ರೈತರಿಗೆ ಹಲಸಿನ ಮಹತ್ವದ ಅರಿವು ಮೂಡಿಸಿ

ಮೌಲ್ಯವರ್ಧಿತ ಹಲಸಿನ ಮೇಳದಲ್ಲಿ ಶಾಸಕ ಡಿ.ಎಸ್‌.ಸುರೇಶ್‌ ಸಲಹೆ

Team Udayavani, Jun 26, 2019, 5:08 PM IST

ತರೀಕೆರೆ: ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ನಡೆದ ಮೌಲ್ಯವರ್ಧಿತ ಹಲಸಿನ ಮೇಳವನ್ನು ಶಾಸಕ ಡಿ.ಎಸ್‌.ಸುರೇಶ್‌ ಉದ್ಘಾಟಿಸಿದರು.

ತರೀಕೆರೆ: ರೈತರಿಗೆ ಲಾಭದಾಯಕವಾದ, ರೋಗ ನಿರೋಧಕ ಶಕ್ತಿಯುಳ್ಳ ಮತ್ತು ರಾಸಾಯನಿಕವಿಲ್ಲದ, ಕಲಬೆರಕೆರಹಿತ ಹಲಸಿನ ಹಣ್ಣು ನಿರ್ಲಕ್ಷಕ್ಕೆ ಒಳಗಾಗಿದೆ. ರೈತರಿಗೆ ಹಲಸಿನ ಹಣ್ಣಿನ ಮಹತ್ವದ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಶಾಸಕ ಡಿ.ಎಸ್‌.ಸುರೇಶ್‌ ಹೇಳಿದರು.

ಪಟ್ಟಣದ ಡಾ| ಅಂಬೇಡ್ಕರ್‌ ಭವನದಲ್ಲಿ ಮಮತಾ ಮಹಿಳಾ ಸಮಾಜ ಮತ್ತು ಕಲಾ ಫಾರಂ ವತಿಯಿಂದ ಹಮ್ಮಿಕೊಂಡಿದ್ದ ಮೌಲ್ಯವರ್ಧಿತ ಹಲಸಿನ ಮೇಳ ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದಿಂದ ಹೊರ ದೇಶಕ್ಕೆ ಹಲಸಿನ ಹಣ್ಣು ರಫ್ತು ಮಾಡಲಾಗುತ್ತಿದೆ. ಆದರೂ, ರೈತರಲ್ಲಿ ಹಲಸಿನ ಹಣ್ಣು ಬೆಳೆಯ ಬಗ್ಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಹಲವಾರು ತಳಿಗಳನ್ನು ಹೊಂದಿರುವ ಹಲಸು ಅನೇಕ ಕಾಯಿಲೆಗಳಿಗೆ ಮದ್ದಾಗಿದೆ. ಹಲಸಿನ ಕೃಷಿ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದರ ಮಹತ್ವವನ್ನು ಎಲ್ಲರಿಗೂ ತಿಳಿಸುವ ಕೆಲಸವಾಗಬೇಕೆಂದರು.

ತಾಲೂಕಿನ ವ್ಯಾಪ್ತಿಯಲ್ಲಿ ಎಲ್ಲಿಯೂ ಕೂಡ ಹಲಸಿನ ಹಣ್ಣಿನ ಫಾರಂ ಇಲ್ಲ. ಹಲಸಿನ ಬಗ್ಗೆ ಎಲ್ಲಾ ರೈತರಿಗೂ ಮಾಹಿತಿ ದೊರೆಯುವಂತಾಗಬೇಕು. ಕಲಾ ಫಾರಂನಲ್ಲಿ ಹಲಸಿನ ಬೆಳೆ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಕೂಡಲೇ ಏರ್ಪಡಿಸುವಂತೆ ತೋಟಗಾರಿಕಾ ಅಧಿಕಾರಿ ಲಿಂಗರಾಜು ಅವರಿಗೆ ಸೂಚನೆ ನೀಡಿದರು.

ಪ್ರಗತಿಪರ ಕೃಷಿಕ ಶಿವಣ್ಣ ಮಾತನಾಡಿ, ಹಲಸಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ವಿದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹಲಸಿನಲ್ಲಿ ಮಧುಮೇಹ, ಹೃದಯಾಘಾತ ಮತ್ತು ರಕ್ತದೊತ್ತಡ ಕಡಿಮೆ ಮಾಡುವ ಶಕ್ತಿ ಇದೆ. ಹಲವಾರು ರೋಗಗಳನ್ನು ಗುಣಪಡಿಸುವ ಗುಣವಿರುವ ಹಲಸಿನ ಹಣ್ಣು, ಕಾಯಿಗಳನ್ನು ಸಮರ್ಪಕವಾಗಿ ಉಪಯೋಗದ ಬಗ್ಗೆ ನಮಗೆ ಸರಿಯಾದ ಅರಿವು ಮೂಡಿಲ್ಲ ಎಂದರು.

ಹಲಸಿನ ಹಣ್ಣಿನಿಂದ ಹಲವಾರು ಖಾದ್ಯಗಳನ್ನು ತಯಾರಿಸಿ ಉಪಯೋಗಿಸಬಹುದು. ಬೀಜದಿಂದಲೂ ಉಪಯೋಗವಿದೆ. ಆಹಾರವಾಗಿಯೂ ಬಳಸಬಹುದು. ಹಲಸು ಬೆಳಸುವುದರಿಂದ ರೈತರಿಗೆ ಹಲವಾರು ಉಪಯೋಗಗಳಿವೆ. ಮರದಿಂದ ಬೀಳುವ ಎಲೆಗಳಿಂದ ಗೊಬ್ಬರವಾಗುತ್ತದೆ. ಬೆಳೆದು ನಿಂತ ಮರ ತೇವಾಂಶವನ್ನು ಭೂಮಿಗೆ ನೀಡುತ್ತದೆ ಹಾಗೂ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಸಿವಿನಿಂದ ಬಳಲುವವರಿಗೆ ಹಲಸು ಆಹಾರವಾಗುತ್ತದೆ ಎಂದರು.

ಹಲಸನ್ನು ನವ ಕಲ್ಪವೃಕ್ಷ ಎಂದು ಕರೆಯಲಾಗುತ್ತಿದೆ. ಹಲಸಿನ ಬೆಳೆಯನ್ನು ಮಾರುಕಟ್ಟೆ ಮಾಡುವುದನ್ನು ರೈತರು ಕಲಿತುಕೊಳ್ಳಬೇಕು. ಹಣ್ಣುಗಳ ಮೌಲ್ಯವರ್ಧನೆ ಮಾಡಿಕೊಳ್ಳಬೇಕು. ಅವುಗಳನ್ನು ಪ್ಯಾಕ್‌ ಮಾಡಿ ಮಾರುಕಟ್ಟೆಗೆ ತಲುಪಿಸುವ ಕೆಲಸ ಮಾಡಿದರೆ ಲಾಭ ಗಳಿಸಬಹುದಾಗಿದೆ. ಒಂದು ಮರದಿಂದ ಲಕ್ಷ ರೂ.ಆದಾಯ ಪಡೆಯಬಹುದು ಎಂದರು. ತೋಟಗಾರಿಕಾ ಇಲಾಖೆಯ ಲಿಂಗರಾಜು, ಪ್ರಗತಿಪರ ಕೃಷಿಕ ವೀರಣ್ಣ, ಜನಾರ್ದನ್‌, ಶೋಭಾ ಮಹೇಂದ್ರ, ಮಮತಾ ಮಹಿಳಾ ಸಮಾಜದ ಅದ್ಯಕ್ಷೆ ಸೌಭಾಗ್ಯ ಶ್ರೀರಂಗಪ್ಪ ಮಾತನಾಡಿದರು.

ಹಲಸಿನ ಖಾದ್ಯ ಮೇಳ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಹಲಸಿನ ಹಣ್ಣಿನಿಂದ ವಿವಿಧ ಬಗೆಯ ಖಾದ್ಯಗಳನ್ನು ಸ್ಥಳದಲ್ಲಿಯೇ ತಯಾರಿಸಿ ಮಾರಾಟ ಮಾಡಲಾಯಿತು. ಹಲಸಿನ ಮಿಲ್ಕಶೇಕ್‌, ಬೋಂಡಾ, ಕಬಾಬ್‌, ಹಲಸಿನ ಹೋಳಿಗೆ, ಬನ್‌, ದೋಸೆ, ಬಿಳಿ ಹೋಳಿಗೆ ಆಹಾರ ಪ್ರಿಯರ ಮೆಚ್ಚುಗೆಗೆ ಪಾತ್ರವಾದವು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ