ಸೈಬರ್‌ ಕ್ರೈಂ ವಿರುದ್ಧ ಕಠಿಣ ಕ್ರಮ

ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಪೊಲೀಸರಿಗೆ ಸೂಚನೆ

Team Udayavani, Jul 8, 2019, 12:21 PM IST

ಶಿವಮೊಗ್ಗ: ಟಿಕ್‌ಟಾಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಅಥವಾ ಅವಹೇಳನ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಡಾ| ಎಂ. ಅಶ್ವಿ‌ನಿ ತಿಳಿಸಿದರು.

ನಗರದ ಡಿಎಆರ್‌ ಸಭಾಂಗಣದಲ್ಲಿ ಶನಿವಾರ ಎಸ್ಸಿ-ಎಸ್ಟಿ ಮುಖಂಡರೊಂದಿಗೆ ಕುಂದುಕೊರತೆ ಸಭೆಯಲ್ಲಿ ದೂರುಗಳನ್ನು ಆಲಿಸಿ ಮಾತನಾಡಿದ ಅವರು, ಟಿಕ್‌ಟಾಕ್‌ ಬಗ್ಗೆ ನಮಗೂ ಅಸಮಾಧಾನವಿದೆ. ಯಾವುದೇ ಸಮುದಾಯದ ನಾಯಕರು, ಸಮಾಜದ ಬಗ್ಗೆ ಅವಹೇಳನ ಮಾಡುವುದು ಅಪರಾಧ. ಆ ನಿಟ್ಟಿನಲ್ಲಿ ಪ್ರಾಥಮಿಕವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಪುನರಾವರ್ತನೆಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸ್‌ ಠಾಣೆಗೆ ಯಾರೇ ದೂರು ನೀಡಲು ಹೋದರೂ ಸೌಜನ್ಯದಿಂದ ನಡೆದುಕೊಳ್ಳುವಂತೆ ಜಿಲ್ಲೆಯ ಡಿವೈಎಸ್‌ಪಿಗಳು, ಸಿಪಿಐಗಳು ಹಾಗೂ ಪಿಎಸ್‌ಐಗಳಿಗೆ ಸಲಹೆ ನೀಡಿದರು. ಠಾಣೆಗೆ ಬಂದವರನ್ನು ಗೌರವದಿಂದ ಕಾಣಬೇಕು. ಕೆಲಸದ ಒತ್ತಡದ ನಡುವೆಯೂ ಸಮಸ್ಯೆಗಳನ್ನು ಸಮಾಧಾನದಿಂದ ಕೇಳಬೇಕು ಎಂದು ಸಲಹೆ ನೀಡಿದರು.

ಹೊಳೆಹೊನ್ನೂರು ಮತ್ತು ಕುಂಸಿ ಠಾಣಾ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಭದ್ರಾವತಿ ಮತ್ತು ಶಿವಮೊಗ್ಗ ಡಿವೈಎಸ್‌ಪಿಗಳು ವಾರಕ್ಕೆ ಎರಡು ದಿನ ಆಯಾ ಠಾಣೆಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು. ಆ ನಿಟ್ಟಿನಲ್ಲಿ ವಾರದಲ್ಲಿ ಒಂದು ದಿನ ಸಾರ್ವಜನಿಕರು ಸೂಚಿಸುವ ಸ್ಥಳಕ್ಕೆ ತಾವೂ ಸೇರಿ ಹಿರಿಯ ಅಧಿಕಾರಿಗಳು ಬರುತ್ತಾರೆ ಎಂದು ತಿಳಿಸಿದರು.

ಸ್ಮಶಾನ ಭೂಮಿ ಬಗ್ಗೆ ಪತ್ರದಲ್ಲಿ ಬರೆದುಕೊಟ್ಟರೆ ಡಿಸಿ ಗಮನಕ್ಕೆ ತರಲಾಗುವುದು. ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿರುವ ಮರಗಳನ್ನು ಕಡಿಮೆ ದರಲ್ಲಿ ಆಶ್ರಯ ಮನೆ ನಿರ್ಮಾಣಕ್ಕೆ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳು ಒಲವು ತೋರಿದ್ದು, ಆ ಬಗ್ಗೆ ಮತ್ತೂಮ್ಮೆ ಚರ್ಚಿ ಸಲಾಗುವುದು ಎಂದರು. ಭೂ ವಿವಾದಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧಿಕಾರಿಗಳ ಸಮಕ್ಷಮದಲ್ಲಿ ಸಮಸ್ಯೆ ಆಲಿಸುವಂತೆ ಡಿವೈಎಸ್ಪಿ ಮತ್ತು ಸಿಪಿಐಗಳಿಗೆ ಸೂಚಿಸಿದ್ದೇನೆ. ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡುವ ಪ್ರಯತ್ನ ನಮ್ಮದಾಗಿದೆ. ಅದು ಸಾಧ್ಯವಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ಎಎಸ್‌ಪಿ ಡಾ| ಎಚ್.ಟಿ. ಶೇಖರ್‌, ಡಿವೈಎಸ್‌ಪಿಗಳಾದ ಎನ್‌. ಯತೀಶ್‌, ಉಮೇಶ್‌ ನಾಯ್ಕ, ಗಣೇಶ್‌ ಹೆಗಡೆ, ವೀರಭದ್ರಯ್ಯ ಇದ್ದರು.

ಸಭೆಯಲ್ಲಿ ಕೇಳಿ ಬಂದಿದ್ದು
ಶಿವಮೊಗ್ಗದ ಶೇಷಾದ್ರಿಪುರದಲ್ಲಿರುವ ಮದ್ಯದಂಗಡಿ ತೆರವು. ಮೀನಾಕ್ಷಿ ಭವನ ಎದುರು ಪಾರ್ಕಿಂಗ್‌ ವ್ಯವಸ್ಥೆ ಸರಿಪಡಿಸುವುದು. ತೀರ್ಥಹಳ್ಳಿಯಲ್ಲಿ ಆಶ್ರಯ ಮನೆಗಳಿಗೆ ಕಡಿಮೆ ದರಕ್ಕೆ ಮರಳು ಮತ್ತು ಕಲ್ಲು ಪೂರೈಕೆ, ಮೇಲ್ವರ್ಗದವರಿಂದ ದಲಿತರ ಮೇಲೆ ನಿರಂತರ ದಬ್ಟಾಳಿಕೆ. ಸಾಗರದ ಖಂಡಿಕಾ ಗ್ರಾಪಂ ವ್ಯಾಪ್ತಿಯ ದಲಿತ ಮನೆಗಳಿಗೆ ನೀರು ಕೊಡದ ಮೇಲ್ವರ್ಗದವರು. ಸಾಗರ ಗ್ರಾಮಾಂತರ ಠಾಣೆಯಲ್ಲಿ ಸಭೆ ಕರೆಯದಿರುವುದು. ಟೌನ್‌ನಲ್ಲಿ ಪಿಲೀಸ್‌ ಬೀಟ್ ಅವ್ಯವಸ್ಥೆ, ಟಿಕ್‌ಟಾಕ್‌ನಲ್ಲಿ ಅವಹೇಳನಕಾರಿ ವರ್ತನೆಗೆ ಕ್ರಮ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯಕ್ಕೆ ಕಡಿವಾಣ, ಅಸಹಾಯಕರ ಮೇಲೆ ಪೊಲೀಸರ ದಬ್ಟಾಳಿಕೆ ಸೇರಿ ಹಲವು ದೂರುಗಳನ್ನು ದಲಿತ ಮುಖಂಡರು ಪೊಲೀಸರ ಎದುರು ಹೇಳಿಕೊಂಡರು.

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ