“ಆಧ್ಯಾತ್ಮಿಕ ದಾರಿದ್ರéದಿಂದ ನಾನಾ ಸಮಸ್ಯೆ’
ಚೈತನ್ಯ ಜಯಂತಿ ಸಂಭ್ರಮೋತ್ಸವ
Team Udayavani, Mar 25, 2019, 6:30 AM IST
ಉಡುಪಿ: ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ಅನಾಚಾರ ಹೀಗೆ ನಾನಾ ವಿಧದ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಇದರ ಮೂಲ ಕಾರಣ ಆಧ್ಯಾತ್ಮಿಕ ದಾರಿದ್ರé ಎಂದು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನ್ಯಾ|ಮೂ| ಅಶೋಕ ಬಿ. ಹಿಂಚಿಗೇರಿ ಅವರು ಅಭಿಪ್ರಾಯ ಪಟ್ಟರೆ, ಭಗವಂತನ ನಾಮಸಂಕೀರ್ತನೆ ಆಧ್ಯಾತ್ಮಿಕ ದಾರಿದ್ರéವನ್ನು ನಿವಾರಿಸುತ್ತದೆ. ವ್ಯಾವಹಾರಿಕ ದಾರಿದ್ರéವನ್ನು ಕರೆನ್ಸಿ ನೋಟುಗಳು ಬಗೆಹರಿಸಿದರೆ ಆಧ್ಯಾತ್ಮಿಕ ದಾರಿದ್ರéವನ್ನು ನಾಮಸಂಕೀರ್ತನೆ ಪರಿಹರಿಸುತ್ತದೆ ಎಂದು ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧುಪಂಡಿತ ದಾಸ್ ಬೆಟ್ಟು ಮಾಡಿದರು.
ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಲಿಮಾರು ಮಠ, ಬೆಂಗಳೂರು ಇಸ್ಕಾನ್ ರವಿವಾರ ಆಯೋ ಜಿಸಿದ ಶ್ರೀಚೈತನ್ಯ ಜಯಂತಿ ಸಂಭ್ರಮೋತ್ಸವದ ಉದ್ಘಾಟನ ಸಮಾ ರಂಭದಲ್ಲಿ ಅವರು ಮಾತನಾಡಿದರು.
ಭಾರತದ ಶಕ್ತಿಯೇ ಆಧ್ಯಾತ್ಮಿಕ ಶಕ್ತಿ. ಭಾರತ ಹಿಂದೆ ಬದುಕಿದ್ದರೆ, ಮುಂದೆ ಬದುಕುವುದಿದ್ದರೆ ಇದೇ ಬಲದಿಂದ. ಇದುವೇ ನಿಜವಾದ ಬಲ ಎಂದು ಹಿಂಚಿಗೇರಿ ಹೇಳಿದರು. ದೇಹಕ್ಕೆ ಊಟ ಶಕ್ತಿ ತುಂಬುವಂತೆ ನಾಮಸಂಕೀರ್ತನೆ ಆತ್ಮಕ್ಕೆ ಶಕ್ತಿ ತುಂಬಿಸುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಮಧುಪಂಡಿತದಾಸ್ ವಿಶ್ಲೇಷಿಸಿದರು.
ಸಮಾಜಕ್ಕೆ ರೀಚಾರ್ಜ್
ಇಸ್ಕಾನ್ ಈಗ 17 ಲಕ್ಷ ಮಕ್ಕಳಿಗೆ ಮಧ್ಯಾಹ್ನ ಶುಚಿರುಚಿಯಾದ ಊಟ ವನ್ನು ವಿತರಿಸುತ್ತಿದೆ. ಯೋಜನೆಯು 1,200 ಮಕ್ಕಳಿಂದ ಆರಂಭಗೊಂಡಿತ್ತು. ಜಗತ್ತಿನಲ್ಲಿ ಲಾಭವಿಲ್ಲದೆ ಮಕ್ಕಳಿಗೆ ಊಟ ಕೊಡುತ್ತಿರುವ ಅತಿ ದೊಡ್ಡ ಸಂಸ್ಥೆಯಾಗಿದೆ. ಪರೋಪಕಾರ, ಪ್ರೀತಿ, ಸೇವೆಯಿಂದ ಸಮಾಜವನ್ನು ನಾವು ರೀಚಾರ್ಜ್ ಮಾಡಬೇಕಾಗಿದೆ ಎಂದು ಸಿಬಿಐ ಮಾಜಿ ನಿರ್ದೇಶಕ ಡಾ| ಡಿ. ಆರ್. ಕಾರ್ತಿಕೇಯನ್ ಹೇಳಿದರು.
ದೇವರೆದುರು ಪರಾಜಯ- ದಿಗ್ವಿಜಯ
ಸಂಭ್ರಮೋತ್ಸವವನ್ನು ದೀಪ ಬೆಳಗಿ ಉದ್ಘಾಟಿಸಿದ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಭಗವಂತನ ಎದುರು ನಾವು ಪರಾಜಿತರಾದರೆ ಅದಕ್ಕಿಂತ ದೊಡ್ಡ ದಿಗ್ವಿಜಯ ಇನ್ನೊಂದಿಲ್ಲ. ಭಗವಂತನ ನಾಮ ಜಪ ಮಾಡಿದರೆ ಎಂಜಲು ಇರುವ ಬಾಯಿ ಪವಿತ್ರವಾಗುತ್ತದೆ. ಕನಿಷ್ಠ ಎಂದು ಭಾವಿಸುವ ಕಾಲು ದೇವರ ಗುಡಿಗೆ ಪ್ರದಕ್ಷಿಣೆ ಬಂದಾಗ ಪವಿತ್ರವಾಗುತ್ತದೆ. ಹೊಲಸು ತುಂಬಿದ ಹೊಟ್ಟೆಗೆ ದೇವರ ನೈವೇದ್ಯವನ್ನು ಸ್ವೀಕರಿಸಿದರೆ ಅದು ಪಾವಿತ್ರ್ಯವಾಗುತ್ತದೆ. ಭಜನೆ ಮಾಡಿ ನರ್ತಿಸುವಾಗ ಯಾವುದೇ ಸಂಕೋಚವಿರಬಾರದು. ಇಯರ್ ಫೋನ್ ಹಾಕಿಕೊಂಡು ರಸ್ತೆಯಲ್ಲಿ ನಗೆಯಾಡುತ್ತ ಮಾತನಾಡಿಕೊಂಡು ಹೋಗುವಾಗ ಇಲ್ಲದ ನಾಚಿಕೆ ನಾಮಸಂಕೀರ್ತನೆ ಮಾಡುವಾಗ ಏಕೆ ಬೇಕು ಎಂದು ಪ್ರಶ್ನಿಸಿದರು.
ಪರ್ಯಾಯ ಮಠದ ದಿವಾನ್ ಶಿಬರೂರು ವೇದವ್ಯಾಸ ತಂತ್ರಿ, ಗೋಷ್ಠಿಗಳ ಅಧ್ಯಕ್ಷ, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ| ಮಲ್ಲೇಪುರಂ ವೆಂಕಟೇಶ್ ಉಪಸ್ಥಿತರಿದ್ದರು. ಇಸ್ಕಾನ್ ಹಿರಿಯ ಉಪಾಧ್ಯಕ್ಷ ಚಂಚಲಾಪತಿದಾಸ್ ಸ್ವಾಗತಿಸಿ ಶ್ರೀಸ್ತೋಕಕೃಷ್ಣ ಸ್ವಾಮೀಜಿ ವಂದಿಸಿದರು. ಉಜಿರೆ ಕಾಲೇಜಿನ ಉಪನ್ಯಾಸಕ ಡಾ|ರಾಜಶೇಖರ ಹಳೆಮನೆ ಕಾರ್ಯಕ್ರಮ ನಿರ್ವಹಿಸಿದರು.
ಗೋಷ್ಠಿಗಳಲ್ಲಿ ಚಿಕ್ಕಮಗಳೂರಿನ ಉಪನ್ಯಾಸಕ ಡಾ| ಬೆಳವಾಡಿ ಮಂಜುನಾಥ, ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಡಾ| ನಾ. ಗೀತಾಚಾರ್ಯ, ಮಂಗಳೂರಿನ ಕಾದಂಬರಿಕಾರ ವಿವೇಕಾನಂದ ಕಾಮತ್ ಪ್ರಬಂಧ ಮಂಡಿಸಿದರು. ಕಾರ್ಕಳದ ಕವಯಿತ್ರಿ ಜ್ಯೋತಿ ಗುರುಪ್ರಸಾದ್, ನೆಲಮಂಗಲದ ಕವಯಿತ್ರಿ ಹೇಮಾವತಿ ಹಂಚಿಪುರ, ಮಂಡ್ಯದ ಸಾಹಿತಿ ಡಾ| ಪ್ರದೀಪಕುಮಾರ ಹೆಬ್ರಿ ಕಾವ್ಯವಾಚನ ಮಾಡಿದರು. ಕವಿ ಬೆಂಗಳೂರಿನ ಪ್ರೊ| ವಿ. ಕೃಷ್ಣಮೂರ್ತಿ ರಾವ್ ಪ್ರಸ್ತಾವನೆಗೈದರು.