ಬೆಂಗಳೂರಿಗೆ ಶರಾವತಿ ಹರಿಸಲು ವಿರೋಧ

ಬೆಂಗಳೂರಿನಲ್ಲಿ ಮಳೆ ಕೊಯ್ಲು ಜಾರಿಯಾಗಲಿ •ಮಲೆನಾಡಿನ ಜನರಿಗೆ ಕುಡಿಯುವ ನೀರು ಪೂರೈಸಿ

Team Udayavani, Jul 7, 2019, 11:32 AM IST

ಶಿವಮೊಗ್ಗ: ಶರಾವತಿ ಉಳಿಸಿ ಹೋರಾಟ ಬೆಂಬಲಿಸಿ ಸಹಿ ಸಂಗ್ರಹ ಅಭಿಯಾನ ನಡೆಯಿತು.

ಶಿವಮೊಗ್ಗ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ನಾಗರಿಕ ಹಿತರಕ್ಷ‌ಣಾ ವೇದಿಕೆ ವತಿಯಿಂದ ಶನಿವಾರ ನಗರದ ಗೋಪಿ ವೃತ್ತದಲ್ಲಿ ಶರಾವತಿ ಉಳಿಸಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುತ್ತೇವೆ ಎಂಬುದು ಅವೈಜ್ಞಾನಿಕವಾಗಿದೆ. ಯೋಜನೆ ಜಾರಿಯಾದರೆ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗಲಿದೆ. ಜೊತೆಗೆ ಪರಿಸರಕ್ಕೂ ದೊಡ್ಡಮಟ್ಟದ ಹೊಡೆತ ಬೀಳಲಿದೆ. ಯಾವುದೇ ಕಾರಣಕ್ಕೂ ಸರ್ಕಾರ ಯೋಜನೆಯನ್ನು ಜಾರಿಗೊಳಿಸಬಾರದು ಎಂದರು. ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನಲ್ಲಿ ಭೀಕರ ಬರಗಾಲ ಕಂಡುಬರುತ್ತಿದೆ. ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಎದ್ದಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ನೀರಿನ ಸಂಪನ್ಮೂಲ ಬಳಸಿಕೊಂಡು ಇಲ್ಲಿನ ಜನರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲು ಮುಂದಾಗಬೇಕು ಎಂಬುದು ಮಲೆನಾಡಿಗರ ಒತ್ತಾಯವಾಗಿದೆ ಎಂದರು.

ಪ್ರಸ್ತಾವನೆಗೆ ಮಲೆನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಸರ್ಕಾರ ಕೂಡಲೇ ಯೋಜನೆ ಕೈಬಿಡಬೇಕು. ಬೆಂಗಳೂರಿನಲ್ಲಿ ಇರುವ ನೀರಿನ ಮೂಲಗಳನ್ನು ಬಳಸಿಕೊಂಡು ಅಲ್ಲಿನ ಜನರಿಗೆ ನೀರೊದಗಿಸಬೇಕು. ಕೆರೆ ಒತ್ತುವರಿ ತೆರವುಗೊಳಿಸಬೇಕು. ಮಳೆ ಕೊಯ್ಲು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ನಗರದ ನಾಗರಿಕರಿಂದ ಸಹಿ ಸಂಗ್ರಹಿಸಿ ಅದನ್ನು ರಾಜ್ಯ ಸರ್ಕಾರಕ್ಕೆ ತಲುಪಿಸುವ ಕಾರ್ಯ ಕೈಗೊಳ್ಳಲಾಯಿತು. ಅಶೋಕ್‌ ಯಾದವ್‌, ಅಶೋಕ್‌ ಕುಮಾರ್‌, ಸಂತೋಷ್‌ ಕುಮಾರ್‌ ಶೆಟ್ಟಿ ಮತ್ತಿತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ