ಯೋಗದಿಂದ ಉತ್ತಮ ಆರೋಗ್ಯ: ಡಿಸಿ

ಪರಿಸರ ಸ್ನೇಹಿ ಜೀವನಕ್ರಮ ಅಳವಡಿಸಿಕೊಳ್ಳಿ

Team Udayavani, Jun 24, 2019, 5:20 PM IST

ಶಿವಮೊಗ್ಗ: ಸ್ಕೌಟ್ಸ್‌ ಚಟುವಟಿಕೆಗಳ ಪುಸ್ತಕವನ್ನು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಬಿಡುಗಡೆಗೊಳಿಸಿದರು

ಶಿವಮೊಗ್ಗ: ಉತ್ತಮ ಆರೋಗ್ಯಕ್ಕಾಗಿ ಪರಿಸರ ಸಂರಕ್ಷಣೆ ಮತ್ತು ಯೋಗಾಭ್ಯಾಸ ಅತ್ಯಂತ ಅವಶ್ಯಕ. ಪ್ರತಿಯೊಬ್ಬರು ಸಾಧ್ಯವಾದಷ್ಟ್ರು ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗಬೇಕು. ಹಸಿರೇ ಉಸಿರು, ಉಸಿರೇ ಬದುಕು ಎಂಬಂತೆ ಇಂದಿನ ಒತ್ತಡದ ಬದುಕಿನಲ್ಲಿ, ಮಾಲಿನ್ಯಯುಕ್ತ ಪರಿಸರದಲ್ಲಿ ಉತ್ತಮ ಆರೋಗ್ಯವನ್ನು ಪಡೆಯುವುದು ಅಸಾಧ್ಯವೆಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ತಿಳಿಸಿದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಜಿಲ್ಲಾ ಸಂಸ್ಥೆ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆಯ ಪ್ರಯುಕ್ತ ಬೀಜದುಂಡೆ ಸಿದ್ಧಪಡಿಸುವಿಕೆ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ 2019-20ನೇ ಸಾಲಿನ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಯೋಜನೆ ಪುಸ್ತಕ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬರಗಾಲದಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ, ಹೀಗೆ ಪರದಾಡುವ ಬದಲು ಮಳೆಗಾಲದಲ್ಲಿ ಮಳೆಯ ನೀರನ್ನು ಭೂಮಿಗೆ ಇಂಗಿಸುವುದು, ಗಿಡಗಳನ್ನು ನೆಡುವುದಷ್ಟೇ ಅಲ್ಲ ಅದನ್ನು ಪೋಷಿಸಬೇಕು. ಒಣ ಕಸ ಮತ್ತು ಹಸಿ ಕಸಗಳನ್ನು ವಿಂಗಡಿಸಿ ಹಸಿ ಕಸವನ್ನು ಗೊಬ್ಬರವಾಗಿ ಸಿದ್ಧಪಡಿಸಿಕೊಳ್ಳಬೇಕು, ಮನೆಯಲ್ಲಿ ಸೋಲಾರ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಹೀಗೆ ಪರಿಸರ ಸ್ನೇಹಿ ಮನೆನಿರ್ಮಾಣವಾಗಬೇಕು ಎಂದು ತಿಳಿಸಿದರು.

ಎಚ್.ಡಿ.ರಮೇಶ್‌ ಶಾಸ್ತ್ರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆ ಮತ್ತು ಕಾಲೇಜಿನ ಸ್ಕೌಟ್ಸ್‌, ಗೈಡ್ಸ್‌, ರೋವರ್ ಮತ್ತು ರೇಂಜರ್ ಇದ್ದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಾಯಸ ಕಾರ್ಯಕ್ರಮ ನಿರ್ವಹಿಸಿದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತರು (ಸ್ಕೌಟ್ಸ್‌) ಎಸ್‌.ಉಮೇಶ ಶಾಸ್ತ್ರಿ, ಶಕುಂತಲಾ ಚಂದ್ರಶೇಖರ್‌, ಜಿಲ್ಲಾ ಖಜಾಂಚಿ ಚುಡಾಮಣಿ ಇ. ಪವಾರ್‌, ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಬಿಂದು ಕುಮಾರ, ಜಿಲ್ಲಾ ಸಹ ಕಾರ್ಯದರ್ಶಿ ವೈ.ಆರ್‌. ವೀರೇಶಪ್ಪ, ಜಿಲ್ಲಾ ತರಬೇತಿ ಆಯುಕ್ತರು (ಸ್ಕೌಟ್ಸ್‌) ಟಿ.ಎ. ಮಂಜುನಾಥಾಚಾರ್‌, ಜಿಲ್ಲಾ ತರಬೇತಿ ಆಯುಕ್ತರು (ಗೈಡ್ಸ್‌) ಕಾತ್ಯಾಯಿಸಿ ಸಿ.ಎಸ್‌., ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಡಿ.ಎನ್‌. ನೂರ್‌ ಅಹಮ್ಮದ್‌ ಮತ್ತು ಸಹ ಕಾರ್ಯದರ್ಶಿ ಎ.ವಿ.ರಾಜೇಶ್‌ ಹಾಗೂ ಸ್ಕೌಟರ್ ಮತ್ತು ಗೈಡರ್ಗಳು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ