ಕಮರೂರಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

Team Udayavani, Sep 5, 2019, 11:07 AM IST

ಶಿವಮೊಗ್ಗ: ಸೊರಬ ತಾಲೂಕಿನ ಜಡೆ ಹೋಬಳಿಯ ಕಮರೂರಲ್ಲಿ ಪತ್ತೆಯಾಗಿರುವ ಶಾಸನಗಳು.

ಶಿವಮೊಗ್ಗ: ಸೊರಬ ತಾಲೂಕಿನ ಜಡೆ ಹೊಬಳಿಯ ಕಮರೂರು ಗ್ರಾಮದಲ್ಲಿ ವಿಜಯನಗರ ಕಾಲದ ಸ್ಮಾರಕ ಶಿಲ್ಪಗಳ ಶಾಸನಗಳು ಪತ್ತೆಯಾಗಿವೆ.

ಒಂದೇ ಸ್ಮಾರಕದಲ್ಲಿ ಒಂದು ಕಡೆ ಶಾಸನ ಶಿಲ್ಪ ಹಾಗೂ ಇನ್ನೊಂದು ಕಡೆ ಶಾಸನವಿರುವುದು ಕಂಡುಬರುತ್ತದೆ. ಇದು ಸಿಸ್ಟ್‌ ಶಿಲೆಯಿಂದ ಕೆತ್ತಲ್ಪಟ್ಟಿದ್ದು ಒಂದೂವರೆ ಅಡಿ ಅಗಲ ಮೂರೂವರೆ ಅಡಿ ಉದ್ದವಿದೆ. ಒಂದು ಕಡೆ ಮೂರು ಪಟ್ಟಿಕಗಳಿಂದ ಕೂಡಿದ್ದು ಮೊದಲನೇ ಹಾಗೂ ಎರಡನೇ ಪಟ್ಟಿಕೆಯಲ್ಲಿ ಏಳು ಸಾಲಿನ ಶಾಸನವನ್ನು ನೋಡಬಹುದಾಗಿದೆ. ಹಿಂಭಾಗದಲ್ಲಿ ಒಂಬತ್ತು ಸಾಲಿನ ಶಾಸನವನ್ನು ನೋಡಬಹುದಾಗಿದೆ.

ಮೊದಲ ಪಟ್ಟಿಕೆಯಲ್ಲಿ ರಾಜ ಅಥವಾ ರಾಜ ಪ್ರಮುಖನು ಅಥವಾ ಸ್ಥಳೀಯ ಅಧಿಕಾರಿಯು ಪಲ್ಲಕ್ಕಿಯಲ್ಲಿ ಕುಳಿತಿದ್ದು ಎರಡು ಜನ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರುವುದು. ಒಬ್ಬನು ರಾಜ ಛತ್ರಿಯನ್ನು ಹಿಡಿದಿರುವುದು, ಮುಂಭಾಗದಲ್ಲಿ ಇನ್ನೊಬ್ಬನು ಕಮಂಡಲ ಹಿಡಿದು ಹೋಗುತ್ತಿರುವುದು ಕಂಡುಬರುತ್ತದೆ.

ಎರಡನೇ ಪಟ್ಟಿಕೆಯಲ್ಲಿ ಐದು ಜನ ಅಪ್ಸರೆಯವರು ತಮ್ಮ ತೋಳುಗಳ ಮೂಲಕ ಮರಣ ಹೊಂದಿದ ಪ್ರಮುಖನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಮೂರನೇ ಪಟ್ಟಿಕೆಯಲ್ಲಿ ಸ್ವರ್ಗಲೋಕದಲ್ಲಿ ಯತಿಯು ಶಿವಲಿಂಗ ಹಾಗೂ ನಂದಿಯನ್ನು ಪೂಜಿಸುತ್ತಿರುವುದು. ಮರಣ ಹೊಂದಿರುವನು ಅಂಜಲಿ ಮುದ್ರೆಯಲ್ಲಿ ಕುಳಿತಿರುವುದು ಮೇಲ್ಭಾಗದಲ್ಲಿ ಸೂರ್ಯಚಂದ್ರರನ್ನು ನೋಡಬಹುದು. ಅಂದರೆ ಸೂರ್ಯಚಂದ್ರರಿರುವರೆಗೆ ಈ ಶಾಸನ ಶಿಲ್ಪ ವ್ಯಕ್ತಿ ಶಾಶ್ವತ ಎಂದು ತಿಳಿಯಬಹುದಾಗಿದೆ.

ಈ ಶಾಸನವು ಗಣಪತಿ ಸ್ತುತಿಯಿಂದ ಆರಂಭಗೊಂಡಿದ್ದು ಕ್ರಿ.ಶ.1403 ರ ಅಂಗಿರಸ ಸಂವತ್ಸರದ ವೈಶಾಖ ಮಾಸ ಬಹುಳ8 ರ ಆರಂಭದಲ್ಲಿ ಹಾಕತಿಯಂಚಿ ನಾಯ್ಕರ ನಾಗೆಯ ಯಪ್ಪತ್ತ ನಾಯ್ಕರು ಸ್ವರ್ಗಸ್ಥರಾದಗ ಆತನ ಸಹೋದರ ಈ ಶಾಸನ ಶಿಲ್ಪವನ್ನು ಹಾಕಿಸಿರುವುದು ಕಂಡುಬರುತ್ತದೆ. ಇದು ವಿಜಯನಗರ ಅರಸ ಎರಡನೇ ಹರಿಹರನ ಕಾಲದ್ದಾಗಿದೆ.

ಹಿಂಭಾಗದ ಶಾಸನ: ಇದೇ ಶಾಸನ ಶಿಲ್ಪದ ಹಿಂಭಾಗದಲ್ಲಿ ಇನ್ನೊಂದು ಶಾಸನವು ಕಂಡುಬರುತ್ತದೆ. ಇದು ವಿಜಯನಗರ ಅರಸರ‌ ಕೊನೆಯ ಕಾಲದ್ದಾಗಿದೆ. ಶಾಸನದ ಮೇಲೆ ಶಂಖ, ಚಕ್ರ ಹಾಗೂ ನಾಮವನ್ನು ಕಾಣಬಹುದು. ಇದರ ಕೆಳಗೆ ಒಂಬತ್ತು ಸಾಲಿನ ಶಾಸನವನ್ನು ಕಾಣಬಹುದು.

ಈ ಶಾಸನದಲ್ಲಿ ಕಂಮರೂರ ಹನುಮಂತ ದೇವರಿಗೆ ಪೂಜಾ ವಿಧಿ- ವಿಧಾನಗಳನ್ನು ಸಂಪ್ರದಾಯಿಕವಾಗಿ ಮುಂದುವರಿಸಿಕೊಂಡು ಹೋಗಲು ಎರಡು ಹೊಲವನ್ನು ಈ ಹೊಲಗಳ ಭತ್ತ, ಅಡಕೆ ತೋಟ ಮೊದಲಾದವನ್ನು ಅನುಭವಿಸಿಕೊಂಡು ಹೋಗುವುದು. ಈ ಶಾಸನವನ್ನು ಯಾರಾದರೂ ಹಾಳು ಮಾಡಿದರೆ ಅವರ ಬಾಯಲ್ಲಿ ಹೆಂಡವನ್ನು ಹೊಯ್ಯುವುದು ಹಾಗೂ ಕತ್ತೆಯ ತುಣಿ (ಲಿಂಗ) ಯನ್ನು ಅವರ ಬಾಯಲ್ಲಿಡುವುದು ಎಂದು ಕೊನೆಯಲ್ಲಿ ಶಾಪಶಯವನ್ನು ಕೊಡಲಾಗಿದೆ.

ಎರಡು ಶಾಸನ ಶಿಲ್ಪಗಳ ಮಹತ್ವ: ಈ ಎರಡು ಶಾಸನಗಳು ವಿಜಯನಗರ ಕಾಲದವು ಆಗಿದ್ದು, ಇದರಲ್ಲಿ ಒಂದು ಶಾಸನ ರಾಜ ಪ್ರಮುಖ ಅಥವಾ ಸ್ಥಳಿಯ ಅಧಿಕಾರಿ ಸ್ವರ್ಗಸ್ಥನಾಗಿದ್ದರ ಬಗ್ಗೆ ತಿಳಿಸಿದರೆ ಇನ್ನೊಂದು ಶಾಸನವು ಹನುಮಂತ ದೇವರಿಗೆ ದಾನ ನೀಡಿರುವುದು ಕಂಡುಬರುತ್ತದೆ. ಇಲ್ಲಿ ಒಂದೇ ಕಲ್ಲಿನಲ್ಲಿ ಶೈವ ಹಾಗೂ ವೈಷ್ಣವ ಧರ್ಮದ ಶಾಸನವನ್ನು ಹಾಕಿಸಿರುವುದು ವಿಶೇಷವಾಗಿದೆ. ಎರಡು ಶಾಸನಗಳನ್ನು ಹಾಕಿಸಿರುವುದು ವಿಜಯನಗರ ಕಾಲದಲ್ಲಿ ಇವುಗಳ ಕಾಲದ ಅಂತರವು ಸುಮಾರು ಕಾಲವು 150 ವರ್ಷಗಳ ಅಂತರನ್ನು ಕಾಣಬಹುದು ಎಂದು ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಆರ್‌. ಶೇಜೇಶ್ವರ ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ