ಉದ್ದಿಮೆ ಪರವಾನಗಿ ಪಡೆಯಲು ಸೂಚನೆ

ಪರವಾನಗಿ ಪಡೆಯದವರ ವಿರುದ್ಧ ಕಠಿಣ ಕ್ರಮ: ಚಾರುಲತಾ ಸೋಮಲ್

Team Udayavani, Jul 12, 2019, 12:38 PM IST

ಶಿವಮೊಗ್ಗ: ಗಾಂಧಿ ಬಜಾರ್‌ ಅಂಗಡಿಗಳಿಗೆ ವಾಣಿಜ್ಯ ಪರವಾನಗಿ ವಿತರಿಸಲಾಯಿತು.

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಪರವಾನಗಿ ಪಡೆಯದೆ ಅಂಗಡಿ ಮುಂಗಟ್ಟು, ವಾಣಿಜ್ಯ ವ್ಯವಹಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಹೇಳಿದರು.

ಗಾಂಧಿ ಬಜಾರ್‌ನಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಗುರುವಾರ ಮೇಯರ್‌ ಲತಾ ಗಣೇಶ್‌ ಹಾಗೂ ಉಪ ಮೇಯರ್‌ ಚನ್ನಬಸಪ್ಪ ಹಾಗೂ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಅವರು, ಇದುವರೆಗೆ ವಾಣಿಜ್ಯ ಪರವಾನಗಿ ಪಡೆಯದವರು ತಕ್ಷಣ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿ ಪಡೆಯಬೇಕು. ಈ ವರ್ಷ ನವೀಕರಿಸದವರು ತಕ್ಷಣ ನವೀಕರಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು, ಪಾಲಿಕೆಯ ಆದಾಯ ಸಂಗ್ರಹಣೆಗೆ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಇದರಲ್ಲಿ ಕೈಜೋಡಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಸಣ್ಣ ಮತ್ತು ದೊಡ್ಡ ವಾಣಿಜ್ಯ ಮಳಿಗೆಗಳು ಇದ್ದು, ಈ ವರ್ಷದ ಎಪ್ರಿಲ್ನಿಂದ ಇಲ್ಲಿಯವರೆಗೆ ಕೇವಲ 2 ಸಾವಿರ ಮಳಿಗೆಗಳಿಗೆ ಮಾತ್ರ ವಾಣಿಜ್ಯ ಪರವಾನಿಗೆ ಪಡೆಯಲಾಗಿದೆ. ಈ ಹಿಂದೆ ತ್ಯಾಜ್ಯ ಸಂಗ್ರಹಣಾ ಕರವನ್ನು ವಾಣಿಜ್ಯ ಪರವಾನಗಿ ಪಡೆಯುವ ಸಂದರ್ಭದಲ್ಲಿ ವಸೂಲು ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಏಪ್ರಿಲ್ನಿಂದ ಇದನ್ನು ಕೈ ಬಿಡಲಾಗಿದೆ. ಆದರೂ ವಾಣಿಜ್ಯ ಪರವಾನಗಿ ಪಡೆಯುವ ಪ್ರಮಾಣದಲ್ಲಿ ಹೆಚ್ಚಳ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಂಡದೊಂದಿಗೆ ಭೇಟಿ ನೀಡಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ವಾಣಿಜ್ಯ ಪರವಾನಗಿ ಕಡ್ಡಾಯವಾಗಿ ಪಡೆಯುವಂತೆ ಈಗಾಗಲೇ ಹಲವು ಬಾರಿ ಬಹಿರಂಗವಾಗಿ ಮನವಿ ಮಾಡಲಾಗಿದೆ. ಈ ಕುರಿತು ಚೇಂಬರ್‌ ಆಫ್‌ ಕಾಮರ್ಸ್‌ ಮೂಲಕ ಸಹ ವ್ಯಾಪಾರಿಗಳಿಗೆ ಮಾಹಿತಿ ನೀಡಲಾಗಿದೆ. ಇನ್ನು ಮುಂದೆ ವಾಣಿಜ್ಯ ಪರವಾನಗಿ ಪಡೆಯದವರಿಗೆ ದಂಡ ವಿಧಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಈಗಾಗಲೇ ವಾಣಿಜ್ಯ ಪರವಾನಗಿಗೆ ಅರ್ಜಿ ಸಲ್ಲಿಸಿದವರಿಗೆ ಈ ಸಂದರ್ಭದಲ್ಲಿ ಪರವಾನಿಗೆ ಪ್ರತಿಯನ್ನು ಹಸ್ತಾಂತರಿಸಲಾಯಿತು. ಕೆಲವು ವ್ಯಾಪಾರಿಗಳು ವಾಣಿಜ್ಯ ಪರವಾನಗಿ ಅರ್ಜಿಯನ್ನು ತುಂಬಿಸಿ ಈ ಸಂದರ್ಭದಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿದರು.

ಪಾಲಿಕೆ ಆರೋಗ್ಯಾಧಿಕಾರಿ ಶಿವಯೋಗಿ ಎಲಿ, ಪರಿಸರ ಇಂಜಿನಿಯರ್‌ಗಳಾದ ರಾಘವೇಂದ್ರ, ತೇಜಸ್ವಿನಿ, ಸುಧಾಕರ್‌ ಮತ್ತಿತರ ಅಧಿಕಾರಿಗಳು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ