ಧರ್ಮ ಆಚರಣೆಗೆ ಶಾಸ್ತ್ರಗಳ ಜ್ಞಾನ ಅಗತ್ಯ: ಸ್ವಾಮೀಜಿ

ಶಂಕರರ ಉಪದೇಶಗಳನ್ನು ಪಾಲಿಸಲು ಕರೆ

Team Udayavani, Sep 11, 2019, 5:32 PM IST

ಶೃಂಗೇರಿ: ಶ್ರೀ ಶಾರದಾ ಪೀಠದ ಗುರುನಿವಾಸದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಟಾರ ಬ್ರಾಹ್ಮಣ ಸಂಘ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಪುಸ್ತಕ ಬಿಡುಗಡೆಗೊಳಿಸಿದರು.

ಶೃಂಗೇರಿ: ಧರ್ಮದ ಆಚರಣೆಗೆ ಶಾಸ್ತ್ರಗಳ ಜ್ಞಾನ ಬೇಕು. ಶಾಸ್ತ್ರಗಳಲ್ಲಿನ ನಿಯಮಗಳನ್ನು ನಾವು ಪಾಲಿಸಿದರೆ ಮಾತ್ರ ಜನ್ಮ ಸಾರ್ಥಕವಾಗುತ್ತದೆ ಎಂದು ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ನರಸಿಂಹವನದ ಗುರುನಿವಾಸದಲ್ಲಿ ಮಂಗಳವಾರ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಟಾರ ಬ್ರಾಹ್ಮಣ ಸಂಘದವರು ಆಯೋಜಿಸಿದ್ದ ವಸ್ತ್ರ ಕಾಣಿಕೆ, ಸಮಷ್ಟಿ ಭಿಕ್ಷಾವಂದನೆ, ಪಾದಪೂಜೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶ್ರೀ ಶಂಕರ ಭಗವತ್ಪಾದರು ಸನಾತನ ಧರ್ಮದ ಒಳಿತಿಗಾಗಿ ದೂರದೃಷ್ಟಿತ್ವದಿಂದ ದೇಶದ ನಾಲ್ಕು ಮೂಲೆಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಧರ್ಮದ ಉದ್ಧಾರಕ್ಕಾಗಿ ಸ್ವಾರ್ಥವಿಲ್ಲದೆ ದುಡಿದ ಶ್ರೀಶಂಕರರ ಉಪದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಸಂಘಗಳು ಒಗ್ಗಟ್ಟಿನಿಂದ ಯುವಪೀಳಿಗೆಗೆ ಧರ್ಮ ಹಾಗೂ ಶಾಸ್ತ್ರಗಳ ಬಗ್ಗೆ ಚಿಂತನೆ ಮೂಡಿಸುವ ಪ್ರಾಮಾಣಿಕ ಯತ್ನ ಮಾಡಬೇಕು. ಜೀವನದ ಶ್ರೇಯಸ್ಸಿಗಾಗಿ ಇರುವ ಧರ್ಮ ಚಿಂತಕರ ಸಮೂಹ ನೀಡಿದ ಉನ್ನತ ಅಧ್ಯಾತ್ಮ ಧಾರೆ ಎಂದರು.

ಧರ್ಮ ಎಂದರೆ ಸಂಸ್ಕೃತಿ ಹಾಗೂ ತತ್ವಜ್ಞಾನಗಳು ಇರುವ ಅಧ್ಯಾತ್ಮ ಸಾಗರ. ಧರ್ಮದಲ್ಲಿ ಎರಡು ಭಾಗಗಳಿವೆ. ಸಾಮಾನ್ಯ ಹಾಗೂ ವಿಶೇಷ ಧರ್ಮ. ಪ್ರತಿಯೊಬ್ಬ ವ್ಯಕ್ತಿ ಮಾಡುವ ಸಾಮಾನ್ಯ ಧರ್ಮ ಸತ್ಯ ,ಅಹಿಂಸೆಯನ್ನು ಬೋಧಿಸುತ್ತದೆ. ಜೀವನದಲ್ಲಿ ಅತಿಯಾಸೆ ಪಡಬಾರದು ಎಂಬ ನಿರ್ದೇಶನ ನೀಡುತ್ತದೆ. ವಿಶೇಷ ಧರ್ಮಗಳು ಬ್ರಹ್ಮಚಾರಿ, ಗೃಹಸ್ಥ ಹಾಗೂ ಸನ್ಯಾಸಿಗಳಿಗೆ ಸಂಬಂಧಿಸಿವೆ. ಸನ್ಯಾಸಿಯ ಧರ್ಮವನ್ನು ಬ್ರಹ್ಮಚಾರಿಗಳು ಮಾಡಲಾಗದು. ಗೃಹಸ್ಥರು ಅವರ ಧರ್ಮವನ್ನು ಮಾತ್ರ ಪಾಲಿಸಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರೂ ಶಾಸ್ತ್ರಗಳಲ್ಲಿ ಹೇಳಿದ ಮಾತುಗಳನ್ನು ಮನನ ಮಾಡಿಕೊಳ್ಳಬೇಕು. ಮಾನವನ ಒಳಿತಿಗಾಗಿ ಶಾಸ್ತ್ರಗಳು ಹಲವು ನಿಯಮಗಳನ್ನು ರೂಪಿಸಿವೆ. ವೇದ,ಪುರಾಣ, ಶಾಸ್ತ್ರಗಳನ್ನು ಮಾಡಿರುವುದು ಭಗವಂತ. ಭಗವದ್‌ ಚಿಂತನೆ ನಿರಂತರವಾಗಿದ್ದರೆ ಮಾತ್ರ ಸರ್ವರಿಗೂ ಒಳಿತಾಗುತ್ತದೆ. ಶಾಸ್ತ್ರಗಳನ್ನು ಮೀರಿ ಯಾರು ಹೋಗುತ್ತಾರೋ ಅವರಿಗೆ ಕಷ್ಟ ಎದುರಾಗುತ್ತದೆ. ಶಾಸ್ತ್ರಗಳ ಬಗ್ಗೆ ಪ್ರಶ್ನೆ ಮಾಡುವ ಮನೋಭಾವ ಬಿಡಬೇಕು ಎಂದರು.

ಶ್ರೀಮಠದ ಹಿರಿಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ಹೆಬ್ಬಿಗೆ ಚಂದ್ರಶೇಖರ್‌ ರಾವ್‌ ಅವರು ರಚಿಸಿದ ‘ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಟಾರ ಬ್ರಾಹ್ಮಣರು-ಇತಿಹಾಸ ಮತ್ತು ಸಂಸ್ಕೃತಿ’ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಬೆಂಗಳೂರು, ಮಂಗಳೂರು, ಕೊಪ್ಪ, ತೀರ್ಥಹಳ್ಳಿ, ಶಿವಮೊಗ್ಗದ ಹೆಬ್ಟಾರ ಸಂಘದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಶಿಷ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೆಬ್ಟಾರ ಮಹಾಸಭಾದ ಅಧ್ಯಕ್ಷ ಗೋಪಾಲಕೃಷ.ಜಿ.ಸಿ, ತಾಲೂಕು ಹೆಬ್ಟಾರ ಸಂಘದ ಅಧ್ಯಕ್ಷ ಹೆಬ್ಬಿಗೆ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ದೀಪಕ್‌ ಹುಲ್ಕುಳ್ಳಿ, ಕಾರ್ಯದರ್ಶಿ ಕೀಳಂಬಿ ರಾಜೇಶ್‌, ಸಂಚಾಲಕ ಹೆಬ್ಬಿಗೆ ಗಣೇಶ್‌, ಶ್ರೀ ಶಾರದಾ ಸೌಹಾರ್ದ ಸಂಘದ ಅಧ್ಯಕ್ಷ ಶಿವಶಂಕರ್‌ ಹಾಜರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ