ಆನೆಶಂಕರ ದೇಗುಲಕ್ಕೆ ಬೇಕಿದೆ ಕಾಯಕಲ್ಪ

ಕ್ರಿ.ಶ. 1528ರಲ್ಲಿ ನಿರ್ಮಿಸಿದ ದೇವಸ್ಥಾನ • ಪುರಾತನ ಬಾವಿಗೆ ಬೇಕು ಪುನರುಜ್ಜೀವನ

Team Udayavani, Aug 12, 2019, 10:47 AM IST

ಸಿಂಧನೂರು: ಸಾಲಗುಂದಾದಲ್ಲಿ ಐತಿಹಾಸಿಕ ಪ್ರಸಿದ್ಧಿ ಹೊಂದಿದ ಆನೆಶಂಕರ ದೇವಸ್ಥಾನ.

ಚಂದ್ರಶೇಖರ ಯರದಿಹಾಳ
ಸಿಂಧನೂರು:
ತಾಲೂಕಿನ ಸಾಲಗುಂದಾ ಗ್ರಾಮದ ಚಿಕ್ಕಗುಡ್ಡದಲ್ಲಿರುವ ಐತಿಹಾಸಿಕ ಆನೆಶಂಕರ ದೇವಸ್ಥಾನಕ್ಕೆ ಪಾಳು ಬಿದ್ದಿದ್ದು ಕಾಯಕಲ್ಪ ನೀಡುವ ಕೆಲಸವಾಗಬೇಕಿದೆ.

ಆನೆಶಂಕರ ದೇವಸ್ಥಾನ ಐತಿಹಾಸಿಕ ಪ್ರಸಿದ್ಧಿ ಹೊಂದಿದೆ. ಇದನ್ನು ಕ್ರಿ.ಶ.1528ರಲ್ಲಿ ಇಟ್ಟಂಗಿ, ಗಚ್ಚು, ಬೆಣಚು ಕಲ್ಲುಗಳಿಂದ ನಿರ್ಮಿಸಲಾಗಿದೆ. ದಶಕಗಳ ಹಿಂದೆ ಉತ್ತಮ ಸ್ಥಿತಿಯಲ್ಲಿದ್ದ ಕಟ್ಟಡವು ಕಳೆದ ಕೆಲವು ವರ್ಷಗಳಿಂದ ಪಾಳು ಬಿದ್ದಿದೆ. ಬಾವಿ ಕುಸಿಯತೊಡಗಿದೆ. ಪ್ರಾಚ್ಯವಸ್ತು ಇಲಾಖೆಯವರೂ ಸಹ ಇದರಕಡೆಗೆ ಗಮನ ಹರಿಸುತ್ತಿಲ್ಲ. ಗ್ರಾಮದ ಜನರು ಹಾಗೂ ತಾಲೂಕಿನ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

ಕಡಿದಾದ ಹೆಬ್ಬಂಡೆಯ ಮೇಲೆ ದೇವಸ್ಥಾನ ನಿರ್ಮಿಸಲಾಗಿದೆ. ವಿಜಯನಗರದ ಕೃಷ್ಣದೇವರಾಯ ಆಡಳಿತದಲ್ಲಿ ಅಬ್ಬರಾವು ಎನ್ನುವವರು ಮಾವನವರಾದ ಅಯ್ಯನಿಗೆ ಪುಣ್ಯ ಸಂಚಯವಾಗಲಿ ಎಂದು ಪ್ರಾರ್ಥಿಸಿ ನಿರ್ಮಿಸಿದ ದೇವಸ್ಥಾನ ಇದಾಗಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಯಾವುದೇ ವ್ಯವಸ್ಥೆಗೆ ಒಳಪಡದ ದೇವಸ್ಥಾನವು ತಿರುಮಲ ವೆಂಕಟೇಶ್ವರ ದೇವಾಲಯವಾಗಿತ್ತು. ನಂತರದಲ್ಲಿ ಆನೆಶಂಕರ ದೇವಾಲಯವಾಗಿದ್ದು ಲಿಂಗ ಪ್ರತಿಷ್ಠಾಪಿಸಲಾಗಿದೆ.

ಮುಕ್ಕುಂದ ನದಿ ತೀರದ ಪಾಪನಾಶೇಶ್ವರ ದೇವಾಲಯದಂತೆ ಇದು ಕೂಡ ಸಣ್ಣಪೆಟ್ಟಿಗೆಯಂತೆ ಇದೆ. ಸರಳವಾಗಿ ನಿರ್ಮಿಸಿದ ದೇವಾಲಯಕ್ಕೆ ಗರ್ಭಗೃಹ ತೊರೆದ ಸುಕನಾಶಿ, ನವರಂಗಗಳಿಗೆ ನಾಲ್ಕು ಚಪ್ಪಟೆಯಾದ ಕಂಬಗಳನ್ನು ಬಳಸಲಾಗಿದೆ. ಇದರ ಸುತ್ತಲೂ ಸುಂದರವಾದ ಗೋಡೆ, ಕಂಬಗಳಿವೆ. ಗೋಪುರವಿಲ್ಲದ ದೇವಾಲಯ ಚೌಕಾಕಾರದ ಕಂಬಗಳ ರಚನೆ ಇದೆ.

ಪುರಾತನ ಬಾವಿ: ನೀಲಕಂಠೇಶ್ವರ ದೇವಸ್ಥಾನ ಮುಂಭಾಗದಲ್ಲಿರುವ ಬಹಳ ವರ್ಷದ ಹಿಂದಿನ ಕಾಲದಿಂದಿರುವ ಜಕ್ಕಮ್ಮನ ಬಾವಿ ಕೂಡ ಐತಿಹಾಸಿಕ ಪ್ರಸಿದ್ದಿ ಹೊಂದಿದೆ. ಎಂತಹ ಬರಗಾಲ ಬಂದರೂ ಬಾವಿಯಲ್ಲಿ ಸದಾ ನೀರು ಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಬಾವಿ ಜೀರ್ಣೋದ್ಧಾರ ಕಾರ್ಯವಾಗಿದ್ದು, ಕಾಂಪೌಂಡ್‌ ಕಾಮಗಾರಿ ಅರ್ಧಕ್ಕೆ ನಿಂತಿದೆ. ಬಾವಿಯ ನೀರಿನಿಂದಲೇ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಇಂತಹ ಇತಿಹಾಸ ಹೊಂದಿದ ದೇವಸ್ಥಾನದ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ