ರಕ್ತ ಕೊಟ್ಟೇವು, ಶರಾವತಿ ಬಿಡೆವು

ಬೆಂಗಳೂರಿಗೆ ನೀರು ಕೊಡುವ ಬದಲು ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಒತ್ತಾಯ

Team Udayavani, Jul 11, 2019, 11:27 AM IST

ಶಿವಮೊಗ್ಗ: ಪ್ರತಿಭಟನಾ ರ್ಯಾಲಿಯಲ್ಲಿ ಗೋ ಗ್ರೀನ್‌ ತಂಡದ ಸದಸ್ಯರು ಪಾಲ್ಗೊಂಡಿದ್ದರು

ಶಿವಮೊಗ್ಗ: ರಕ್ತ ಕೊಟ್ಟೇವು ಶರಾವತಿ ಕೊಡೆವು, ಜೀವ ಕೊಟ್ಟೇವು ಶರಾವತಿ ನೀರನ್ನು ನಾವು ಬೆಂಗಳೂರಿಗೆ ಬಿಟ್ಟು ಕೊಡುವುದಿಲ್ಲ ಎಂದು ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಘೋಷಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಶರಾವತಿ ಉಳಿಸಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿಗೆ ಅಷ್ಟೇ ಅಲ್ಲದೆ ಬೇರೆ ಯಾವುದೇ ಯೋಜನೆಗಳಿಗೆ ಶರಾವತಿ ದುರ್ಬಳಕೆ ಸಲ್ಲದು. ಶರಾವತಿ ಕಣಿವೆಯ ಸುತ್ತಮುತ್ತ ಇರುವ ಅನೇಕ ಗ್ರಾಮಗಳಿಗೆ ಈಗಲೂ ಕುಡಿಯುವ ನೀರಿಲ್ಲ. ನಮ್ಮ ಸರಕಾರಗಳು ಅವರಿಗೆ ಅನುಕೂಲ ಮಾಡಿಕೊಡುವುದು ಬಿಟ್ಟು ಕೇವಲ ಬೆಂಗಳೂರಿನ ಬಗ್ಗೆ ಯೋಚನೆ ಮಾಡುತ್ತಿವೆ. ಸರಕಾರ ಡಿಪಿಆರ್‌ ಆದೇಶವನ್ನು ವಾಪಸ್‌ ತೆಗೆದುಕೊಳ್ಳಬೇಕು ಎಂದರು.

ಬೆಂಗಳೂರಿನ ಜನರು ಮಾನವೀಯತೆ ತೋರಿಸಬೇಕು ಎಂಬ ಮಾತನ್ನು ಹೇಳುತ್ತಿದ್ದಾರೆ. ಬೆಂಗಳೂರಿನ ಜನ ನಮಗೆ ಮಾನವೀಯತೆ ಇಲ್ಲ ಅಂದುಕೊಂಡರೂ ಪರವಾಗಿಲ್ಲ. ನಮಗೆ ಮಾನವೀಯತೆ ಏನು ಎಂಬುದನ್ನು ಕಲಿಸಿಕೊಡಿ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಈವರೆಗೂ ಭೂಮಿ ಕೊಟ್ಟಿಲ್ಲ. ಅವರಿಗೆ ಭೂಮಿಯನ್ನು ಕೊಡಿಸುವುದರ ಮೂಲಕ ಮಾನವೀಯತೆ ಏನು ಎಂಬುದನ್ನು ಕಲಿಸಿಕೊಡಿ. ಅಣೆಕಟ್ಟಿನಲ್ಲಿ ದ್ವೀಪಗಳಂತೆ ಬದುಕುತ್ತಿರುವ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲ. ಸೇತುವೆ, ಶಾಲಾ-ಕಾಲೇಜು, ಮಾನವ ಸಮಾಜದ ಸಂಪರ್ಕವೇ ಇಲ್ಲದಂತೆ ಬದುಕುತ್ತಿದ್ದಾರೆ. ಅವರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಮಲೆನಾಡಿನ ಜನರಿಗೆ ಮನುಷ್ಯತ್ವ ಅಂದರೆ ಏನು ಎಂಬುದನ್ನು ಕಲಿಸಿಕೊಡಿ ಸ್ವಾಮಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೊಂದು ಶುದ್ಧ ಅವೈಜ್ಞಾನಿಕ ಯೋಜನೆ. ರೈತರಿಗೆ ಉಚಿತವಾಗಿ ಕೊಡುತ್ತಿರುವ ವಿದ್ಯುತ್‌ ಅನ್ನು ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗಲು ಕೊಟ್ಟರೆ ರೈತರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಅನ್ನ ತಿನ್ನುವ ಎಲ್ಲರೂ ಈ ಯೋಜನೆ ವಿರೋಧಿಸಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ರೈತ ಮುಖಂಡ ಕೆ.ಟಿ. ಗಂಗಾಧರ್‌ ಮಾತನಾಡಿ, ಬೆಂಗಳೂರು ವಿಕಾರವಾಗಿ ಬೆಳೆಯುತ್ತಿದೆ. ಬೇರೆ ಜಿಲ್ಲೆಗಳನ್ನು ಬೆಳೆಸೋಣ. ಶರಾವತಿ ಮಲೆನಾಡಿನ ಜನರ ಅಳಿವು, ಉಳಿವಿನ ಪ್ರಶ್ನೆ ಎಂದರು.

ಪ್ರಾಧ್ಯಾಪಕ ಕೆ.ಪಿ. ಶ್ರೀಪತಿ ಮಾತನಾಡಿ, ಶರಾವತಿ ನದಿ ಬೆಂಗಳೂರಿಗೆ 400 ಕಿಮೀ ದೂರ ಇದೆ. ಇಲ್ಲಿಂದ ನೀರನ್ನು ಬೆಂಗಳೂರಿಗೆ ನೀರು ತಲುಪಿಸಲು ಕನಿಷ್ಠ 2 ಸಾವಿರ ಮೆಗಾವ್ಯಾಟ್ ವಿದ್ಯುತ್‌ ಬೇಕು. ಈ ವಿದ್ಯುತ್‌ ಅನ್ನು ಬೇರೆ ಮೂಲಗಳಿಂದ ಪಡೆಯಬೇಕು. ಈ ವಿದ್ಯುತ್‌ ಎಲ್ಲಿಂದ ಬರುತ್ತೆ ಎಂದು ಯಾರೂ ಹೇಳುತ್ತಿಲ್ಲ. 400 ಕಿ.ಮೀ ಮಾರ್ಗದಲ್ಲಿ ಕನಿಷ್ಠ 3 ಮೀಟರ್‌ ಗಾತ್ರದ ಪೈಪ್‌ ಹಾಕಲು ಕನಿಷ್ಠ 2 ಸಾವಿರ ಹೆಕ್ಟೇರ್‌ ಭೂಮಿ ಬೇಕು. ಇದರಲ್ಲಿ ಶೇ.30ರಷ್ಟು ಭೂಮಿ ಮಲೆನಾಡಿನಲ್ಲೇ ಬರುತ್ತೆ. ಇದರಿಂದ ಕೃಷಿ ಭೂಮಿ, ಅರಣ್ಯ ನಾಶವಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಏನು ಕೊಡಲು ಸಾಧ್ಯವಿದೆ. ಬೆಂಗಳೂರಿಗರು ಈ ನೀರನ್ನು ಹೇಗೆ ಬಳಸುತ್ತಿದ್ದಾರೆ ಎಂದು ಪ್ರಶ್ನಿಸುವ ಹಕ್ಕು ನಮಗಿದೆ. ಕಾರು ತೊಳೆಯಲು ಬಳಸುತ್ತಾರಾ? ರಸ್ತೆ ತೊಳೆಯಲು ಬಳಸುತ್ತಾರಾ? ವೃಷಭಾವತಿಗೆ ಸೇರಿಸುತ್ತಾರಾ ಎಂಬುದನ್ನು ನಾವು ಪ್ರಶ್ನಿಸಬೇಕಿದೆ. ಬೆಂಗಳೂರಿಗೆ 18 ಟಿಎಂಸಿ ನೀರಿನ ಅಗತ್ಯವಿದೆ. ವಾರ್ಷಿಕ 16 ಟಿಎಂಸಿಯಷ್ಟು ನೀರು ಮಳೆಯಿಂದಲೇ ಸಿಗುತ್ತದೆ. ತಲೆ ಮೇಲೆ ಇರುವ ನೀರನ್ನು ಹಿಡಿದಿಡುವ ಬದಲು ಶರಾವತಿಗೆ ಕನ್ನ ಹಾಕಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಯೋಜನೆ ಕೈ ಬಿಡುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ತಮ್ಮ ಮನವಿಯನ್ನು ಸರ್ಕಾರಕ್ಕೆ ಕಳಿಸುತ್ತೇನೆ. ಇದರ ವಾಸ್ತವತೆಯನ್ನು ಸರ್ಕಾರಕ್ಕೆ ತಿಳಿಸುತ್ತೇನೆ ಎಂದರು. ಕಡಿದಾಳು ಶಾಮಣ್ಣ, ಎಚ್.ಆರ್‌. ಬಸವರಾಜಪ್ಪ ಸೇರಿದಂತೆ ಅನೇಕ ಮುಖಂಡರು, ಸಂಘ-ಸಂಸ್ಥೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ