ಗಬ್ಬೆದ್ದ ಹೈಟೆಕ್‌ ಬಸ್‌ ನಿಲ್ದಾಣ

ಸಿಂಧನೂರು ಬಸ್‌ ನಿಲ್ದಾಣ ಆವರಣದಲ್ಲೇ ಮಲ-ಮೂತ್ರ ವಿಸರ್ಜನೆ

Team Udayavani, Dec 8, 2019, 12:07 PM IST

„ಚಂದ್ರಶೇಖರ ಯರದಿಹಾಳ
ಸಿಂಧನೂರು:
ಕಲ್ಯಾಣ ಕರ್ನಾಟಕದಲ್ಲೇ ದೊಡ್ಡ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಿಂಧನೂರು ನಗರದ ಹೈಟೆಕ್‌ ಬಸ್‌ ನಿಲ್ದಾಣ ಮೇಲೆಲ್ಲ, ಥಳಕು, ಒಳಗೆಲ್ಲ ಕೊಳಕು ಎಂಬಂತಿದೆ. ನಿಲ್ದಾಣದಲ್ಲಿ ಸೌಲಭ್ಯಗಳ ಕೊರತೆಯಿಂದ ಗಬ್ಬೆದ್ದು ಹೋಗಿದ್ದರೆ, ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ.

2013-14ರಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರ ಆಡಳಿತಾವಧಿಯಲ್ಲಿ ಸುಮಾರು 6.50 ಕೋಟಿ ವೆಚ್ಚದಲ್ಲಿ ಸಿಂಧನೂರು ನಗರದ ಹೃದಯ ಭಾಗದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಆಗ ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಸಿ ಮಹಾದೇವಪ್ಪ ಈ ಹೈಟೆಕ್‌ ಬಸ್‌ ನಿಲ್ದಾಣ ಉದ್ಘಾಟಿಸಿದ್ದಾರೆ.

ಸಿಂಧನೂರು ನಗರ ಬಸ್‌ ನಿಲ್ದಾಣದಿಂದ ನಿತ್ಯ 8ರಿಂದ 10 ಸಾವಿರ ಪ್ರಯಾಣಿಕರು ರಾಜ್ಯ, ನೆರೆ ರಾಜ್ಯಗಳಿಗೆ ಪ್ರಯಾಣ ಬೆಳೆಸುತ್ತಾರೆ. ಸುತ್ತಲಿನ ಗ್ರಾಮ ಮತ್ತು ನೆರೆ ತಾಲೂಕುಗಳಿಂದ ಸಾವಿರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ನಗರಕ್ಕೆ ಬರುತ್ತಾರೆ. ಆದರೆ ನಿಲ್ದಾಣದಲ್ಲಿ ಸೌಲಭ್ಯ ಕೊರತೆ ಇದೆ.

ಸೌಲಭ್ಯಗಳಿಲ್ಲ: ಸಿಂಧನೂರು ಬಸ್‌ ನಿಲ್ದಾಣ ಹೆಸರಿಗೆ ಮಾತ್ರ ಹೈಟೆಕ್‌ ಬಸ್‌ ನಿಲ್ದಾಣವಾಗಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ, ಪ್ರಯಾಣಿಕರಿಗೆ ಕೂಡ್ರಲು ಆಸನಗಳಿಲ್ಲ. ಶೌಚಾಲಯ ಸರಿಯಾಗಿ ನಿರ್ವಹಣೆ ಇಲ್ಲದ್ದೇ ಗಬ್ಬೆದ್ದು ಹೋಗಿವೆ, ಹಾಳಾಗಿವೆ. ಹೀಗಾಗಿ ಪ್ರಯಾಣಿಕರು ಬಸ್‌ ನಿಲ್ದಾಣ ಆವರಣದಲ್ಲೇ ಪುರುಷರು, ಮಹಿಳೆಯರು ಮಲ, ಮೂತ್ರ ವಿಸರ್ಜಿಸುವುದು ಸಾಮಾನ್ಯವಾಗಿದೆ.ನಿಲ್ದಾಣದ ಆವರಣದಲ್ಲಿ ಕಸದ ರಾಶಿ ತುಂಬಿದೆ. ಸ್ವಚ್ಛತೆ ಕೂಡ ಮಾಯವಾಗಿದೆ. ಪ್ರಯಾಣಿಕರು ನಿಲ್ದಾಣದಲ್ಲಿ ಮೂಗು ಮುಚ್ಚಿಕೊಂಡೇ ಇರುವಂತಾಗಿದೆ.

ಕಳ್ಳತನ ಹೆಚ್ಚಳ: ಇನ್ನು ಸಿಂಧನೂರು ಹೈಟೆಕ್‌ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಅವರ ವಸ್ತುಗಳಿಗೆ ಸುರಕ್ಷತೆ ಇಲ್ಲದಾಗಿದೆ. ಪದೇ ಪದೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಅನೇಕರ ಹಣ, ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಇಷ್ಟಾದರೂ ನಿಲ್ದಾಣದ ಅಧಿಕಾರಿಗಳು, ಪೊಲೀಸರು ಪ್ರಯಾಣಿಕರ ಸುರಕ್ಷತೆಗೆ ಕ್ರಮ ವಹಿಸುತ್ತಿಲ್ಲ.

ಕೆಟ್ಟ ಸಿಸಿ ಕ್ಯಾಮೆರಾ: ಬಸ್‌ ನಿಲ್ದಾಣದಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಗೆ ಹಲವೆಡೆ ಸಿಸಿ ಕ್ಯಾಮೆರಾ ಹಾಕಲಾಗಿದೆ. ಆದರೆ ಇವು ಕಾರ್ಯ ನಿರ್ವಹಿಸುತ್ತಿಲ್ಲ. ಸಿಸಿ ಕ್ಯಾಮೆರಾ ಇದ್ದೂ ಇಲ್ಲದಂತಾಗಿದೆ.

ರಸ್ತೆಗೆ ಹರಿದ ಶೌಚಾಲಯ ಕೊಳಚೆ: ಕಳೆದ ಮೂರ್‍ನಾಲ್ಕು ತಿಂಗಳ ಹಿಂದೆ ಬಸ್‌ ನಿಲ್ದಾಣದ ಶೌಚಾಲಯದ ಗುಂಡಿಯ ಪೈಪ್‌ ಒಡೆದು ಕೊಳಚೆ ನೀರು ಬಸ್‌ ನಿಲ್ದಾಣದ ಪಕ್ಕದ ಮನೆ-ಅಂಗಡಿಗಳ ಮುಂದೇ ಹರಿದಿತ್ತು. ನಿವಾಸಿಗಳು, ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಆದರೂ ನಿಲ್ದಾಣದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಇನ್ನಾದರೂ ಬಸ್‌ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಜೊತೆಗೆ ಶೌಚಾಲಯದಲ್ಲಿ ಸ್ವಚ್ಛತೆಗೆ ಗಮನಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆಯತ್ತ ಗಮನ ಹರಿಸುವ ಕೆಲಸ ಮಾಡುತ್ತೇವೆ. ಶೌಚಾಲಯದ ಬಗ್ಗೆ ಮೇಲಿನ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಇನ್ನೆರಡು ಶೌಚಾಲಯ ನಿರ್ಮಿಸಲಾಗುವುದು.
ರವಿಶಂಕರ,
ಸಾರಿಗೆ ಘಟಕ ವ್ಯವಸ್ಥಾಪಕ

ಬಸ್‌ ನಿಲ್ದಾಣದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಸ್‌ ನಿಲ್ದಾಣದಲ್ಲಿ ಸೌಲಭ್ಯಗಳ ಕೊರತೆ ಬಗ್ಗೆ ಖುದ್ದಾಗಿ ಭೇಟಿ ನೀಡಿ ವೀಕ್ಷಿಸುವೆ.
ವೆಂಕಟರಾವ್‌ ನಾಡಗೌಡ,
ಶಾಸಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ