ಮಾವು-ಹಲಸು ಮೇಳದಲ್ಲಿ ಜನವೋ ಜನ; ಭರ್ಜರಿ ಮಾರಾಟ

Team Udayavani, Jun 8, 2019, 12:10 PM IST

ಶಿವಮೊಗ್ಗ: ನಗರದ ಗಾಂಧಿ ಪಾರ್ಕ್‌ ಆವರಣದಲ್ಲಿ ನಡೆಯುತ್ತಿರುವ ಮಾವು ಮೇಳ ವೀಕ್ಷಿಸಲು ಸೇರಿದ್ದ ಜನರು.

ಶಿವಮೊಗ್ಗ: ಇದು ನಗರದ ಗಾಂಧಿ ಪಾರ್ಕ್‌ ಪಕ್ಕದಲ್ಲಿರುವ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಶ್ರಯದಲ್ಲಿ ನಡೆಯುತ್ತಿರುವ ‘ಮಾವು ಮತ್ತು ಹಲಸು ಮೇಳ’ಕ್ಕೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ರಾಸಾಯನಿಕ ರಹಿತ ಮಾವು, ಹಲಸು ಸವಿಯಲು ಜನ ಮುಗಿಬಿದ್ದಿದ್ದರು. ಸಂಜೆ ವೇಳೆಗೆ ಉದ್ಘಾಟನೆ ಕಾರ್ಯಕ್ರಮ ಇದ್ದರೂ ಜನರು ಬೆಳಗ್ಗೆಯಿಂದಲೇ ಖರೀದಿಗೆ ಮುಗಿಬಿದ್ದಿದ್ದರು. ಶನಿವಾರ, ಭಾನುವಾರ ಕಿಕ್ಕಿರಿದು ಜನ ಸೇರುವ ನಿರೀಕ್ಷೆ ಇದೆ.

ಸುಮಾರು 30 ಮಳಿಗೆಗಳಲ್ಲಿ ಜಿಲ್ಲೆಯ ರೈತರು ತಾವು ಬೆಳೆದ ರಸಪುರಿ, ಮಲಗೋವಾ, ತೋತಾಪುರಿ, ಮಲ್ಲಿಕಾ, ಮಲ್ಲಿಕಾ, ಅಲಾನ್ಸೊ, ಬಾದಾಮಿ, ಬಗನಪಲ್ಲಿ, ಲಾಂಗ್ರಾ, ಪ್ರಿನ್ಸಸ್‌, ವನರಾಜ, ರಾಜಗಿರಿ, ಸಿರಿ, ಆಪೂಸ್‌, ಕಲ್ಮಿ, ಬೆನಸಾನ್‌ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳ ಮಾರಾಟ ಮಾಡುತ್ತಿದ್ದಾರೆ.

ರಾಸಾಯನಿಕ ಮುಕ್ತ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತರಿಗೆ ನ್ಯಾಯಬೆಲೆ ದೊರಕಿಸಿ ಕೊಡುವ ಉದ್ದೇಶದಿಂದ ಮಾವು ಮೇಳವನ್ನು ಆಯೋಜಿಸಲಾಗಿದೆ. ಶುಕ್ರವಾರ ಮೇಳಕ್ಕೆ ಚಾಲನೆ ನೀಡಲಾಗಿದೆ. ಜೂ.9ವರೆಗೆ ನಡಿಯಲಿದೆ. ಮಾವು ರುಚಿ ಮಾತ್ರವಲ್ಲ, ಅದರ ಸುವಾಸನೆಯಲ್ಲೂ ಅಗ್ರ ಸಾಲಿನಲ್ಲಿ ನಿಲ್ಲುತ್ತದೆ. ಮೇಳದ ಮೊದಲ ದಿನವೇ ಸಾಕಷ್ಟು ಜನರು ಭೇಟಿ ನೀಡಿ ಹಣ್ಣಿನ ರುಚಿ ಸವಿದರು. ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತಂಡೋಪತಂಡವಾಗಿ ಬಂದು ಹಣ್ಣಿನ ರುಚಿ ಸವಿಯುತ್ತಿದ್ದಾರೆ. ರಾಸಾಯನಿಕ ಬಳಸದೇ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಬಳಸುವಂತೆ ಇಲಾಖೆಯು ಪ್ರಚಾರ ಕೈಗೊಂಡಿದ್ದು, ಈ ಮೇಳದಲ್ಲೂ ಇದೇ ವಿಷಯವನ್ನು ಮುಂದಿಟ್ಟುಕೊಂಡು ಮಳಿಗೆಗಳನ್ನು ತೆರೆಯಲಾಗಿದ್ದು, ಹತ್ತಾರು ವಿಧದ ತಳಿಗಳ ಮಾವಿನ ಹಣ್ಣುಗಳು ಮೇಳಕ್ಕೆ ಬಂದವರ ಬಾಯಿಯಲ್ಲಿ ನೀರೂರಿಸುತ್ತಿವೆ. ಬಾದಾಮಿ, ರಸಪುರಿ, ಬಗನಪಲ್ಲಿ ಮಾವು ಕೆಜಿಗೆ 60 ರೂ. ಮಲ್ಲಿಕಾ ಅಲಾನ್ಸೊಗೆ ಕೆಜಿಗೆ 55, ಮಲಗೋಬಾ 80, ಸೆಂಧೂರ 30, ತೋತಾಪುರಿ 25, ಸಿರಿ 50 ಹಾಗೂ ಇತರ ಹಲವು ತಳಿಗಳ ಮಾವುಗಳು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಮೇಳದಲ್ಲಿ ವಿವಿಧ ಜಾತಿಯ ಮಾವು ಹಾಗೂ ಹಲಸು ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಮೇಳದಲ್ಲಿ ಆಸ್ಟ್ರೇಲಿಯಾ ಮಾವು: ಬಾದಾಮಿ, ಬಂಗನಪಲಿ, ರಸಪುರಿ, ಮಲ್ಲಿಕಾ, ಅಪೋಸ್‌, ಸಂಧೂರ, ಮಲಗೋವಾ, ತೋತಾಪುರಿ, ರಾಜಗಿರಿ, ಸಿರಿ ಸೇರಿದಂತೆ ಸ್ಥಳೀಯ ಹಣ್ಣುಗಳ ಜತೆ ಆಸ್ಟ್ರೆಲೀಯಾ ದೇಶದ ತಳಿ ಮಾಯಾ ಮಾವು ಎಲ್ಲರ ಗಮನ ಸೆಳೆಯುತ್ತಿದೆ. ಈ ಹಣ್ಣಿನ ಬೆಲೆ ಕೆ.ಜಿಗೆ 250ರೂ.ಗಳಾಗಿದ್ದು ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ಹಲವು ಬಗೆ ಹಲಸು: ಮಾವು ಹಾಗೂ ಹಲಸು ಮೇಳದಲ್ಲಿ ಸಸ್ಯ ಸಂತೆ ಕೂಡ ಏರ್ಪಡಿಸಲಾಗಿದೆ. ಮೇಳದಲ್ಲಿ ಸದಾನಂದ ಹಲಸು, ಬಿ.ಡಿ.ವಿ.ಟಿ. ಹಲಸು, ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ, ಹೇಮಚಂದ್ರ, ಲಾಲ್ಬಾಗ್‌ ಮಧೂರ, ಮಾಂಕಾಳಿ, ಕೆಂಪು, ಹಲಸು, ವಟಗರ, ತಬೂಗರೆ ಪಿಂಕ್‌, ಸಿಂಗಾಪುರ್‌, ತೂಬೂಗೆರೆ, ಸಿಂಧೂರ ಇತ್ಯಾದಿ ಹಲಸು ತಳಿಗಳು ಮಾರಾಟವಾಗುತ್ತಿವೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ