ಆದಿಶಂಕರರಿಂದ ಮಾನವರ ಅಜ್ಞಾನ ದೂರ

ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅಭಿಮತ

Team Udayavani, Jul 14, 2019, 3:20 PM IST

ಶೃಂಗೇರಿ: ಹೆಬ್ಟಾಗಿಲು ಲಕ್ಷಿ ್ಮೕವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಧುಶೇಖರ ಭಾರತೀ ಸ್ವಾಮೀಜಿ ಪೂಜೆ ಸಲ್ಲಿಸಿದರು.

ಶೃಂಗೇರಿ: ಸನಾತನ ಧರ್ಮ ಪರಂಪರೆಗೆ ನಾಸ್ತಿಕರಿಂದ ಕಷ್ಟ ಬಂದ ಸಂದರ್ಭದಲ್ಲಿ ಆದಿಶಂಕರರು ಅವತರಿಸಿದರು. ನಾಸ್ತಿಕ ಮತ ಸರಿಯಲ್ಲ, ಆಸ್ತಿಕ ಮತವೇ ಸರಿ ಎಂಬುದರ ಬಗ್ಗೆ ಶಂಕರರು ಸಮರ್ಥನೆ ನೀಡಿ, ನಾಸ್ತಿಕರಿಗೂ ಇದನ್ನು ಮನವರಿಕೆ ಮಾಡಿಕೊಟ್ಟರು ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಪಟ್ಟಣದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಹೆಬ್ಟಾಗಿಲು ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಶುಕ್ರವಾರ ಆಷಾಢ ಏಕಾದಶಿಯಂದು ಭೇಟಿ ನೀಡಿದ ಅವರು, ಸ್ವಾಮಿಯ ವಿಶೇಷ ಪೂಜೆ ನೆರವೇರಿಸಿದ ಬಳಿಕ, ಜಿಎಸ್‌ಬಿ ಸಭಾಭವನದಲ್ಲಿ ಅನುಗ್ರಹ ಭಾಷಣ ಮಾಡಿದರು.

ಶಂಕರರು ಜನರಲ್ಲಿ ನೆಲೆಸಿದ್ದ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಬೆಳಕು ತೋರಿ, ಜಗತ್ತಿನ ಸಮಸ್ತರಿಗೂ ಅನ್ವಯಿಸುವ ಮಾರ್ಗದರ್ಶನ ಮಾಡಿದರು. ಅವರ ರಚನೆಯ ಸರಳ ಸ್ತೋತ್ರ ಭಜಗೋವಿಂದಂ ಅನ್ನು ಸರಿಯಾಗಿ ಅರಿತು ಆಚರಣೆಗೆ ತಂದುಕೊಂಡಲ್ಲಿ ಅಂತಹವರ ಜೀವನ ಪಾವನವಾಗುವುದು ಎಂದು ತಿಳಿಸಿದರು.

ನಮ್ಮ ಹಿಂದಿನವರು ಎಷ್ಟೇ ಕಷ್ಟ ಬಂದರೂ ತಮ್ಮ ಧರ್ಮ ಮತ್ತು ಸಂಪ್ರದಾಯವನ್ನು ಮಾತ್ರ ಬಿಡಲಾರೆವು ಎಂಬ ದೃಢ ಮನೋಭಾವವನ್ನು ಹೊಂದಿದ್ದರು. ಮನುಷ್ಯ ಜನ್ಮ ಧರ್ಮಕ್ಕಾಗಿ ಅವತರಿಸಿದ ಜೀವನವಾಗಿದೆ. ಶಾಸ್ತ್ರಗಳಲ್ಲಿ ತಿಳಿಸಿರುವಂತೆ ಯಾವುದೇ ಧರ್ಮದ ಆಚರಣೆ ಮಾಡುವ ಸಾಮರ್ಥ್ಯ ಕೇವಲ ಮನುಷ್ಯ ಜೀವಕ್ಕೆ ಮಾತ್ರ ಇರುತ್ತದೆ. ಭಗವಂತನ ಕೊಡುಗೆಯಾಗಿರುವ ಮನುಷ್ಯ ಜೀವನವನ್ನು ಧರ್ಮಾಚರಣೆ ಮತ್ತು ಒಳ್ಳೆಯ ಕೆಲಸ ಮಾಡುವುಕ್ಕಾಗಿಯೇ ನಾವು ವಿನಿಯೋಗ ಮಾಡಬೇಕು ಎಂದು ತಿಳಿಹೇಳಿದರು.

ಭಗವಂತ ಒಳ್ಳೆಯವರಿಗೇ ಕಷ್ಟ ಕೊಡುತ್ತಾನೆ ಎಂಬ ಮಾತಿದೆ. ಇದಕ್ಕೆ ಪುರಾಣದಲ್ಲೇ ಸಮಾಧಾನವೂ ಇದೆ. ಭಗವಂತ ಯಾರಿಗೆ ಪೂರ್ಣವಾಗಿ ಅನುಗ್ರಹ ಮಾಡಬೇಕೆಂದು ನಿರ್ಧರಿಸುತ್ತಾನೋ ಅಂತಹವರಿಗೆ ಆತ ಹಲವು ಬಗೆಯ ಪರೀಕ್ಷೆ ಮಾಡುತ್ತಾನೆ. ಈ ಕಠಿಣ ಪರೀಕ್ಷೆಯಲ್ಲಿ ಧರ್ಮ ವಿಚಲಿತರಾಗದವರಿಗೆ ನಿಸ್ಸಂಶಯವಾಗಿ ನನ್ನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂದು ಭಗವಂತ ಪುರಾಣದಲ್ಲಿ ಹೇಳಿದ್ದಾನೆ ಎಂದರು. ಧರ್ಮರಾಜ ತನಗೆ ಎಷ್ಟೇ ಕಷ್ಟ ಎದುರಾಗಿದ್ದರೂ ದೃಢವಾದ ಮನಸ್ಸು ಹೊಂದಿದ್ದರಿಂದ ಆತ ಧರ್ಮ ಮಾರ್ಗದಿಂದ ಕದಲಲಿಲ್ಲ. ಇದರಿಂದಾಗಿಯೇ ಧರ್ಮರಾಜನಿಗೂ ಮತ್ತು ಆತನನ್ನು ಅನುಸರಿಸಿದ ಆತನ ಸೋದರರಿಗೂ ಭವಂತನ ಪೂರ್ಣಾನುಗ್ರಹ ದೊರೆಯಿತು. ಹೀಗಾಗಿ, ಇಂದಿಗೂ ಧರ್ಮರಾಜನ ಹೆಸರನ್ನು ನಾವು ಸ್ಮರಿಸುತ್ತೇವೆ. ನಮ್ಮ ಪರಂಪರೆಯನ್ನು ಹೆಮ್ಮೆಯಿಂದ ಆಚರಿಸಬೇಕೆಂದು ಹೇಳಿದರು.

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ನಮಗೆ ಪ್ರಿಯವಾದ ಸಮಾಜವಾಗಿದೆ. ಗುರುಗಳ ಅನುಗ್ರಹ ಮತ್ತು ಅಮೃತ ಹಸ್ತದಿಂದ ಶಿಲಾನ್ಯಾಸಗೊಂಡ ಈ ಆಲಯದಲ್ಲಿ ಭಗವಂತನ ವಿಶೇಷ ಸಾನ್ನಿಧ್ಯವಿದೆ. ಗುರುಗಳು ನಿಮಗೆಲ್ಲರಿಗೂ ವಿಶೇಷ ಆಶೀರ್ವಾದ ಮಾಡಿದ್ದಾರೆ ಎಂದರು. ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಆರ್‌.ವೆಂಕಟೇಶ ಪಂಡಿತ್‌ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿ, ಭಿಕ್ಷಾ ವಂದನೆ ಮಾಡಿದರು.

ಕೆ.ಪ್ರಕಾಶ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ವಿ.ಮೋಹನ್‌ ಸ್ವಾಗತಿಸಿ, ನಾಗೇಶ ಕಾಮತ್‌ ನಿರೂಪಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ