಿತಿಯನ್ನೂ ನೀಡಬೇಕಾಗಿದೆ. ಸ್ಮರಣೆ ಬಳಿಕ ಅವರ ನೆನಪಿನಲ್ಲಿ ತಾಳಮದ್ದಲೆ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಸಬೇಕಾಗಿದೆ.

ಯಾಕಾಗಿ ಬೇಕು?: ಯಕ್ಷಗಾನದ ಕಲೆಯ ಉಳಿವಿಗೆ ಹಿರಿಯರು ಪ್ರೀತಿಯಿಂದ ದುಡಿದಿದ್ದರಿಂದಲೇ ಇಂದು ಈ ಕಲೆ ಜೀವಂತವಾಗಿದೆ. ಹಿಂದೆಲ್ಲ ಬಣ್ಣದ ಪೆಟ್ಟಿಗೆ ಹೊತ್ತು, ಊರೂರು ಅಲೆದು ಪ್ರೇಕ್ಷಕರಲ್ಲಿ ಯಕ್ಷಗಾನದ ‘ಪ್ರೀತಿ’ ಬೆಳೆಸಿದವರ ಕೊಡುಗೆ ಸಣ್ಣದಲ್ಲ.

ಪೋಷಕ ಪಾತ್ರಧಾರಿಯಾಗಿ, ಚಂಡೆ, ಮದ್ದಲೆ ವಾದಕರಾಗಿ, ವೇಷದ ಪೆಟ್ಟಿಗೆ ನಿರ್ವಾಹಕರಾಗಿ ಅವರು ಮಾಡಿದ ಯಕ್ಷಗಾನ ಕಲಾ ಸೇವೆಯನ್ನು ನೆನಪಿಸಿಕೊಳ್ಳುವದು ಹಾಗೂ ಯಕ್ಷಗಾನ ಅಕಾಡೆಮಿ ಅಂಥವರ ಕೊಡುಗೆಯನ್ನು ಇಂದಿನ ತಲೆಮಾರಿಗೂ ತಿಳಿಸುವುದು ಜವಾಬ್ದಾರಿ ಕಾರ್ಯ ಎಂದೇ ಹೊಸ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದೆ.

ಎಲ್ಲೂ ದಾಖಲೆ ಆಗದ ಕಲಾವಿದರ ಹಿರಿಯ ನೆನಪು ಮಾಡಿಕೊಳ್ಳುವುದು ಅಗತ್ಯ, ಅನಿವಾರ್ಯ. ಅಂಥವರ ಕೊಡುಗೆ ಕಾರಣದಿಂದ ಯಕ್ಷಗಾನ ಉಳಿದಿದೆ, ಬೆಳೆದಿದೆ.
ಮಹಾಬಲೇಶ್ವರ ಇಟಗಿ,
ಸವ್ಯಸಾಚಿ ಕಲಾವಿದ

ಯಾವುದೇ ಪ್ರತಿಫಲದ ಆಸೆ ಇಲ್ಲದೇ ಕಲೆಯ ಮೇಲಿನ ಪ್ರೀತಿಯಿಂದ ಸೇವೆ ಸಲ್ಲಿಸಿ ಮರೆಯಾದವರ ನೆನಪಿನ ಕಾರ್ಯಕ್ರಮ. ಯಕ್ಷಗಾನದ ಭವ್ಯ ಭವನದ ನಿರ್ಮಾಣದಲ್ಲಿ ಇಟ್ಟಿಗೆಗಳಂತೆ ಕೆಲಸ ಮಾಡಿದವರು. ಅಂಥರವ ನೆನಪು ಅಕ್ಷರ ರೂಪದಲ್ಲಿ ದಾಖಲಾಗಬೇಕೆಂಬ ಅಪೇಕ್ಷೆ.
ಪ್ರೊ| ಎಂ.ಎ.ಹೆಗಡೆ,
ಅಧ್ಯಕ್ಷರು ಯಕ್ಷಗಾನ ಅಕಾಡೆಮಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ