ಕಾನನ ನಡುವಿನ ಶಾಲೆಯ ಸಾಧನೆ

•ನಲಿ-ಕಲಿಯಲ್ಲಿ ತಾಲೂಕಿಗೇ ಪ್ರಥಮ ಸ್ಥಾನ ಉಳಿಸಿಕೊಂಡ ಹೂಡ್ಲಮನೆ ಶಾಲೆ

Team Udayavani, Sep 5, 2019, 3:46 PM IST

ಸಿದ್ದಾಪುರ: ಪಶ್ಚಿಮ ಘಟ್ಟದ ದಟ್ಟ ಕಾಡಿನ ಮಡಿಲಲ್ಲಿ ಒಂದು ಶಾಲೆ. ಹತ್ತು ಹಲವು ಮೂಲ ಸೌಕರ್ಯಗಳನ್ನು ಪಡೆದು ಹೊರ ನೋಟಕ್ಕೆ ಥಳಥಳ ಹೊಳೆಯುವ ನಗರದ ಮಾದರಿ ಶಾಲೆಗಳಂತಲ್ಲ. ತನಗಿರುವ ಮಿತಿಯಲ್ಲೇ ಸರಕಾರಿ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಂಡು ಅದರೊಟ್ಟಿಗೇ ಅಲ್ಲಿನ ಪಾಲಕರ ಸಂಪೂರ್ಣ ಸಹಕಾರದಿಂದ ಜೀವ ತುಂಬಿಕೊಂಡ ಪುಟ್ಟ ಶಾಲೆ. ಪಶ್ಚಿಮಘಟ್ಟದ ನಟ್ಟನಡುವಿನ ಪುಟ್ಟ ಊರಾದ ಹೂಡ್ಲಮನೆ ಎನ್ನುವಲ್ಲಿನ ಸಹಿಪ್ರಾ ಶಾಲೆ ಅಲ್ಲಿದ್ದುಕೊಂಡೇ ಸಾಧಿಸಿದ ಪ್ರಗತಿ ಅಗಾಧವಾದದ್ದು. ಪಟ್ಟಣ ಪ್ರದೇಶದ ಶಾಲೆಗಳೂ ಪಡೆಯಲಾಗದ ಶೈಕ್ಷಣಿಕ ಯಶಸ್ಸು ಈ ಶಾಲೆಯದ್ದು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಈ ಶಾಲೆ ದಾಖಲೆಯ ಪ್ರಗತಿಯನ್ನೇ ಸಾಧಿಸಿದೆ.

ಕಾಡ ನಡುವಿನ ಮಕ್ಕಳ ಸಾಧನೆ: ಮಕ್ಕಳೊಳಗಿನ ಅದ್ಭುತ ಕ್ರೀಯಾಶೀಲತೆಗೆ ಸೂಕ್ತ ಮಾರ್ಗದರ್ಶನ ದೊರೆತರೆ ಊಹೆ ಮಾಡಲಾಗದ ರೀತಿಯಲ್ಲಿ ಅವರೊಳಗಿನ ಚೈತನ್ಯ ಪುಟಿಯುತ್ತದೆ ಎನ್ನಲು ಈ ಶಾಲೆಯ ಮಕ್ಕಳು ಪ್ರತ್ಯಕ್ಷ ಉದಾಹರಣೆ. ಕಾಡ ನಡುವಿನ ಈ ಶಾಲೆಯಲ್ಲಿ ಶಿಕ್ಷಣದ ಕುರಿತಾದ ಎಲ್ಲ ಯೋಜನೆಗಳು, ಕಾರ್ಯಕ್ರಮಗಳು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳ್ಳುವ ಮೂಲಕ ಶೈಕ್ಷಣಿಕ ಕ್ರಾಂತಿಯೊಂದು ಅಬ್ಬರದ ಪ್ರಚಾರವಿಲ್ಲದೇ ನಡೆಯುತ್ತಿದೆ.

ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಹೂಡ್ಲಮನೆ ಶಿರಸಿ, ಸಿದ್ದಾಪುರಗಳಿಂದ 40 ಕಿಮೀ.ದೂರದಲ್ಲಿದೆ. ಇಲ್ಲಿರುವವರು ಅಪ್ಪಟ ಕೃಷಿಕರು ಮತ್ತು ಕೃಷಿ ಕಾರ್ಮಿಕರು. ಅಂಥ ಸ್ಥಿತಿವಂತರೇನಲ್ಲದ ಬಹುತೇಕ ಎಲ್ಲ ಜಾತಿ, ಜನಾಂಗದವರು ವಾಸಿಸುವ ಈ ಊರಿನ ಜನತೆಗೆ ತಮ್ಮ ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕೆಂಬ ಕನಸು. ತಮ್ಮೂರಿನ ಪ್ರಾಥಮಿಕ ಶಾಲೆಗಾಗಿ, ಅಲ್ಲಿನ ಮಕ್ಕಳಿಗಾಗಿ ಏನು ಮಾಡಲೂ ಸಿದ್ಧ ಎನ್ನುವ ಕಳಕಳಿ. ಅದಕ್ಕೆ ಪೂರಕವಾಗಿ ದೊರಕಿದ್ದು ಪಾಲಕ, ಪೋಷಕರಿಗಿಂತ ಹೆಚ್ಚು ಕಾಳಜಿ ಹೊಂದಿದ ಕ್ರಿಯಾಶೀಲ ಶಿಕ್ಷಕರು. ಶಾಲೆ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಕಾಳಜಿ, ವೃತ್ತಿ ನಿಷ್ಠೆ, ಶ್ರದ್ಧೆಗಳಿರುವ ಶಿಕ್ಷಕರ ಶ್ರಮದಿಂದಾಗಿ ಪಟ್ಟಣ ಪ್ರದೇಶಗಳಂತೆ ಸಾಧನೆಯ ಮುಂಚೂಣಿಯಲ್ಲಿದೆ.

ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ನಾಲ್ವರು ಶಿಕ್ಷಕರು. ನಲ್ವತ್ತು ಶಿಕ್ಷಕರ ಸಾಮರ್ಥ್ಯ ಇವರದ್ದು. ಈಗಿನ ಶೈಕ್ಷಣಿಕ ಪದ್ಧತಿಯ ಎಲ್ಲ ಯೋಜನೆಗಳನ್ನೂ ಸಮರ್ಪಕವಾಗಿ ಅಳವಡಿಸಿಕೊಂಡು ಉದ್ದೇಶಕ್ಕೆ ಅನುಗುಣವಾಗಿ ಅದರಲ್ಲಿ ಅಪೂರ್ವ ಪ್ರಗತಿ ಸಾಧಿಸಿದ್ದು ಅದಕ್ಕೆ ಸಾಕ್ಷಿ.

ನಲಿಯುತ್ತಲೇ ಕಲಿಯುತ್ತಿರುವ ಮಕ್ಕಳು: ಆಟ, ನೃತ್ಯ, ಗಾಯನ ಮುಂತಾದ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಬೇಕೆನ್ನುವ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿ ನಲಿ-ಕಲಿ ಯೋಜನೆ ಹಲವು ಶಾಲೆಗಳಲ್ಲಿ ಕಾಟಾಚಾರದ ಕಾರ್ಯಕ್ರಮವಾಗಿದ್ದರೆ ಹೂಡ್ಲಮನೆ ಶಾಲೆಯಲ್ಲಿ ಅದು ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಬೆಳೆಸಲು ಬಳಕೆಯಾಗಿದೆ.

ನಲಿಕಲಿ ಯೋಜನೆಯನ್ನು ಈ ರೀತಿಯಲ್ಲೂ ಬಳಸಿಕೊಳ್ಳಲು ಸಾಧ್ಯವೇ ಎನ್ನುವಷ್ಟು ಅಚ್ಚರಿಯಾಗುತ್ತದೆ. ಈ ಶಾಲೆ ತಾಲೂಕಿನಲ್ಲೇ ನಲಿಕಲಿ ಯೋಜನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ತಾಲೂಕಿನ ಉತ್ತಮ ಶಾಲೆ ಸ್ಥಾನವನ್ನು ಉಳಿಸಿಕೊಂಡಿರುವುದರ ಜೊತೆಗೆ ಪ್ರತಿಭಾ ಕಾರಂಜಿಯ ಸ್ಪರ್ಧೆಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲೂ ಪಾಲ್ಗೊಂಡಿದ್ದಾರೆ. ಶಿಕ್ಷಕರ ಮಾರ್ಗದರ್ಶನದಲ್ಲಿ 7 ವರ್ಷ ರಾಷ್ಟ್ರ ಮಟ್ಟದಲ್ಲಿ ವಿಜ್ಞಾನ ಸಂಶೋಧನಾ ಪ್ರಬಂಧವನ್ನು ಮಂಡಿಸಿದ ಹೆಗ್ಗಳಿಕೆಯೂ ಈ ಶಾಲೆಗಿದೆ. ಇಲ್ಲಿನ ಶಿಕ್ಷಕ ವಿ.ಟಿ. ಹೆಗಡೆ ಹಾಗೂ ಶಿಕ್ಷಕಿ ಸಂಶಿಯಾ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನೂ ಪಡೆದಿದ್ದು ಶಿಕ್ಷಕಿ ಸಂಶಿಯಾ ಈ ವರ್ಷದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇಲ್ಲಿನ ಮಕ್ಕಳು ಅಧ್ಯಯನದಲ್ಲೂ ಅಷ್ಟೇ ಪ್ರಗತಿಯಲ್ಲಿದ್ದಾರೆ.

ಸಮುದಾಯದ ಸಹಕಾರ: ಇಲ್ಲಿನ ಮತ್ತೂಂದು ವಿಶೇಷತೆಯೆಂದರೆ ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವ ಅತ್ಯಗತ್ಯ ಎನ್ನುವ ಸರಕಾರದ ಆಶಯ ಇಲ್ಲಿ ಸಾಕಾರಗೊಂಡಿದ್ದು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಕಳೆದ ಹಲವಾರು ವರ್ಷಗಳಿಂದ ನಿರ್ವಹಿಸಿದ, ಪ್ರಸ್ತುತ ಅಧ್ಯಕ್ಷರಾಗಿರುವ ಮೋಹನ ಹೆಗಡೆ ತಮ್ಮ ಸಮಿತಿ ಪದಾಧಿಕಾರಿಗಳ, ಪಾಲಕರ, ಪೋಷಕರ ಸಹಕಾರದಿಂದ ಈ ಶಾಲೆಯನ್ನು ಎಲ್ಲ ರೀತಿಯಲ್ಲೂ ಬೆಳೆಸಿದ್ದಾರೆ.

ಅಧಿಕಾರಿಗಳಿಗೂ ಅಕ್ಕರೆ: ಇಲಾಖೆಗೆ ಹೆಸರು ತರುತ್ತಿರುವ ಹೂಡ್ಲಮನೆ ಶಾಲೆಯ ಪ್ರಗತಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರೋತ್ಸಾಹವೂ ಇದೆ. ಅವರೆಲ್ಲ ಈ ಶಾಲೆಯ ವಿಶೇಷತೆ ಗಮನಿಸಿ, ಮತ್ತಷ್ಟು ಬೆಂಬಲಿಸುತ್ತಿರುವದು ಇನ್ನಷ್ಟು ಸಾಧನೆಯ ಗುರಿಗೆ ಸಹಕಾರಿಯಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ