ನಿರ್ವಾಹಕನ ಮೇಲೆ ಹಲ್ಲೆ : ಆರೋಪಿ ಬಂಧನ

Team Udayavani, Dec 10, 2018, 3:49 PM IST

ಕುಣಿಗಲ್‌ : ಬಸ್‌ನಲ್ಲಿ ಜಗಳ ಮಾಡಬೇಡಿ ಎಂದು ಬುದ್ಧಿ ಹೇಳಿದ ಸಾರಿಗೆ ಸಂಸ್ಥೆಯ ಬಸ್‌ ನಿರ್ವಾಹಕನ ಮೇಲೆ ವ್ಯಕ್ತಿಯೋರ್ವ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್‌ ಘಟಕದ ಸಾರಿಗೆ ಬಸ್‌ ನಿರ್ವಾಹಕ ಧನಂಜಯ್ಯ ಗಾಯಗೊಂಡವರು.

ಮೈಸೂರಿನಿಂದ ತುಮಕೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಹುಲಿಯೂರು ದುರ್ಗ ಬಸ್‌ ನಿಲ್ದಾಣ ಬಳಿ ನಿಲ್ಲಿಸಿದಾಗ ಸಂತೇಮಾವತ್ತೂರು ಗ್ರಾಮದ ಮಂಜುನಾಥ್‌ ಸೇರಿದಂತೆ ಆತನ ಜತೆಯಲ್ಲಿ ಐದು ಮಂದಿ ಬಸ್‌ಗೆ ಹತ್ತಿಕೊಂಡರು. ಆದರೆ, ಬಸ್‌ನಲ್ಲಿ ಆ ಐದು ಮಂದಿ ಜಗಳವಾಡುತ್ತಿದ್ದರು.
 
ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಜಗಳವಾಡಬೇಡಿ ಎಂದು ನಿರ್ವಾಹಕ ಧನಂಜಯ್ಯ ಬುದ್ಧಿವಾದ ಹೇಳಿದ್ದರು. ಇದರಿಂದ ಕೆರಳಿದ ಮಂಜುನಾಥ್‌ ನಿರ್ವಾಹಕನೊಂದಿಗೆ ಜಗಳಕ್ಕೆ ಇಳಿದು ಬಳಿಕ ಕುಣಿಗಲ್‌ ಹುಚ್ಚಮಾಸ್ತಿಗೌಡ ವೃತ್ತದ ಬಳಿ ಬಸ್‌ ನಿಲ್ಲಿಸಿ ಪ್ರಯಾಣಿಕರಿಗೆ
ಧನಂಜಯ್ಯ ಚಿಲ್ಲರೆ ನೀಡುತ್ತಿರಬೇಕಾದರೆ ಆರೋಪಿ ಮಂಜುನಾಥ ಕಬ್ಬಿಣದ ಕೊಕ್ಕೆಯಿಂದ ಕುತ್ತಿಗೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಗಾಯಗೊಂಡ ನಿರ್ವಾಹಕನನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆ ಮರೆಸಿಕೊಂಡಿದ್ದ ಆರೋಪಿ ಮಂಜುನಾಥನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ