ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿತ

Team Udayavani, Jun 9, 2019, 1:50 PM IST

ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಮಾರುತ್ತಿರುವ ವರ್ತಕರು.

ತಿಪಟೂರು: ತಿಪಟೂರು ಕೊಬ್ಬರಿಯು ರುಚಿ ಮತ್ತು ಗುಣಮಟ್ಟದಲ್ಲಿ ಅತ್ಯುತ್ತಮ ದರ್ಜೆಯಾಗಿರುವ ಕಾರಣ 2019ರ ಆರಂಭದಿಂದ ಏಪ್ರಿಲ್ನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ರೂ17,600ರ ಗಡಿದಾಟಿತ್ತು. ಕಳೆದ 8-10 ದಿನಗಳಿಂದ ಬೇಡಿಕೆ ದಿಢೀರ್‌ ಕಡಿಮೆ ಯಾಗಿ, ಬೆಲೆಯೂ ತೀವ್ರ ಕುಸಿತ ಕಂಡು ಇಂದಿನ ಹರಾಜು ಕೇವಲ 12ರಿಂದ 13ಸಾವಿರಕ್ಕೆ ಇಳಿಯುವ ಮೂಲಕ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ ಮತ್ತಷ್ಟು ಕುಸಿಯುವ ಲಕ್ಷಣಗಳು ಕಂಡುಬಂದಿವೆ.

ವಿಶ್ವಪ್ರಸಿದ್ಧ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಇಂದಿನ ಶನಿವಾರದ ಕೊಬ್ಬರಿ ಹರಾಜಿನಲ್ಲಿ ಕೊಬ್ಬರಿ ಬೆಲೆ ದಿಢೀರ್‌ ಕುಸಿತ ಕಂಡಿದೆ. ಕಳೆದ 10-12 ದಿನಗಳಿಂದಲೂ ಈ ಬಗ್ಗೆ ಅನುಮಾನಗಳು ಕಂಡು ಬರುತ್ತಿದ್ದು ತೀವ್ರ ಕುಸಿತದ ಬಗ್ಗೆ ಮಾರುಕಟ್ಟೆಯ ತುಂಬಾ ಕೇಳಿಬರುತ್ತಿರುವ ಮಾತುಗಳೆಂದರೆ ಹೆಚ್ಚಾಗಿ ಕೊಬ್ಬರಿ ಬೇಡಿಕೆ ಇರುವ ರಾಜ್ಯಗಳಾದ ಯು.ಪಿ, ಡೆಲ್ಲಿ, ಜೈಪುರ್‌ ಮುಂತಾದ ಕಡೆಗಳಲ್ಲಿ ಇಲ್ಲಿನ ಕೊಬ್ಬರಿಯನ್ನು ಅಲ್ಲಿ ಯಥೇಚ್ಚವಾಗಿ ತಿನ್ನಲು ಉಪ ಯೋಗಿಸುತ್ತಾರೆ.ಏಪ್ರಿಲ್ ನಿಂದ ಪ್ರಾರಂಭವಾದ ಬಿಸಿಲು ಆ ಪ್ರದೇಶದಲ್ಲಿ ಹೆಚ್ಚಿದ್ದು ತೆಂಗು ಬಳಕೆ ಕಡಿಮೆಯಾದ ಕಾರಣ ಬೇಡಿಕೆ ಕುಸಿದಿದೆ. ಮಳೆ ಹಾಗೂ ಚಳಿ ಇದ್ದಾಗ ವಿಪರೀತ ಬೇಡಿಕೆ ಇರುತ್ತದೆ. ಇನ್ನು ಕೊಬ್ಬರಿ ಆಯಿಲ್ ದರವೂ ಕಡಿಮೆಯಾಗಿದೆ. ತೆಂಗಿನ ಕಾಯಿ ದರವೂ ತುಂಬಾ ಕಡಿಮೆಯಾಗಿದೆ. ಇದೆಲ್ಲದರ ಪರಿಣಾಮ ಕೊಬ್ಬರಿ ದರ ತೀವ್ರ ಕುಸಿತ ಕಂಡಿದೆ ಎಂಬುದು ಕೊಬ್ಬರಿ ವರ್ತಕರ ಹಾಗೂ ರವಾನೆದಾರರ ಅಬಿಪ್ರಾಯವಾಗಿದೆ.

ರೋಗಬಾಧೆ: ತೆಂಗು ತಿಪಟೂರು ಮತ್ತು ಅಕ್ಕ ಪಕ್ಕದ ಐದಾರು ಜಿಲ್ಲೆಗಳ 40ರಿಂದ 50ತಾಲೂಕುಗಳ ಜನತೆಯ ಜೀವನಾಡಿಯಾಗಿದೆ. ತೆಂಗಿಗೆ ಕಳೆದ ಹತ್ತಾರು ವರ್ಷಗಳಿಂದ ಪ್ರಕೃತಿ ವಿಕೋಪ, ನುಸಿಪೀಡೆ, ಬೆಂಕಿರೋಗ, ರಸಸೋರುವ ರೋಗ, ಕಪ್ಪುತಲೆ ಹುಳು ಬಾಧೆ ಸೇರಿದಂತೆ ಒಂದಲ್ಲ ಒಂದು ರೋಗಗಳು ಬಿಟ್ಟೂ ಬಿಡದೆ ಪೀಡಿಸುತ್ತಿವೆ. ಜೊತೆಗೆ ಕಾಲಕಾಲಕ್ಕೆ ಮಳೆಯೂ ಇಲ್ಲದ್ದರಿಂದ, ಅಂತರ್‌ಜಲದ ಮಟ್ಟ ಸಾವಿರ ಅಡಿಗೆ ಕುಸಿದು ಹೋಗಿದ್ದು ನೀರುಣಿಸ ಲಾಗುತ್ತಿಲ್ಲ ಆದ್ದರಿಂದ ತೆಂಗು ಅಳಿವಿನಂಚಿಗೆ ತಲುಪಿದ್ದು ಬೆಳೆಗಾರರು ನಿರಂತರ ನಷ್ಠಕ್ಕೊಳಗಾ ಗುತ್ತಿದ್ದಾರೆ. ಇವೆಲ್ಲಾ ಸಮಸ್ಯೆಗಳು ಒಂದೆಡೆಯಾದರೆ, ಪ್ರಮುಖವಾಗಿ ಕೊಬ್ಬರಿ ಬೆಲೆಯೂ ದಿನದಿಂದ ದಿನಕ್ಕೆ ಕುಸಿದು ರೈತರ ಜೀವನದಲ್ಲಿ ಚಲ್ಲಾಟವಾಡುತ್ತಿದೆ.

ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ: ಮುಂದೆ ಕೊಬ್ಬರಿ ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದ್ದರೂ ಈವರೆವಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತ ಕಡೆ ಗಮನ ಹರಿಸದೆ ಇರುವುದು ಶೋಚನೀಯ ಸಂಗತಿಯಾಗಿದೆ. ರಾಜ್ಯ ಹಾಗು ಕೇಂದ್ರ ಸರ್ಕಾರಗಳನ್ನು ಪ್ರತಿ ನಿಧಿ ‌ುವ ತೆಂಗು ಬೆಳೆವ ಜಿಲ್ಲೆಗಳಾದ ತುಮಕೂರು, ಹಾಸನ, ಚಿಕ್ಕಮಂಗಳೂರು, ಬೆಂಗಳೂರು, ಮೈಸೂರು ಸೇರಿ ದಂತೆ ಇನ್ನು ಕೆಲ ಜಿಲ್ಲೆಗಳ ಜನಪ್ರತಿನಿಧಿಗಳ ಇಚ್ಚಾ ಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ ಎಂಬುದು ಬೆಳೆಗಾರರ ಆಕ್ರೋಶವಾಗಿದೆ. ಈ ಹಿನ್ನಲೆ ಯಲ್ಲಿ ಈ ಭಾಗದ ಶಾಸಕರು ಹಾಗೂ ಸಂಸದರ ನಿಯೊಗಗಳು ರಾಜ್ಯ ಹಾಗು ಕೇಂಧ್ರ ಸರ್ಕಾರಗಳ ಮೇಲೆ ನಿರಂತ ವಾಗಿ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡಿ ದರೆ ಕೊಬ್ಬ ರಿಗೆ ಕನಿಷ್ಠ 20ಸಾವಿರ ರೂ. ಬೆಂಬಲ ಬೆಲೆ ಕೊಡಿಸಲು ಸಾಧ್ಯವಾಗಿ ತೆಂಗು ಬೆಳೆಗಾರ ಉಳಿಯಲು ಸಾಧ್ಯ.

ಕೃಷಿ ಹೈರಾಣು: ದಿನದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಆದರೆ ಕೊಬ್ಬರಿ ಬೆಲೆ ಮಾತ್ರ ಹಲ ವಾರು ವರ್ಷಗಳಿದಲೂ ಅಷ್ಟರಲ್ಲೇ ಇದೆ. ಈ ಹಿನ್ನೆಲೆ ಯಲ್ಲಿ ತೆಂಗು ಬೆಳೆಯುವುದಕ್ಕಿಂತ ಬೇರೆ ಬೆಳೆಗಳನ್ನು ಬೆಳೆದು ಬದುಕು ಸಾಗಿಸೋಣವೆಂಬ ಯೋಚನೆ ತೆಂಗು ಬೆಳೆಗಾರರಲ್ಲಿದೆ. ಇದೇ ನೋವಿನಲ್ಲಿ ರೈತರು ತೋಟಗಳಿಗೆ ಬೋರ್‌ವೆಲ್ ತೋಡಿಸಿ ನೀರು, ಗೊಬ್ಬರ ಉಣಿಸುವ ಕೆಲಸಕ್ಕೆ ಗುಡ್‌ಬೈ ಹೇಳುತ್ತಿದ್ದಾರೆ. ಈವರೆಗೂ ಬೆಳೆಗಾರರು ತೋಟಗಳ ನಿರ್ವಹಣೆ ಹಾಗೂ ಹೊಸತೋಟಗಳನ್ನು ಮಾಡಲು ನೀರಿಗಾಗಿ ಬೋರ್‌ವೆಲ್ ಕೊರೆಸಲು, ಗೊಬ್ಬರ, ತಂತಿಬೇಲಿ ಇತ್ಯಾದಿ ಕೆಲಸಗಳಿಗೆ ಬ್ಯಾಂಕ್‌ಗಳಿಂದ ಸಾಲಪಡೆದು ಹೈರಾಣಾಗಿದ್ದಾರೆ. ಬದುಕು ಸಾಗಿಸಲು ಬಹುತೇಕ ಬೆಳೆಗಾರರು ಹೈನೋದ್ಯಮ ಆಶ್ರಯಿಸಿ ಜೀವನ ನಿರ್ವಹಣೆ ಮಾಡುತ್ತಿದ್ದರೆ, ಅವರ ಮಕ್ಕಳು ಉದ್ಯೋಗ ಹರಸಿ ನಗರಗಳಿಗೆ ವಲಸೆ ಹೋಗುತ್ತಿ ದ್ದಾರೆ. ಇನ್ನು ಕಳೆದ 3-4ವರ್ಷಗಳಿಂದ ಶೇ.70ರಷ್ಟು ಬೆಳೆಗಾರರ ತೆಂಗಿನ ತೋಟಗಳು ನೀರಿಲ್ಲದೆ ಒಣಗುತ್ತಿವೆ. ಉಳಿದ ಶೇ.30 ರಷ್ಟು ಬೆಳೆಗಾರರ ಕೊಬ್ಬರಿಗೂ ಲಾಭದಯಕ ಬೆಲೆ ಸಿಗದೆ ಕಂಗಾಲಾ ಗುವಂತೆ ಕೊಬ್ಬರಿ ಬೆಲೆ ಬಿದ್ದು ಹೋಗಿದ್ದು ಒಟ್ಟಾರೆ ತೆಂಗು ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ