ಗೋ ಸೇವೆಯಿಂದ ದೇಶ ಸುಭಿಕ್ಷ

•ಜೀವನದಲ್ಲಿ ಧರ್ಮಕ್ಕೆ ಪ್ರಾಧಾನ್ಯತೆ ನೀಡಿ: ವಿಧುಶೇಖರ ಸ್ವಾಮೀಜಿ

Team Udayavani, May 26, 2019, 4:13 PM IST

ಶಿವಮೊಗ್ಗ: ಶ್ರೀಗಂಧ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ವಿಧುಶೇಖರ ಶ್ರೀಗಳು ಆಶೀರ್ವಚನ ನೀಡಿದರು.

ಶಿವಮೊಗ್ಗ: ಸಂಸ್ಕಾರ ಅಳವಡಿಸಿಕೊಳ್ಳಿ. ಧರ್ಮವನ್ನು ಆಚರಿಸುತ್ತಾ ಧಾರ್ಮಿಕರಾಗಿ, ಸಜ್ಜನರಾಗಿ. ಭಗವಂತ ಮತ್ತು ಗುರುವಿನಲ್ಲಿ ನಂಬಿಕೆ ಇಟ್ಟು ವ್ಯಸನಮುಕ್ತ ಜೀವನವನ್ನು ಪಾಲಿಸಿ. ಗುರು-ಹಿರಿಯರ-ಗೋವಿನ ಸೇವೆ ಮಾಡಿ. ಗೋ ಸೇವೆಯಿಂದ ದೇಶ ಸುಭಿಕ್ಷವಾಗುತ್ತದೆ ಎಂದು ಶೃಂಗೇರಿ ಪೀಠದ ಜಗದ್ಗುರು ವಿಧುಶೇಖರ ಮಹಾಸ್ವಾಮೀಜಿ ತಿಳಿಸಿದರು.

ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಶ್ರೀಗಂಧ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಯಾರನ್ನು ಗೌರವಿಸಬೇಕೋ ಅವರನ್ನು ಗೌರವಿಸದಿದ್ದರೆ, ಶ್ರೇಯಸ್ಸಿಗೆ ಧಕ್ಕೆ ಬರುತ್ತದೆ. ಭಗವಂತ ಗುರು ಮತ್ತು ಸಮಾಜ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಧರ್ಮ ಮತ್ತು ಸಂಸ್ಕೃತಿ ಉಳಿಸುವ ಕೆಲಸ ಮಾಡಬೇಕು. ತ್ರಿಕರಣ ಶುದ್ಧಿಯಿಂದ ನಾವು ಕೆಲಸ ಮಾಡಬೇಕು ಎಂದರು.

ಜೀವನದಲ್ಲಿ ಧರ್ಮಕ್ಕೆ ಪ್ರಾಧಾನ್ಯತೆ ಕೊಡಬೇಕು. ಧರ್ಮದಿಂದಲೇ ಎಲ್ಲವೂ ತಾನಾಗಿ ಬರುತ್ತದೆ. ಯಾವುದನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆಯೋ ಅದೇ ಧರ್ಮ. ನಾವು ಯಾವುದೇ ಕೆಲಸ ಮಾಡುವ ಮುನ್ನ ಅದರ ಅರ್ಥ ತಿಳಿದುಕೊಳ್ಳಬೇಕು. ಆನಂತರ ಆಚರಣೆ ಮಾಡಬೇಕು. ಧರ್ಮವನ್ನು ತಿಳಿದುಕೊಂಡರೆ ಆಚರಣೆಗೆ ಅನುಕೂಲವಾಗುತ್ತದೆ. ಅಧರ್ಮವನ್ನು ತಿಳಿದುಕೊಂಡರೆ, ದುರ್ಮಾರ್ಗವನ್ನು ಬಿಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಧರ್ಮವನ್ನು ಆಚರಿಸುವ ಮೂಲಕ ಜೀವನವನ್ನು ಪಾವನ ಮಾಡಿಕೊಳ್ಳುವುದು ಅವಶ್ಯ. ಬಾಲ್ಯದಿಂದಲೇ ಒಳ್ಳೆಯ ಮಾರ್ಗದಲ್ಲಿ ಸಾಗುವ ಸಂಸ್ಕಾರವನ್ನು ಪಾಲಕರು ನೀಡಬೇಕು. ಕುಟುಂಬದ ಹಿರಿಯರು ಮತ್ತು ಗುರುಗಳಿಂದ ಈ ಸಂಸ್ಕಾರ ಪಡೆಯಬೇಕು. ಗ್ರಂಥಗಳಿಂದಲೂ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಸಿಗುತ್ತದೆ ಎಂದರು.

ಈ ದೇಶದ ಸಂಸ್ಕೃತಿ ಬಹುದೊಡ್ಡದು. ಇದನ್ನು ಎಲ್ಲಾ ಗ್ರಂಥಗಳು ಸಾರುತ್ತಿವೆ. ವಿದೇಶದವರು ಬಾಯಿ ತುಂಬಿ ಹೊಗಳುತ್ತಿದ್ದಾರೆ. ಸಂಸ್ಕಾರ, ಸಂಸ್ಕೃತಿ ಮತ್ತು ಧರ್ಮಾಚರಣೆಯಲ್ಲಿ ಭಾರತ ದೊಡ್ಡದು. ಆದರೆ, ಉಳಿದ ದೇಶಗಳು ಅರ್ಥ ಮತ್ತು ಕಾಮಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಇದು ಭಾರತ ಮತ್ತು ಇತರ ದೇಶಗಳಿಗಿರುವ ವ್ಯತ್ಯಾಸ ಎಂದು ಹೇಳಿದರು.

ಸಂಸ್ಕಾರವಿದ್ದಲ್ಲಿ ಎಲ್ಲಾ ಒಳ್ಳೆಯ ಗುಣಗಳು ತಾನಾಗಿಯೇ ಬರುತ್ತವೆ. ವ್ಯಕ್ತಿಯು ಇತರರಿಂದಲೇ ಒಳ್ಳೆಯ ಮಾತುಗಳನ್ನು ತೆಗೆದುಕೊಳ್ಳುತ್ತಾನೆ. ತಪ್ಪು ಎಂದು ಗೊತ್ತಾದರೆ ಮತ್ತೆ ತಪ್ಪು ಮಾಡುವುದಿಲ್ಲ ಎಂದು ಹೇಳಿದರು.

ಶೃಂಗೇರಿ ಪೀಠದ ಧರ್ಮಾಧಿಕಾರಿ ವಿ.ಎಸ್‌. ಗೌರಿಶಂಕರ್‌ ಮಾತನಾಡಿ, ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿಕೊಳ್ಳುವ ಅವಶ್ಯಕತೆ ಈಗ ಹೆಚ್ಚಿದೆ. ಹೊಸ-ಹೊಸ ವಿದ್ಯೆಗಳು ನಮ್ಮನ್ನು ಮೋಹಗೊಳಿಸುತ್ತಿವೆ. ಅದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯನ್ನು ನಾವು ಹೊಂದಿದ್ದೇವೆ. ಆದರೆ, ಇದು ಸುಳ್ಳು. ಸಮಾಜದಲ್ಲಿ ಹಿರಿಯರು ಒಳ್ಳೆಯ ಸಂಸ್ಕೃತಿ ಮತ್ತು ವಾತಾವರಣವನ್ನು ಬೆಳೆಸುತ್ತಿದ್ದಾರೆ. ಇದನ್ನು ಬೆಳೆಸಿಕೊಂಡು ಹೋಗುವುದು ವ್ಯಕ್ತಿ ಮತ್ತು ಸಂಘ-ಸಂಸ್ಥೆಗಳ ಕೆಲಸ ಎಂದರು.

ಶಾಸಕ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ನಗರದಲ್ಲಿ ಸಾಂಸ್ಕೃತಿಕ ಕಂಪನ್ನು ಹರಡುವುದು ಮತ್ತು ಪ್ರಜ್ಞಾವಂತರನ್ನು ಪುರಸ್ಕರಿಸುವುದು ತಮ್ಮ ಸಂಸ್ಥೆಯ ಉದ್ದೇಶ. ಸಮಾಜವನ್ನು ಜಾಗೃತಿಗೊಳಿಸಿ ಜಾತ-ಮತ ಭೇದವಿಲ್ಲದೆ ಕಾರ್ಯಕ್ರಮವನ್ನು ನೀಡಲಾಗುತ್ತದೆ. ಇತ್ತೀಚೆಗೆ ದೇವರು ಜಾತಿಗೆ ಸೀಮಿತವಾಗುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಎನ್ನುವುದನ್ನು ಸಾಧಿಸಿ ತೋರಿಸುವ ಕೆಲಸವನ್ನು ತಮ್ಮ ಸಂಸ್ಥೆ ಮಾಡುತ್ತಿದೆ ಎಂದರು.

ಶ್ರೀಗಂಧದ ಕಾರ್ಯಕ್ರಮಕ್ಕೆ ವರ್ಷಕ್ಕೊಮ್ಮೆ ಬಂದು ಆಶೀರ್ವಚನ ನೀಡಬೇಕೆಂದು ಈಶ್ವರಪ್ಪ ಅವರು ಸ್ವಾಮೀಜಿ ಅವರಲ್ಲಿ ವಿನಂತಿಸಿದರು.

ಶಿವಮೊಗ್ಗದಲ್ಲಿ ಮೊನ್ನೆ ಪುನರುಜ್ಜೀವನಗೊಂಡ ಶೃಂಗೇರಿ ಶಂಕರಮಠದ ಶಾರದಾಂಬೆ, ಮಹಾಗಣಪತಿ, ಚಂದ್ರಮೌಳೇಶ್ವರ ಮತ್ತು ಶಂಕರಾಚಾರ್ಯರ ವಿಗ್ರಹವನ್ನು ಕೆ.ಎಸ್‌. ಈಶ್ವರಪ್ಪ ಅವರು, ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಮಠದ ವತಿಯಿಂದ ಶಾಲು ಹೊದಿಸಿ ಫಲಮಂತ್ರಾಕ್ಷತೆ ನೀಡಿ ಗೌರವಿಸಲಾಯಿತು. ಇದೇ ರೀತಿ ಕಾರ್ಯಕ್ರಮಕ್ಕೆ ಆಗಮಿಸಿ ಭಕ್ತರನ್ನು ಆಶೀರ್ವಚಿಸಿದ ಸ್ವಾಮೀಜಿಯವರಿಗೂ ಸಹ ಈಶ್ವರಪ್ಪ ಕುಟುಂಬದವರು ಫಲಪುಷ್ಪ ಸಮರ್ಪಿಸಿದರು. ಮಠದ ಧರ್ಮಾಧಿಕಾರಿ ಗೌರಿಶಂಕರ್‌ ಅವರನ್ನೂ ಸಹ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ