ಸಕ್ಕರೆಬೈಲು ಆನೆಹಬ್ಬ ಅನುಮಾನ?

ಎರಡು ತಿಂಗಳು ಮೊದಲೇ ನಡೆಯುತ್ತಿತ್ತು ಸಿದ್ಧತೆಈ ಬಾರಿ ಯಾವುದೇ ಪ್ರಕ್ರಿಯೆ ನಡೆದಿಲ್ಲ

Team Udayavani, Oct 10, 2019, 1:17 PM IST

ಶರತ್‌ ಭದ್ರಾವತಿ
ಶಿವಮೊಗ್ಗ: ರಾಜ್ಯದ ಎರಡನೇ ಅತಿ ದೊಡ್ಡ ಆನೆ ಬಿಡಾರ ಮತ್ತು ಕಾಡಾನೆಗಳನ್ನು ಸಮರ್ಥವಾಗಿ ಪಳಗಿಸುವ ಕೇಂದ್ರ ಸಕ್ರೆಬೈಲು ಆನೆ ಬಿಡಾರದಲ್ಲಿ ನಡೆಯುವ ‘ಆನೆ ಹಬ್ಬ’ದ ಮೇಲೆ ಈ ಸಲ ಕರಿನೆರಳು ಆವರಿಸಿದೆ.

ಪ್ರತಿ ವರ್ಷ ವನ್ಯಜೀವಿ ಸಪ್ತಾಹ ನಂತರ ಆನೆ ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಎನ್‌ಜಿಒ ಮಾಡಿದ ಆಕ್ಷೇಪಣೆಯಿಂದ ಉತ್ಸವ ನಡೆಯುವುದೋ, ಇಲ್ಲವೋ ಎಂಬ ಅನುಮಾನ ಮೂಡಿದೆ.

ಪ್ರತಿ ಬಾರಿ ಅಕ್ಟೋಬರ್‌ ಬರುತ್ತಿದ್ದಂತೆ ಮಧ್ಯ ವಾರ್ಷಿಕ ಪರೀಕ್ಷೆ ಮುಗಿಸಿದ ಮಕ್ಕಳು ಮತ್ತು ಅವರ ಪೋಷಕರು ಕೇಳುತ್ತಿದ್ದ ಪ್ರಶ್ನೆ ಎಂದರೆ ಆನೆ ಉತ್ಸವ ಯಾವಾಗ? ಈಗಲೂ ಮಕ್ಕಳು ಅದೇ ಪ್ರಶ್ನೆ ಕೇಳುತ್ತಿದ್ದು, ಆದರೆ, ಅರಣ್ಯ ಇಲಾಖೆ ವನ್ಯಜೀವಿ ಮಂಡಳಿ ಮಾತ್ರ ಉತ್ಸವ ಆಚರಿಸುವ ಉತ್ಸಾಹದಲ್ಲಿ ಇಲ್ಲ. ವನ್ಯಜೀವಿ ಸಪ್ತಾಹ ಹೆಸರಲ್ಲಿ ವನ್ಯಜೀವಿ ವಿಭಾಗವು ಒಂದು ವಾರ ಕಾಲ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸುತ್ತಿತ್ತು. ಜಿಲ್ಲೆಯ ಎಲ್ಲ ತಾಲೂಕಿನ ಮಕ್ಕಳು ಉತ್ಸವದಲ್ಲಿ ಪಾಲ್ಗೊಂಡು ಆನೆ ಹಬ್ಬದ ದಿನ ಅವರಿಗೆ ಪ್ರಶಸ್ತಿ ವಿತರಿಸಲಾಗುತ್ತಿತ್ತು. ಅದಕ್ಕಾಗಿ ಎರಡು ತಿಂಗಳು ಮೊದಲೇ ಸಿದ್ಧತೆ ನಡೆಯುತ್ತಿತ್ತು. ಆದರೆ, ಈ ಬಾರಿ ಅಂತಹ ಪ್ರಕ್ರಿಯೆಗಳೇ ನಡೆದಿಲ್ಲ.

ಎನ್‌ಜಿಒ ಆಕ್ಷೇಪ: ವನ್ಯಜೀವಿಗಳ ಮೇಲೆ ಸವಾರಿ ಮಾಡಬಾರದು. ದೈಹಿಕ ಹಿಂಸೆ ನೀಡಬಾರದೆಂಬ ಕಾರಣಕ್ಕೆ ಸರ್ಕಸ್‌ಗಳಲ್ಲಿ ಪ್ರಾಣಿಗಳ ಬಳಕೆ ಕೈ ಬಿಡಲಾಗಿದೆ. ಹಾಗಾಗಿ ಇಲ್ಲೂ ಕೂಡ ಆನೆಗಳ ಆಟೋಟ ಆಯೋಜಿಸಬಾರದು ಎಂದು ಒತ್ತಾಯಿಸಿ ಜಿಲ್ಲಾ ವನ್ಯಜೀವಿ ಸಂರಕ್ಷಣಾಲಯಕ್ಕೆ ಮನವಿ ಮಾಡಲಾಗಿದೆ. ಇದರಿಂದ ಚಿಂತೆಗೀಡಾದ ಅಧಿಕಾರಿಗಳು ಮುಂದೇನು ಮಾಡುವುದೆಂದು ತಿಳಿಯದೇ ಸುಮ್ಮನಾಗಿದ್ದಾರೆ.

ಹರ್ಪಿಸ್‌ ವೈರಸ್‌ ಸಮಸ್ಯೆ: ಎಂಡೋಥೆಲಿಯೋ ಟ್ರೋಪಿಕ್‌(ಹರ್ಪಿಸ್‌) ವೈರಸ್‌ ಆನೆಗಳ ಸಂತತಿಗೆ ಮಾರಕವಾಗಿದೆ. ದೇಶಾದ್ಯಂತ ಒಂದೇ ತಿಂಗಳಲ್ಲಿ ಹತ್ತಾರು ಆನೆಗಳು ಮೃತಪಟ್ಟಿವೆ. ಈ ವೈರಸ್‌ ನಿಯಂತ್ರಣಕ್ಕೆ ಸೂಕ್ತ ಚಿಕಿತ್ಸಾ ಕ್ರಮ ಇಲ್ಲದಿರುವುದರಿಂದ ಆನೆಗಳಿಗೆ ವೈರಸ್‌ ತಗುಲದಂತೆ ಹೆಚ್ಚು ಮುಂಜಾಗ್ರತೆ ವಹಿಸಲಾಗುತ್ತಿದೆ. ಇದೇ ಕಾರಣದಿಂದ ಸಕ್ರೆಬೈಲು ಆನೆ ಬಿಡಾರದಿಂದ ಏಳು ಕಿಮೀ ದೂರದಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯದೊಳಗೆ ತಾತ್ಕಾಲಿಕ ಬಿಡಾರ ನಿರ್ಮಿಸಲಾಗಿದೆ.

ಬಾಲಣ್ಣ ಆನೆ ಮೃತಪಟ್ಟ ನಂತರ ಮರಿ ಹಾಗೂ ಯುವಕ ಆನೆಗಳನ್ನು ಸೇರಿ ಒಟ್ಟು 10 ಆನೆಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಹಿರಿಯ ಆನೆಗಳು ಸಕ್ರೆಬೈಲು ಬಿಡಾರದಲ್ಲೇ ಇವೆ. ಇದರಿಂದ ಈ ಬಾರಿ ಆನೆ ಉತ್ಸವಕ್ಕೆ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ. ಇದಲ್ಲದೇ ಕ್ಯಾಂಪ್‌ನಲ್ಲಿ ಹರ್ಪಿಸ್‌ ವೈರಸ್‌ ಸಮಸ್ಯೆ ಕೂಡ ಇದ್ದು, ಈಗಾಗಲೇ ಮೂರು ಆನೆಗಳು ಇದೇ ಕಾಯಿಲೆಯಿಂದ ಮೃತಪಟ್ಟ ಬಗ್ಗೆ ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಆನೆ ಉತ್ಸವ ಬದಲು ಸ್ವಚ್ಛತೆ ಕಾರ್ಯಕ್ರಮ: ವನ್ಯಜೀವಿ ಮಂಡಳಿ ಆನೆ ಉತ್ಸವಕ್ಕೆ ಬದಲಾಗಿ ಅ.10ರಂದು ಸಕ್ರೆಬೈಲು ಆನೆ ಬಿಡಾರ ಲೋಗೋ ಬಿಡುಗಡೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ತೀರ್ಥಹಳ್ಳಿ ರಸ್ತೆ ಅಕ್ಕಪಕ್ಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚರ್ಯರ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ