ಕುವೆಂಪು ವಿವಿ ಪ್ರವೇಶ ಪ್ರಕ್ರಿಯೆ ಆರಂಭ

ಮೊದಲ ದಿನವೇ ಶೇ. 85 ಸೀಟು ಭರ್ತಿ •ಸರತಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ

Team Udayavani, Jul 19, 2019, 1:26 PM IST

ಶಿವಮೊಗ್ಗ: ಕುವೆಂಪು ವಿವಿ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು.

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 30ಕ್ಕೂ ಹೆಚ್ಚು ವಿಭಾಗಗಳಿಗೆ ಗುರುವಾರ ನಡೆದ ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆಯಲ್ಲಿ ಶೇ. 85ರಷ್ಟು ಸೀಟುಗಳು ಮೊದಲ ದಿನವೇ ಭರ್ತಿಯಾಗಿವೆ.

ವಿಶ್ವವಿದ್ಯಾಲಯದ ಮುಖ್ಯ ಆವರಣ, ಸಹ್ಯಾದ್ರಿ ಕಾಲೇಜು, ಕಡೂರು ಪಿ.ಜಿ. ಕೇಂದ್ರ ಮತ್ತು 10ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲಾ ವಿಭಾಗಗಳಿಗೆ ಜು. 18, 19 ರಂದು ಕೌನ್ಸೆಲಿಂಗ್‌ ಮತ್ತು ಪ್ರವೇಶಾತಿ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು. ಮೊದಲ ದಿನವಾದ ಗುರುವಾರ ಮೆರಿಟ್ ಸೀಟುಗಳಿಗೆ ಪ್ರವೇಶಾತಿ ಪ್ರಕ್ರಿಯೆ ಯಾವುದೇ ತೊಡಕುಗಳಿಲ್ಲದೆ ನಡೆಯಿತು.

ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಮಾಹಿತಿ ಪ್ರಕಾರ ಸಂಜೆ 4 ಗಂಟೆಯ ಹೊತ್ತಿಗೆ ಶೇ. 85ರಷ್ಟು ಸೀಟುಗಳ ಪ್ರವೇಶಾತಿ ಸಂಪೂರ್ಣಗೊಂಡಿದೆ. ಇಂಗ್ಲಿಷ್‌, ಸಮಾಜಶಾಸ್ತ್ರ, ಗಣಿತ ಸೇರಿದಂತೆ ಕೆಲವು ವಿಭಾಗಗಳ ಮೆರಿಟ್ ಸೀಟುಗಳ ಶೇ. 100ರಷ್ಟು ಪ್ರವೇಶಾತಿ ಮುಗಿದಿದೆ. ಜು.19 ರಂದು ಪೇಮೆಂಟ್ ಮತ್ತು ಇತರೆ ಕೋಟಾಗಳ ಸೀಟುಗಳಿಗೆ ಪ್ರವೇಶಾತಿ ನಡೆಯಲಿದೆ.

ವಿಶ್ವವಿದ್ಯಾಲಯವು ಪ್ರವೇಶ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಸೀಟು ಆಕಾಂಕ್ಷಿಗಳು ಮತ್ತು ಅವರ ಪೋಷಕರು ಉತ್ಸುಕತೆಯಿಂದ ಪ್ರವೇಶ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ವಿವಿಯ ವಿಭಾಗಗಳನ್ನು ಕಲೆ ಮತ್ತು ಸಮಾಜ ವಿಜ್ಞಾನ ವಿಷಯಗಳು, ವಾಣಿಜ್ಯ ಮತ್ತು ನಿರ್ವಹಣಾ ವಿಷಯಗಳು, ಅನ್ವಯಿಕ ವಿಜ್ಞಾನಗಳು ಮತ್ತು ಮೂಲ ವಿಜ್ಞಾನಗಳೆಂದು ವಿಂಗಡಿಸಿ ಅನುಕ್ರಮವಾಗಿ ಸಮಾಜ ವಿಜ್ಞಾನ, ವಾಣಿಜ್ಯಶಾಸ್ತ್ರ, ಗಣಿತ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯಗಳ ಸಮುಚ್ಚಯಗಳಲ್ಲಿ ಪ್ರವೇಶಾತಿ ಹಮ್ಮಿಕೊಳ್ಳಲಾಗಿತ್ತು. ನಾಳೆಯೂ ಇದೇ ಕಟ್ಟಡಗಳಲ್ಲಿ ಕೌನ್ಸೆಲಿಂಗ್‌ ನಡೆಯಲಿದೆ.

ವಿಶ್ವವಿದ್ಯಾಲಯಕ್ಕೆ ಆಗಮಿಸುವ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿವಿಯ ಮುಖ್ಯದ್ವಾರದ ಬಳಿ ಸ್ವಾಗತ ಕೋರುವ ಫಲಕಗಳೊಟ್ಟಿಗೆ, ವಿಭಾಗವಾರು ಕೌನ್ಸೆಲಿಂಗ್‌ ಕಟ್ಟಡದ ವಿವರ, ಮಾರ್ಗ ತೋರುವ ಸೂಚನಾ ಫಲಕಗಳು, ಅಗತ್ಯ ದಾಖಲೆಗಳ ವಿವರ ನೀಡುವ ಫಲಕಗಳನ್ನು ಹಾಕಲಾಗಿತ್ತು. ಜೊತೆಗೆ ಪ್ರತಿ ಕಟ್ಟಡದ ಬಳಿಯೂ ಪೂರಕ ಮಾಹಿತಿ ನೀಡಲಾಗಿತ್ತು. ಸೀಟುಗಳ ವಿವರ, ವಿದ್ಯಾರ್ಥಿ ಮಾಹಿತಿ, ಕಾಲೇಜು ಆಯ್ಕೆ ಕುರಿತ ಮಾಹಿತಿಗಳನ್ನು ಯಾವುದೇ ಗೊಂದಲಗಳಿಗೆ ದಾರಿಯಾಗದಂತೆ ಡಿಜಿಟಲ್ ಬೋರ್ಡ್‌ಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು ಹಾಗೂ ಆಯ್ಕೆಗೊಂಡವರ ಹೆಸರುಗಳನ್ನು ಮೈಕ್‌ ಮೂಲಕ ಘೋಷಿಸಲಾಗುತ್ತಿತ್ತು. ವಿಭಾಗಗಳ ಪ್ರವೇಶಾತಿ ನಂತರ ಹಾಸ್ಟೆಲ್ಗೆ ಅರ್ಜಿ ಸಲ್ಲಿಸುವವರಿಗಾಗಿ ಎಲ್ಲ ಪ್ರವೇಶ ಸಮುಚ್ಛಯಗಳ ಬಳಿಯೂ ವಸತಿನಿಲಯಗಳ ಅರ್ಜಿ ನೀಡುವ ಕೌಂಟರ್‌ ತೆರೆಯಲಾಗಿತ್ತು.

ತಮ್ಮ ಸರತಿಗಾಗಿ ಕಾಯುವ ವಿದ್ಯಾರ್ಥಿಗಳಿಗಾಗಿ ಎಲ್ಲೆಡೆಯೂ ಕುರ್ಚಿಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪ್ರವೇಶ ಶುಲ್ಕ ಭರಿಸಲು ಆವರಣದ ಎಸ್‌.ಬಿ.ಐ. ಬ್ಯಾಂಕ್‌ನಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆದಿದ್ದಲ್ಲದೆ, ಪ್ರತಿ ಕಟ್ಟಡದಲ್ಲಿಯೂ ಒಂದೊಂದು ಕೌಂಟರ್‌ ತೆರೆದು ಶುಲ್ಕ ಭರಿಸುವ ಕಾರ್ಯವನ್ನು ಸುಗಮಗೊಳಿಸಲಾಗಿತ್ತು.

ವಿಶ್ವವಿದ್ಯಾಲಯಕ್ಕೆ ಆಗಮಿಸಿರುವ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಪಹಾರಕ್ಕಾಗಿ ಕ್ಯಾಂಟೀನ್‌ ಮುಂಭಾಗದಲ್ಲಿ ವಿಶೇಷ ಶಾಮಿಯಾನ ವ್ಯವಸ್ಥೆ ಮತ್ತು ಉಪಹಾರಕ್ಕಾಗಿ ಹಚ್ಚಿನ ಓಡಾಟ ತಪ್ಪಿಸಲು ಪ್ರತೀ ಪ್ರವೇಶಾತಿ ಕಟ್ಟಡಗಳ ಬಳಿಯೂ ಕ್ಯಾಂಟೀನ್‌ ಸ್ಥಾಪಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ವಾಹನಗಳ ಓಡಾಟ ಮತ್ತು ನಿಲುಗಡೆಯನ್ನು ಸೆಕ್ಯುರಿಟಿ ವಿಭಾಗದವರು ಸುಸೂತ್ರವಾಗಿ ನಿರ್ವಹಿಸಿದ್ದು ಕಂಡುಬಂದಿತು. ಜೀವ ವಿಜ್ಞಾನಗಳ ಕಟ್ಟಡ ಮತ್ತು ವಾಣಿಜ್ಯ ವಿಷಯಗಳ ಸಮುಚ್ಛಯದ ಬಳಿ ಅಪಾರ ಸಂಖ್ಯೆಯ ಆಕಾಂಕ್ಷಿಗಳು, ಪೋಷಕರು ಮತ್ತು ಉದ್ದುದ್ದ ಸಾಲಿನ ವಾಹನ ನಿಲುಗಡೆ ಇತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ