ರೈತರು ನಿಶ್ಚಿತ ಆದಾಯ ತರುವ ಕೃಷಿ ಕೈಗೊಳ್ಳಲಿ: ಪಾಟೀಲ್
ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡರೆ ಉತ್ತಮ ಇಳುವರಿ
Team Udayavani, Apr 6, 2019, 4:33 PM IST
ಸಿರುಗುಪ್ಪ: ಬಿ.ಇ.ಹನುಮಂತಮ್ಮ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನ ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಕೃಷಿ-ಖುಷಿ ಹಸಿರುಕ್ರಾಂತಿಗೆ ಉತ್ತೇಜನ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು
ಸಿರುಗುಪ್ಪ: ರೈತರು ಬರಗಾಲದಲ್ಲಿಯೂ ನಿಶ್ಚಿತ ಆದಾಯ ತರುವ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ
ಪಡೆಯಬೇಕೆಂದು ಜಿಲ್ಲಾ ಕೃಷಿ ಉಪನಿರ್ದೇಶಕ ಶಿವನಗೌಡ ಎಸ್.ಪಾಟೀಲ್ ಕರೆ ನೀಡಿದರು.
ನಗರದ ಬಿ.ಇ.ಹನುಮಂತಮ್ಮ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನ ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಕೃಷಿ-ಖುಷಿ ಹಸಿರು ಕ್ರಾಂತಿಗೆ ಉತ್ತೇಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಗತಿಪರ ಕೃಷಿಕ ಸಜ್ಜನ್ ಮಾತನಾಡಿ, ನಗರೀಕರಣ ಹಾಗೂ ರಸ್ತೆಗಳ ಅಭಿವೃದ್ಧಿಯಿಂದಾಗಿ ಕೃಷಿ ಯೋಗ್ಯ ಜಮೀನು ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಹಾರದ ಕೊರತೆಗೆ
ದಾರಿಯಾಗಬಹುದು. ಆದ್ದರಿಂದ ರೈತರು ಸವಳು ಮತ್ತು ಜವಳು ಭೂಮಿಗಳನ್ನು ಕೂಡ ಕೃಷಿ ಯೋಗ್ಯ ಭೂಮಿಗಳನ್ನಾಗಿ ಪರಿವರ್ತಿಸಿಕೊಂಡು ಮರ ಆಧಾರಿತ ಕೃಷಿಯನ್ನು ಕೈಗೊಂಡರೆ ಹೆಚ್ಚಿನ ಲಾಭ ಪಡೆಯಬಹುದು. ರೈತರು ಕೇವಲ ಒಂದು ಬೆಳೆಗೆ
ಸೀಮಿತಗೊಳ್ಳದೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಲಾಭವನ್ನು ವರ್ಷವಿಡೀ ಪಡೆಯಬಹುದು. ಈ ಬಗ್ಗೆ ರೈತರು ಚಿಂತನೆ ನಡೆಸಬೇಕೆಂದು ಕಿವಿಮಾತು ಹೇಳಿದರು.
ಮಂಗಳೂರಿನ ಮೀನುಗಾರಿಕೆ ವಿಶ್ವವಿದ್ಯಾಲಯದ ಮತ್ಸ್ಯ ಸಂಪನ್ಮೂಲ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ| ಎಸ್.ಎಂ.ಶಿವಪ್ರಕಾಶ್ ಮಾತನಾಡಿ, ಸವಳು ಮತ್ತು ಜವಳು
ಭೂಮಿಗಳಲ್ಲಿಯೂ ಕೆರೆಗಳನ್ನು ನಿರ್ಮಿಸಿಕೊಂಡು ಮೀನು ಸಾಕಾಣಿಕೆ ಮಾಡಬಹುದು. ಕೇವಲ ಒಂದು ಹೆಕ್ಟೇರ್ ಕೆರೆಯಲ್ಲಿ 4 ಸಾವಿರ ಮೀನಿನ ಮರಿ ಹಾಕಿದರೆ ಹೆಚ್ಚಿನ ಇಳುವರಿ ಪಡೆಯಬಹುದಾಗಿದ್ದು, ಫೆಂಗೇಷಿಯಾ ಸೂಚಿತ ತಳಿಯ ಮೀನುಗಳು ಒಂದು ಹೆಕ್ಟೇರ್‌ನಲ್ಲಿ ನೂರು ಟನ್‌ಗಳ ಇಳುವರಿ
ಬರುತ್ತದೆ. ರೈತರು ತಮ್ಮಲ್ಲಿನ ಕೃಷಿ ಹೊಂಡಗಳನ್ನು ಬಳಸಿಕೊಂಡು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಮೀನು ಸಾಕಾಣಿಕೆ ನಡೆಸುವುದರಿಂದ ಕೃಷಿಗೆ ನೀರು ದೊರೆಯುವುದಲ್ಲದೆ, ಉಪ ಆದಾಯವನ್ನು ತಂದು ಕೊಡುತ್ತದೆ ಎಂದು ತಿಳಿಸಿದರು.
ಗದುಗಿನ ಪಶುಸಂಗೋಪನಾ ಮಹಾವಿದ್ಯಾಲಯದ ಪಶು ಔಷಧ ಶಾಸ್ತ್ರ ಮತ್ತು ವಿಷ ವಿಜ್ಞಾನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಕೆ.ಸಿಂಧು ಮಾತನಾಡಿ, ದೇಶಿ ತಳಿಯ ಜಾನುವಾರುಗಳನ್ನು ಸಾಕಾಣಿಕೆ ನಡೆಸಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯವನ್ನು ಪಡೆಯಬಹುದು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಬಿ.ಇ.ದೊಡ್ಡಯ್ಯ, ಎಚ್.ಜೆ.ಹನುಮಂತಶೆಟ್ಟಿ, ಪ್ರಾಚಾರ್ಯ ಎಚ್.ಕೆ.ಮಲ್ಲಿಕಾರ್ಜುನಶೆಟ್ಟಿ ಇನ್ನಿತರರಿದ್ದರು.
ನಗರೀಕರಣ ಹಾಗೂ ರಸ್ತೆಗಳ ಅಭಿವೃದ್ಧಿಯಿಂದಾಗಿ ಕೃಷಿ ಯೋಗ್ಯ
ಜಮೀನು ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಹಾರದ
ಕೊರತೆಗೆ ದಾರಿಯಾಗಬಹುದು. ಆದ್ದರಿಂದ ರೈತರು ಸವಳು ಮತ್ತು
ಜವಳು ಭೂಮಿಗಳನ್ನು ಕೂಡ ಕೃಷಿ ಯೋಗ್ಯ ಭೂಮಿಗಳನ್ನಾಗಿ
ಪರಿವರ್ತಿಸಿಕೊಂಡು ಮರ ಆಧಾರಿತ ಕೃಷಿಯನ್ನು ಕೈಗೊಂಡರೆ ಹೆಚ್ಚಿನ ಲಾಭ ಪಡೆಯಬಹುದು. ರೈತರು ಕೇವಲ ಒಂದು ಬೆಳೆಗೆ ಸೀಮಿತಗೊಳ್ಳದೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ
ಹೆಚ್ಚಿನ ಲಾಭವನ್ನು ವರ್ಷವಿಡೀ ಪಡೆಯಬಹುದು. ಈ ಬಗ್ಗೆ ರೈತರು ಚಿಂತನೆ ನಡೆಸಬೇಕು.
.ಸಜ್ಜನ್,ಪ್ರಗತಿಪರ ಕೃಷಿಕ