ಸನ್ನಡತೆಯಿಂದ ಬದುಕಿದರೆ ಜೀವನ ಸಾರ್ಥಕ: ಸ್ವಾಮೀಜಿ

ಯುವಪೀಳಿಗೆ ಆಧುನಿಕ ಸಂಸ್ಕೃತಿಗೆ ಮಾರು ಹೋಗದೆ ಧಾರ್ಮಿಕ ವಿಚಾರದತ್ತ ಗಮನಹರಿಸಲಿ

Team Udayavani, May 16, 2019, 5:50 PM IST

ತರೀಕೆರೆ: ಬೇಲೇನಹಳ್ಳಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ತರೀಕೆರೆ: ಜೀವನ ಸುಗಮವಾಗಬೇಕಾದರೆ ಜನರು ಆಧ್ಯಾತ್ಮಿಕದತ್ತ ಗಮನ ನೀಡಬೇಕು. ದಿನನಿತ್ಯ ಜಂಜಾಟದ ನಡುವೆ ಆಧ್ಯಾತ್ಮಿಕ ಕಡೆ ಒಲವು ತೋರಿ ಜೀವನದಲ್ಲಿ ಸನ್ನಡತೆಯಿಂದ ಬದುಕಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಹುಣಸಘಟ್ಟ ಗುರು ಹಾಲುಸ್ವಾಮಿ ಮಠದ ಪಟ್ಟಾಧ್ಯಕ್ಷ ಶ್ರೀಗುರುಮೂರ್ತಿ ಶಿವಾಚಾರ್ಯರು ಹೇಳಿದರು.

ಸಮೀಪದ ಬೇಲೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಬೂದಿಬಸವೇಶ್ವರಸ್ವಾಮಿ ದೇವಾಲಯದ ಕಳಸಾರೋಹಣ ನೆರವೇರಿಸಿ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಗ್ರಾಮಸ್ಥರು ದೈವ ಬಲದ ಮೇಲೆ ನಂಬಿಕೆ ಇಟ್ಟು ಲೋಕಕಲ್ಯಾಣಾರ್ಥವಾಗಿ ನಿರ್ಮಿಸಿರುವ ಶ್ರೀಬೂದಿಬಸವೇಶ್ವರಸ್ವಾಮಿ ದೇಗುಲ ಸದ್ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯತ್ತದೆಂಬ ನಂಬಿಕೆ ಎಲ್ಲರಲ್ಲಿಯೂ ಅಚಲವಾಗಿದೆ. ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಗೊಳಿಸುವುದರಿಂದ ಯುವಜನತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲಕರವಾಗುತ್ತದೆ ಮತ್ತು ಯುವಪೀಳಿಗೆ ಆಧುನಿಕ ಸಂಸ್ಕೃತಿಗೆ ಮಾರು ಹೋಗದೆ ಧಾರ್ಮಿಕ ವಿಚಾರದತ್ತ ಗಮನಹರಿಸಬೇಕು ಎಂದರು.

ಸಾಂಸ್ಕೃತಿಕ ಚಿಂತಕ ಡಾ| ಬಸವರಾಜ್‌ ನೆಲ್ಲಿಸರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಅವರನ್ನು ಎಚ್ಚರಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದು, ಪುಸ್ತಕ ಓದುವ ಹವ್ಯಾಸ ರೂಢಿಸಬೇಕು. ಆದರ್ಶ ವ್ಯಕ್ತಿಗಳ ಜೀವನ ಕಥನಗಳು, ವಚನ ಸಾಹಿತ್ಯಗಳಲ್ಲಿನ ಸತ್ವವನ್ನು ಓದಿ ತಿಳಿದುಕೊಂಡರೆ ಜೀವನ ಮೌಲ್ಯ ಹೆಚ್ಚುವುದಲ್ಲದೆ ಜೀವನದಲ್ಲೂ ಸಾಕಷ್ಟು ಪರಿವರ್ತನೆ ಕಾಣಲಿದೆ ಎಂದು ಹೇಳಿದರು.

ಧಾರ್ಮಿಕ ಸಭೆಯಲ್ಲಿ ಮೂಡಿಗೆರೆಯ ಮಂಜು ಮತ್ತು ಸಂಗಡಿಗರು ವಚನ ಗಾಯನ ಹಾಡಿದರು. ಬಿ.ಸೋಮಶೇಖರ್‌ ಸ್ವಾಗತಿಸಿದರು. ರಕ್ಷಿತಾ ಮತ್ತು ಹಾಲೇಶ್‌ ನಿರೂಪಿಸಿದರು. ಕಿರುತೆರೆ ನಿರ್ಮಾಪಕ, ನಿರ್ದೇಶಕ ಸಿ.ಚಂದ್ರಶೇಖರ್‌, ರಂಗಭೂಮಿ ನಟ ದಾಳೇಗೌಡ್ರು, ಗ್ರಾಪಂ ಅಧ್ಯಕ್ಷ ಟಿ.ಸಿದ್ದಪ್ಪ, ಬಿ.ಎಂ.ಬಸವರಾಜಪ್ಪ, ಪ್ರಮುಖರಾದ ಎಚ್.ಎಂ.ರುದ್ರಪ್ಪ, ಬಿ.ಎಂ.ವಿಜಯಕುಮಾರ್‌, ಮಹೇಶ್ವರಪ್ಪ, ಆರ್‌.ಬಸವರಾಜ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ಸುರೇಶ್‌, ಗ್ರಾಪಂ ಸದಸ್ಯ ಬಿ.ಎನ್‌.ಚಿದಾನಂದ್‌ ಇನ್ನಿತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ