ಶತಮಾನದ ಸೇತುವೆಗೆ ಕಾಯಕಲ್ಪ

ಲೋಕೋಪಯೋಗಿ ಇಲಾಖೆಯಿಂದ ಸೇತುವೆ ಅಭಿವೃದ್ಧಿಗೆ ಯೋಜನೆ

Team Udayavani, Aug 24, 2019, 12:47 PM IST

ಶಿವಮೊಗ್ಗ: ತುಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ 148 ವರ್ಷಗಳ ಹಳೆಯ ಸೇತುವೆ.

ಶಿವಮೊಗ್ಗ: ಇನ್ನೆರಡು ವರ್ಷ ಕಳೆದರೆ ಶಿವಮೊಗ್ಗದ ಈ ಐತಿಹಾಸಿಕ ಸೇತುವೆಯು ಒಂದೂವರೆ ಶತಮಾನ ಪೂರೈಸಲಿದೆ. 148 ವರ್ಷದಿಂದ ಜನರಿಗೆ ಸೇವೆ ನೀಡುತ್ತಿರುವ ಈ ಸೇತುವೆ ಈಚೆಗೆ ಸುರಿದ ಮಳೆಗೆ ನಲುಗುತ್ತಿದ್ದು ಲೋಕೋಪಯೋಗಿ ಇಲಾಖೆ ಸೇತುವೆ ಇನ್ನಷ್ಟು ವರ್ಷ ಬಾಳಿಕೆ ಬರುವಂತೆ ಮಾಡಲು ಯೋಜನೆ ರೂಪಿಸಿದೆ. ಮಳೆ ಸಂಪೂರ್ಣ ನಿಂತರೆ ಕೆಲಸ ಆರಂಭವಾಗಲಿದೆ.

ಆಗಸ್ಟ್‌ ಆರಂಭದಿಂದ ಸುರಿದ ಭಾರಿ ಮಳೆಗೆ ತುಂಗಾ ನದಿ ಮೈದುಂಬಿ ಹರಿಯಿತು. ಪ್ರತಿ ದಿನ ಅಂದಾಜು 80ರಿಂದ 1 ಲಕ್ಷ ಕ್ಯೂಸೆಕ್‌ವರೆಗೂ ನೀರು ಸೇತುವೆ ದಾಟುತಿತ್ತು. ಇಂತಹ ಒತ್ತಡದ ಸಂದರ್ಭದಲ್ಲಿ ಸೇತುವೆ ಹಾಗೂ ರಸ್ತೆ ನಡುವೆ ಬಿರುಕು ಕಾಣಿಸಿಕೊಂಡಿದ್ದ ಪರಿಣಾಮ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಬೆಂಗಳೂರಿನಿಂದ ಬಂದ ತಜ್ಞರ ತಂಡವು ಸೇತುವೆ ಬಿರುಕು ಪರಿಶೀಲಿಸಿ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದೆ. ಅದೇ ರೀತಿ ಸೇತುವೆ ದೀರ್ಘ‌ಕಾಲ ಬಾಳಿಕೆಗೆ ಒಂದಷ್ಟು ಸಲಹೆ, ಸೂಚನೆ ನೀಡಿದೆ.

ಜಾಕೆಟ್, ಮೈಕ್ರೋ ಕಾಂಕ್ರೀಟ್: ಸೇತುವೆಯ ಆಧಾರ ಸ್ತಂಭದ ಗಾರೆಯು ಕೆಲವು ಕಡೆ ಉದುರಿಹೋಗಿದ್ದು ಇಟ್ಟಿಗೆ ಕಾಣುತ್ತಿದೆ. ಮತ್ತೆ ನೀರು ಹೆಚ್ಚಾದರೆ ಈ ಇಟ್ಟಿಗೆಗಳು ಕರಗಿ ಪಿಲ್ಲರ್‌ಗಳಿಗೆ ಆತಂಕ ತರುವ ಸಾಧ್ಯತೆ ಇದೆ. ಅದಕ್ಕಾಗಿ ಪಿಲ್ಲರ್‌ಗಳನ್ನು ರಕ್ಷಿಸಲು ಜಾಕೆಟ್ ಅಳವಡಿಸಲು ಇಲಾಖೆ ಮುಂದಾಗಿದೆ. ಪಿಲ್ಲರ್‌ ಸುತ್ತಲೂ ಕಬ್ಬಿಣದ ಕೋಟ್ ರಚಿಸಿ ಅದಕ್ಕೆ ಮೈಕ್ರೋ ಕಾಂಕ್ರೀಟ್ ಹಾಕಿ ಕವರ್‌ ಮಾಡಲಾಗುತ್ತದೆ. ಇದು ಸಾಮಾನ್ಯ ಕಾಂಕ್ರೀಟ್ಗಿಂತ ಉತ್ತಮವಾಗಿದ್ದು ಪಿಲ್ಲರ್‌ಗಳು ಇನ್ನಷ್ಟು ವರ್ಷ ಬಾಳಿಕೆ ಬರಲಿವೆ. ಪಿಲ್ಲರ್‌ಗಳು ಭದ್ರವಾಗಿದ್ದಷ್ಟು ದಿನ ಸೇತುವೆ ಆಯಸ್ಸು ವೃದ್ಧಿಸಲಿದೆ.

ಅದೇ ರೀತಿ ಸೇತುವೆ ತಡೆಗೋಡೆಗಳು ಸಹ ಶಿಥಿಲಗೊಂಡಿವೆ. ಸೇತುವೆ ಮೇಲೆ ದೊಡ್ಡದೊಡ್ಡ ಗಿಡಗಂಟೆಗಳು ಬೆಳೆದು ಇಟ್ಟಿಗೆಗಳು ಶಕ್ತಿ ಕಳೆದುಕೊಂಡಿವೆ. ಇದನ್ನು ಬಲಪಡಿಸಲು ಗ್ರೌಟಿಂಗ್‌ ತಂತ್ರಜ್ಞಾನ ಬಳಸಿ ಸಂದಿ, ಮೂಲೆಗಳಲ್ಲಿ ಕೆಮಿಕಲ್ ಮಿಶ್ರಣ ಸೇರಿಸಲಾಗುತ್ತಿದೆ. ಈ ಮಿಶ್ರಣವು ಸಣ್ಣ ಬಿರುಕುಗಳನ್ನು ಮುಚ್ಚುವುದಲ್ಲದೇ ಅಲ್ಲೇ ಗಟ್ಟಿಕೊಳ್ಳುತ್ತದೆ. ಎಷ್ಟೋ ಕಡೆ ಮಣ್ಣು ಉದುರಿದ್ದು ಬಲವಾಗಿ ಗುದ್ದಿದರೆ ಉದುರಿ ಹೋಗುತ್ತದೆ. ಈಚೆಗೆ ಟ್ರ್ಯಾಕ್ಟರ್‌ ಟ್ರಾಲಿ ಗುದ್ದಿ ಎರಡು ಮೀಟರ್‌ನಷ್ಟು ತಡೆಗೋಡೆ ಮರಿದುಬಿದ್ದಿತ್ತು. ಗ್ರೌಟಿಂಗ್‌ ಕಾಮಗಾರಿ ತುರ್ತಾಗಿ ನಡೆಯಬೇಕಿದ್ದು ನೀರು ಕಡಿಮೆಯಾಗುವುದನ್ನೇ ಅಧಿಕಾರಿಗಳು ಕಾಯುತ್ತಿದ್ದಾರೆ. ಸೇತುವೆ ಹೊರಬದಿಯ ಕಾಮಗಾರಿಗೆ ಸೇತುವೆ ತಳಭಾಗದಿಂದಲೇ ಮೇಲೆ ಬಂದು ಕಾಮಗಾರಿ ನಡೆಸಬೇಕಿದೆ. ಮಳೆ ಸಂಪೂರ್ಣ ನಿಂತ ಮೇಲೆ ಹಂತಹಂತವಾಗಿ ಕಾಮಗಾರಿಗಳು ನಡೆಯಲಿವೆ.

15 ದಿನದಲ್ಲಿ ಸಂಚಾರಕ್ಕೆ ಮುಕ್ತ: ಸೇತುವೆ ಹಾಗೂ ರಸ್ತೆ ಮಧ್ಯೆ ಬಿರುಕು ಬಿಟ್ಟಿರುವ ಕಡೆ ಅಗೆದು ಉನ್ನತ ಮಟ್ಟದ ಕಾಂಕ್ರೀಟ್ ತುಂಬಿಸಲಾಗಿದೆ. ಇದು ಕ್ಯೂರಿಂಗ್‌ ಆಗಲು ಕನಿಷ್ಠ 15 ದಿನ ಬೇಕಿದ್ದು ಇದನ್ನು ಪರಿಶೀಲಿಸಿ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದಾರೆ.

1.75 ಲಕ್ಷ ರೂ. ವೆಚ್ಚದ ಸೇತುವೆ!
ಪ್ರಸ್ತುತ ಇಂತಹ ಸೇತುವೆ ನಿರ್ಮಿಸಲು ಕನಿಷ್ಠ 20 ಕೋಟಿ ಬೇಕು. 1968ರಲ್ಲಿ ಮೈಸೂರು ಸಂಸ್ಥಾನದಲ್ಲಿ ಬ್ರಿಟಿಷ್‌ ಕಮಿಷನರ್‌ ಆಗಿದ್ದ ಜೆ.ಡಿ.ಗೋರ್ಡಾನ್‌ ಎಂಬುವನು ಇಲ್ಲಿ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಾನೆ. ನಿರ್ಮಾಣ ಕಾರ್ಯ ನೋಡಿಕೊಳ್ಳಲು ಕರ್ನಲ್ ಸ್ವೋಕ್ಸ್‌ ಎಂಬಾತನನ್ನು ನೇಮಕ ಮಾಡಲಾಗುತ್ತದೆ. 1868ರಲ್ಲಿ ಆರಂಭವಾದ ಕಾಮಗಾರಿ 1871ಕ್ಕೆ ಮುಕ್ತಾಯವಾಗುತ್ತದೆ. 53.38 ಮೀಟರ್‌ ಎತ್ತರ, 761.25 ಅಡಿ ಉದ್ದ, 26.65 ಮೀಟರ್‌ ಅಗಲ ಇರುವ ಈ ಸೇತುವೆ 16 ಕಮಾನುಗಳನ್ನು ಹೊಂದಿದೆ. ಪ್ರತಿಯೊಂದು ಕಮಾನು 53.13 ಅಡಿ ಅಗಲವಿದೆ. ಇದರ ಒಟ್ಟಾರೆ ವೆಚ್ಚ 1.75 ಲಕ್ಷ. ಕೆಂಪುಇಟ್ಟಿಗೆ ಹಾಗೂ ಗಾರೆಯಿಂದ ಇದನ್ನು ನಿರ್ಮಿಸಲಾಗಿದೆ. ಈ ಸೇತುವೆ ನಿರ್ಮಾಣ ಆಗುವವರೆಗೂ ಶಿವಮೊಗ್ಗದ ಒಳಗೆ ಪ್ರವೇಶಿಸಲು ತೆಪ್ಪ ಬಳಸಲಾಗುತಿತ್ತು.

ಸೇತುವೆಯನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಪಿಲ್ಲರ್‌ಗಳಿಗೆ ಜಾಕೆಟ್ ಹಾಗೂ ಮೈಕ್ರೋ ಕಾಂಕ್ರೀಟ್ ಅಳವಡಿಸಲಾಗುವುದು. ಅದೇ ರೀತಿ ಗೋಡೆಗಳಿಗೆ ಕೌಟಿಂಗ್‌ ತಂತ್ರಜ್ಞಾನ ಬಳಸಿಕೊಳ್ಳಲಾಗುವುದು. ನೀರು ಸಂಪೂರ್ಣ ಬತ್ತಿದ ಮೇಲೆ ಕಾಮಗಾರಿ ನಡೆಸಲಾಗುವುದು. ಸೇತುವೆ ರಸ್ತೆ ಮಧ್ಯದ ಬಿರುಕನ್ನು ಮುಚ್ಚಲಾಗಿದ್ದು 15 ದಿನದಲ್ಲಿ ಸಂಚಾರಕ್ಕೆ ಮುಕ್ತವಾಗಬಹುದು.
ಎಸ್‌.ಎಂ. ಹರೀಶ್‌,
ಎಇಇ, ಲೋಕೋಪಯೋಗಿ ಇಲಾಖೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ