ತುಂಬಿದ ಭದ್ರೆಗೆ ಸಂಸದೆ ಶೋಭಾ ಬಾಗಿನ

•ಪರಿಸರ ಕಾಪಾಡಿ ಪ್ರವಾಹ ಸ್ಥಿತಿ ತಡೆಗಟ್ಟಿ ನದಿಗಳ ಜೋಡಣೆಗೆ ಕ್ರಮ ವಹಿಸಿ: ಶೋಭಾ ಕರಂದ್ಲಾಜೆ

Team Udayavani, Sep 7, 2019, 1:20 PM IST

ತರೀಕೆರೆ: ತುಂಬಿ ಹರಿದ ಭದ್ರಾ ನದಿಗೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಡಿ.ಎಸ್‌.ಸುರೇಶ್‌ ಬಾಗಿನ ಅರ್ಪಿಸಿದರು. ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಇತರರಿದ್ದರು.

ತರೀಕೆರೆ: ನೀರಿಲ್ಲದೆ ಮಾನವನ ಬದುಕೇ ಇಲ್ಲ. ಕೆಲವಡೆ ಅತಿವೃಷ್ಟಿ ಮತ್ತೆ ಕೆಲವೆಡೆ ಅನಾವೃಷ್ಟಿ ಕಾಡುತ್ತಿದೆ. ನೀರಿನ ಸದ್ಬಳಕೆ ಮಾಡಬೇಕು. ನೀರನ್ನು ಪೋಲು ಮಾಡಬಾರದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಭದ್ರಾ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಭದ್ರಾ ನದಿಗೆ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಕೃತಿ ವೈಪರೀತ್ಯದಿಂದಾಗಿ ಅನಾಹುತಗಳು ಸಂಭವಿಸಿವೆ. ಪ್ರಕೃತಿ ಮೇಲೆ ಮಾನವನಿಂದಾಗಿರುವ ತಪ್ಪುಗಳೇ ಇದಕ್ಕೆ ಕಾರಣ. ಪ್ರಕೃತಿ ನಮ್ಮ ನಿಯಂತ್ರಣದಲ್ಲಿಲ್ಲ. ಪ್ರಕೃತಿಯ ಮೇಲೆ ನಾವು ಅವಲಂಬಿತರಾಗಿದ್ದೇವೆ ಎನ್ನುವುದನ್ನು ಅರಿಯಬೇಕಾಗಿದೆ. ಪರಿಸರ ನಾಶದಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ. ಪರಿಸರ ಕಾಪಾಡಿಕೊಂಡಲ್ಲಿ ಅದು ನಮ್ಮನ್ನು ಕಾಪಾಡುತ್ತದೆ. ಅರಣ್ಯ ಪ್ರದೇಶ ನಾಶವಾಗುತ್ತಿರುವುದಕ್ಕೆ ನಾವೇ ಕಾರಣ ಎಂದರು.

ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ನದಿ ಪಾತ್ರದ ಗ್ರಾಮಗಳು, ನಗರಗಳು ನಲುಗಿಹೋಗಿವೆ. ಮಲೆನಾಡಿನಲ್ಲೂ ಪ್ರಕೃತಿ ಆರ್ಭಟ ಜೋರಾಗಿದೆ. ಇದರಿಂದಾಗಿ ಸಾವು- ನೋವುಗಳು ಉಂಟಾಗಿವೆ. ಇದಕ್ಕೆ ನಾವು ಕಾರಣಗಳನ್ನೂ ಹುಡಬೇಕಾಗಿದೆ ಎಂದರು.

ಕೇಂದ್ರ ಸರಕಾರ ನದಿಗಳಲ್ಲಿ ಉಂಟಾಗುವ ಪ್ರವಾಹವನ್ನು ತಡೆಗಟ್ಟಲು ನದಿ ಜೋಡಣೆ ಬಗ್ಗೆ ಚರ್ಚೆ ನಡೆಸಿದೆ. ಮಳೆ ಪ್ರಮಾಣ ಹೆಚ್ಚಾದಾಗ ನದಿ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸ ಮಾಡಬೇಕಾಗಿದೆ. ಹಲವಾರು ಸರಕಾರಗಳು ಬಂದರು ಇದರ ಕಡೆ ಗಮನ ಹರಿಸಿಲ್ಲ. ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿದಲ್ಲಿ ಅಂತರ್ಜಲ ಹೆಚ್ಚಳವಾಗುತ್ತದೆ. ಬಚಾವತ್‌ ಆಯೋಗ ರಾಜ್ಯಕ್ಕೆ 179 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಆದರೆ, ದುರಾದೃಷ್ಟವಶಾತ್‌ ನಾವು ಒಂದೇ ಒಂದು ಟಿಎಂಸಿ ನೀರನ್ನೂ ಬಳಕೆ ಮಾಡಿಕೊಂಡಿಲ್ಲ. ಮಳೆ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸಕ್ಕೆ ಆದ್ಯತೆ ನೀಡಬೇಕಾಗಿದೆ. ಯೋಜನೆಗಳನ್ನು ರೂಪಿಸಿ ಹಂತ ಹಂತವಾಗಿ ಜಾರಿಗೆ ತರಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ನದಿಗೆ ಬಾಗಿನ ಅರ್ಪಣೆ ಮತ್ತು ಗಂಗಾ ಪೂಜೆ ನನಗೆ ಹೊಸ ಅನುಭವ ನೀಡಿದೆ. ತವರಿಗೆ ಬಂದಷ್ಟು ಸಂತಸ ತಂದಿದೆ. ಸದಾಕಾಲ ಭದ್ರೆ ತುಂಬಿ ಹರಿಯಲಿ ಎಂಬುದು ನನ್ನ ಆಶಯ ಎಂದರು.

ಶಾಸಕ ಡಿ.ಎಸ್‌.ಸುರೇಶ್‌ ಮಾತನಾಡಿ, ಮಳೆಗಾಲದ ಆರಂಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ರೈತರ ಮೊಗದಲ್ಲಿ ಆತಂಕ ಮೂಡಿತ್ತು. ಭದ್ರಾ ಜಲಾಶಯದ ಇತಿಹಾಸದಲ್ಲಿ ಕೇವಲ ಒಂದು ವಾರದಲ್ಲಿ ಭದ್ರೆ ತುಂಬಿ ಹರಿದಿರುವುದು ಎಲ್ಲರಲ್ಲೂ ಸಂತಸ ತಂದಿದೆ ಎಂದರು.

ಜಿಪಂ ಸದಸ್ಯೆ ಚೈತ್ರಶ್ರೀ, ತಾಪಂ ಅಧ್ಯಕ್ಷೆ ಪದ್ಮಾವತಿ ಮಾತನಾಡಿದರು. ಸಮಾರಂಭದಲ್ಲಿ ಜಿಪಂ ಸದಸ್ಯ ಕೆ.ಆರ್‌.ಆನಂದಪ್ಪ, ಬಿಜೆಪಿ ಅದ್ಯಕ್ಷ ಎಸ್‌.ಬಿ.ಆನಂದಪ್ಪ, ತಾಪಂ ಉಪಾಧ್ಯಕ್ಷೆ ಮಂಜುಳಾ, ಉಪವಿಭಾಗಾಧಿಕಾರಿ ಬಿ.ಆರ್‌.ರೂಪಾ, ಶ್ರೀರಾಮು, ಎಲ್.ಎಸ್‌.ಶಿವಯೋಗಿ, ಲಕ್ಕವಳ್ಳಿರಮೇಶ್‌, ತಾಪಂ ಸದಸ್ಯರಾದ ಹಾಲನಾಯ್ಕ, ಕೃಷ್ಣಪ್ಪ, ಕರಿಯಣ್ಣ, ಸುರೇಶ್‌, ಅಶ್ವತ್ಥ, ಶಿವರಾಜ್‌, ಮನೋಜ್‌, ಟಿ.ಜಿ.ಮಂಜುನಾಥ್‌, ಅಜಯ್‌, ಗಾಪಂ ಸದಸ್ಯರು, ಅಧಿಕಾರಿಗಳು ಇನ್ನಿತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ