ಭೂಸ್ವಾಧೀನ ವಿರೋಧಿಸಿ ರೈತರ ಆಕ್ರೋಶ

Team Udayavani, Jun 11, 2019, 11:47 AM IST

ತುಮಕೂರಿನ ರಾಷ್ಟ್ರೀಯ ಹೆದ್ದಾರಿ ಕ್ಯಾತ್ಸಂದ್ರ ಜಾಸ್‌ಟೋಲ್ ಬಳಿ ರೈತರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದ ರೈತರನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಕ‌ರೆದೊಯ್ಯಲಾಯಿತು.

ತಿಪಟೂರು: ರಸ್ತೆ, ಕುಡಿವ ನೀರಿನ ಯೋಜನೆ ಸೇರಿ ದಂತೆ ನಾನಾ ಯೋಜನೆಗಳ ಹೆಸರಿನಲ್ಲಿ ಅವೈಜ್ಞಾನಿಕ ವಾಗಿ, ರೈತರ ವ್ಯವಸಾಯದ ಜಮೀನುಗಳನ್ನು ಸರ್ಕಾರ ಕಿತ್ತುಕೊಳ್ಳುತ್ತಿರುವುದು ಖಂಡನೀಯ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಬೆನ್ನಾಯಕನಹಳ್ಳಿ ದೇವರಾಜು ಆಕ್ರೋಶ ವ್ಯಕ್ತಿಪಡಿಸಿದರು.

ನಗರದ ಸಿಂಗ್ರಿನಂಜಪ್ಪ ವೃತ್ತದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ, ಜನಸ್ಪಂದನ ಟ್ರಸ್ಟ್‌, ದಕ್ಷಿಣ ಒಳನಾಡು ನೀರಾವರಿ ಹೋರಾಟ ಸಮಿತಿ, ಬೆಲೆ ಕಾವಲು ಸಮಿತಿ, ರಾಷ್ಟ್ರೀಯ ಹೆದ್ದಾರಿ 206 ಹಾಗೂ ಎತ್ತಿನ ಹೋಳೆ ಯೋಜನಾ ಸಂತ್ರಸ್ತರು, ಸೌಹಾರ್ಧ ಸಂಘಟನೆಗಳು ಸೇರಿ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ, ಎತ್ತಿನಹೊಳೆ ಯೋಜನೆಯಡಿ ತಾಲೂಕಿನ ಕೆರೆಗಳಿಗೆ ನೀರು ಹಂಚಿಕೆಯಲ್ಲಾಗಿರುವ ಮೋಸ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ 206ನ್ನು ಸೋಮವಾರ ಬಂದ್‌ ಮಾಡಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ದೇವರಾಜು, ಎತ್ತಿನಹೊಳೆ ಕುಡಿಯುವ ನೀರಾವರಿ ಯೋಜನೆಯಲ್ಲಿ ರೈತರ ಜಮೀನುಗಳನ್ನು ಕವಡೆ ಕಾಸಿನ ಕಿಮ್ಮತ್ತು ಕಟ್ಟಿ ಕಿತ್ತುಕೊಳ್ಳಲು ಹುನ್ನಾರ ನಡೆಯುತ್ತಿದೆ. ಭೂಸ್ವಾಧೀನ ಸಂತ್ರಸ್ತರಿಗೆ ಮಾರುಕಟ್ಟೆಯ ಸ್ಪರ್ಧಾತ್ಮಕ ವೈಜ್ಞಾನಿಕ ಬೆಲೆ ನೀಡಬೇಕು. ಭೂಸ್ವಾಧೀನ ಪ್ರಕ್ರಿಯೆ ಮಾಡುವಾಗ ಸಂಬಂಧಪಟ್ಟ ಅಧಿಕಾರಿಗಳು ರೈತರೊಡನೆ ಹಲವು ಜಂಟಿ ಸಭೆಗಳನ್ನು ನಡೆಸಿ ಚರ್ಚಿಸಬೇಕು. ಹೊಸ ಭೂಸ್ವಾದೀನ ಆದೇಶ ಹಿಂಪಡೆಯಬೇಕು. ಎತ್ತಿನ ಹೊಳೆಯಲ್ಲಿ ತಿಪಟೂರಿಗೆ ಹನಿ ನೀರೂ ಹಂಚಿಕೆ ಯಾಗಿಲ್ಲ. ನಮ್ಮ ತಾಲೂಕಿನ ನೂರಾರು ಎಕರೆ ಕೃಷಿ ಜಮೀನು ಈ ಯೋಜನೆಗೆ ಭೂಸ್ವಾದೀನವಾಗಲಿದ್ದು ಇಲ್ಲಿನ ರೈತರಿಗೆ ನೀರಿಲ್ಲದಂತಾಗಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಅಕ್ಕಪಕ್ಕದ ತಾಲೂಕುಗಳಿಗೆ ನೀರು ಹಂಚಿಕೆಯಾಗಿದ್ದು ನಮಗೆ ಏಕೆ ಇಲ್ಲ ಎಂದು ಪ್ರಶ್ನಿಸಿದರು.

ಜನಸ್ಪಂದನ ಟ್ರಸ್ಟ್‌ ಅಧ್ಯಕ್ಷ ಸಿ.ಬಿ.ಶಶಿಧರ್‌ ಮಾತನಾಡಿ, ತಾಲ್ಲೂಕಿನಲ್ಲಿ ಉಂಟಾಗಿರುವ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಎತ್ತಿನ ಹೊಳೆ ಯೋಜನೆ ಯಲ್ಲಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತಹ ಕೆಲಸಗಳಾಗಬೇಕು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರ ಜಮೀನುಗಳಿಗೆ ಲಾಭದಾಯಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಆರ್‌ ಕೆ ಎಸ್‌ ಸ್ವಾಮಿ ಮಾತನಾಡಿ, ಸರ್ಕಾರಗಳ ಯೋಜನೆಗಳು ರೈತರನ್ನು ಒಕ್ಕಲೆಬ್ಬಿಸಿ ಬಂಡಾವಳಶಾಹಿ ಗಳನ್ನು ಉದ್ದಾರ ಮಾಡುವ ಯೋಜನೆಗಳಾಗಿವೆ. ಯುವಕರಿಗೆ ಕೆಲಸ ಇಲ್ಲ. ಕೈಗಾರಿಕೆಗಳು ಪ್ರಾರಂಭವಾಗಿ ಕೊನೆಗೆ ವೇತನವನ್ನು ಕೊಡದೆ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ರೈತರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆಗಳು ಎದು ರಾಗುತ್ತವೆ. ಶಾಸಕರು, ಸಂಸದರು ನಿದ್ದೆಯಲ್ಲಿದ್ದಾರೆ, ನಮ್ಮ ಬದುಕು ಕಟ್ಟಿಕೊಳ್ಳಲು ಹೋರಾಟಗಳು ಅನಿವಾರ್ಯವಾಗಿವೆ ಎಂದರು.

ಪ್ರಗತಿಪರ ಚಿಂತಕ ಉಜ್ಜಜ್ಜಿ ರಾಜಣ್ಣ ಮಾತನಾಡಿ ದರು. ರಸ್ತೆ ತಡೆಗೆ ಕರ್ನಾಟಕ ಪ್ರಾಂತ್ಯ ರೈತ ಸಂಘ, ಸಿ.ಐ.ಟಿ.ಯು, ಜನಸ್ಪಂದನ ಟ್ರಸ್ಟ್‌, ಭೂಮಿ ಸಾಂಸ್ಕೃತಿಕ ವೇದಿಕೆ, ಮುಸ್ಲೀಂಜಮಾಯತ್‌, ರೈತ ಕೃಷಿ ಕಾರ್ಮಿಕ ಸಂಘ, ಬೌದ್ದ ಮಹಾಸಭಾ, ಸಾವಯವ ಕೃಷಿ ಪರಿವಾರ, ಜಾಗೃತಿ ಸೇವಾ ಸಂಸ್ಥೆ, ಜಯಕರ್ನಾಟಕ, ಕರ್ನಾಟಕ ರಕ್ಷಣಾ ವೇಧಿಕೆ, ನವಕರ್ನಾಟಕ ಶಕ್ತಿ ಸಂಘಟನೆ ಸೇರಿದಂತೆ ಇತರ ಸಂಘಟನೆಗಳು ಬೆಂಬಲ ಸೂಚಿಸಿದವು.

ನಗರ ಠಾಣೆಯ ಪೋಲಿಸರು 70ಕ್ಕೂ ಹೆಚ್ಚು ಮುಖಂಡರುಗಳನ್ನು ಬಂಧಿಸಿ ಮಾಹಿತಿ ಪಡೆದು ಬಳಿಕ ಬಿಡುಗಡೆಗೊಳಿಸಿದರು. ರೈತ ಸಂಘದ ಗೌರವಧ್ಯಕ್ಷ ತಡಸೂರು ನಂಜಪ್ಪ, ತಾಲೂಕು ಅಧ್ಯಕ್ಷ ಬಸ್ತೀಹಳ್ಳಿ ರಾಜಣ್ಣ, ಹಸಿರು ಸೇನೆ ತಾಲೂಕು ಅಧ್ಯಕ್ಷ ತಿಮ್ಮಲಾಪುರ ದೇವರಾಜು, ಕಸಬಾ ಹೋಬಳಿ ಅಧ್ಯಕ್ಷ ಬೇಲೂರನಹಳ್ಳಿ ಷಡಕ್ಷರಿ, ಆಲ್ಬೂರು ಗಂಗಾಧರ್‌, ಕನ್ನಡ ರಕ್ಷಣಾ ವೇಧಿಕೆ ಅಧ್ಯಕ್ಷ ವಿಜಯ್‌ ಕುಮಾರ್‌, ಕಿರಣ್‌, ನವೀನ್‌, ಮಧು, ಎಪಿಎಂಸಿ ನಿರ್ದೇಶಕ ಮಧುಸೂದನ್‌, ಶರತ್‌ ಕಲ್ಲೇಗೌಡನಪಾಳ್ಯ, ಹುಚ್ಚ ಗೊಂಡನಹಳ್ಳಿ ಲೋಕೇಶ್‌, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಬಿ.ಟಿ. ಕುಮಾರ್‌, ಮೂಡಲಪಾಯ ಯಕ್ಷಗಾನ ನಂಜುಂಡಪ್ಪ ಇತರರಿದ್ದರು.

ತುಮಕೂರು: ರೈತ ವಿರೋಧಿ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪ ಪಡೆಯಬೇಕು, ಸರ್ಕಾರಿ ಉಪಯೋಗಕ್ಕೆ ರೈತರ ಭೂಮಿ ಪಡೆಯುವಾಗ ಬಾಡಿಗೆ ರೂಪದಲ್ಲಿ ಪಡೆಯಲು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆಯ ಹಮ್ಮಿಕೊಂಡಿದ್ದ ಹೆದ್ದಾರಿ ತಡೆ ನಡೆಯಿತು. ಚಳವಳಿ ನಡೆಸಿದ ರೈತರನ್ನು ಪೊಲೀಸರು ಬಂಧಿಸಿ ದಾಗ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಬಲ ವ್ಯಕ್ತ: ರಾಜ್ಯ ಸರ್ಕಾರ 2013 ರಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು, ಸರ್ಕಾರದ ಯೋಜನೆಗಳಿಗೆ ಭೂಮಿ ಪಡೆ ಯುವಾಗ ರೈತರ ಅನುಮತಿ ಪಡೆಯುವುದು ಕಡ್ಡಾಯವಲ್ಲ ಎಂದು ಕಾನೂನು ರೂಪಿಸಿದೆ.

ಇದು ರೈತರಿಗೆ ಮರಣ ಶಾಸನವಾಗಿದ್ದು, ಕೂಡಲೇ ಈ ತಿದ್ದುಪಡಿ ಅಂಶವನ್ನು ಕೈಬಿಟ್ಟು ಈ ಹಿಂದಿನಂತೆ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತರಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಮ್ಮಿ ಕೊಂಡಿದ್ದ ಹೆದ್ದಾರಿ ತಡೆಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ನಗರದ ಜಾಸ್‌ಟೋಲ್ ಬಳಿ ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ರಸ್ತೆ ತಡೆದ ರೈತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು. ಇಲ್ಲಿಯ ಜಾಸ್‌ಟೋಲ್ ಬಳಿ ಸಮಾವೇಶಗೊಂಡ ಜಿಲ್ಲೆಯ ವಿವಿಧೆಡೆ ಗಳಿಂದ ಆಗಮಿಸಿದ್ದ ಸಾವಿರಾರು ರೈತರು, ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ ಕೂಡಲೇ ರಾಜ್ಯ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು.

ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್, ರಾಜ್ಯ ಸರ್ಕಾರ 2013ರಲ್ಲಿ ಕೇಂದ್ರ ಸರ್ಕಾರ ರೈತರ ಹಿತದೃಷ್ಟಿಯನ್ನಿಟ್ಟುಕೊಂಡು ಜಾರಿಗೆ ತಂದಿದ್ದ ಭೂ ಸ್ವಾಧೀನ ಕಾಯ್ದೆಗೆ, ಮಣ್ಣಿನ ಮಕ್ಕಳೆಂದು ಹೇಳುವ ಎಚ್.ಡಿ.ಕುಮಾರಸ್ವಾಮಿ ಉದ್ಯಮಿಗಳ ಪರವಾದ ನಿಲುವುಗಳನ್ನು ತಾಳಿ, ಹಲವು ಮಾರ್ಪಾ ಡುಗಳನ್ನು ಮಾಡಿದ್ದು, ಇದರಿಂದ ಸಣ್ಣ ಹಿಡುವಳಿ ದಾರರು ಇರುವ ಭೂಮಿ ಕಳೆದು ಕೊಂಡು ಬೀದಿ ಪಾಲಾಗುವ ಸ್ಥಿತಿ ಬಂದಿದೆ. ರೈತ ವಿರೋಧಿ ಧೋರಣೆ ಗಳನ್ನು ತಾಳಿ ಸಿದ್ದ ರಾಮಯ್ಯ ಸರ್ಕಾರ ಅನುಭವಿಸಿದ ಹಿನ್ನೆಡೆಯನ್ನೇ ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರವೂ ಇದೇ ಸ್ಥಿತಿ ಅನುಭವಿಸಲಿದೆ ಎಂದು ಎಚ್ಚರಿಕೆ ನೀಡಿದರು.

ನಿರಂತರ ಹೋರಾಟ: ರಾಜ್ಯ ಸರ್ಕಾರ ರೈತರ ಹೋರಾಟವನ್ನು ಪೊಲೀಸ್‌ ಬಲದ ಮೂಲಕ ಹತ್ತಿ ಕ್ಕುವ ಕೆಲಸ ಮಾಡುತ್ತಿದೆ. ಇದು ಸರಿಯಾದ ಕ್ರಮ ವಲ್ಲ. ಈ ದೇಶಕ್ಕೆ ಅನ್ನ, ಹಾಲು ನೀಡುವ ರೈತರ ವಿರುದ್ಧ ಸರ್ಕಾರಗಳು, ಅಭಿವೃದ್ಧಿ ಹೆಸರಿನಲ್ಲಿ ರೈತರ ಫ‌ಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಬೀದಿಗೆ ತಳ್ಳುತ್ತಿದೆ. ವೈಜ್ಞಾನಿಕ ಪರಿಹಾರ ನೀಡದೆ ಇಡಿಗಂಟಿನ ರೂಪದಲ್ಲಿ ಬಿಡಿಗಾಸು ನೀಡಿ ಅಪಮಾನ ಮಾಡುತ್ತಿದೆ. ಈ ಕಾಯ್ದೆ ಹಿಂಪಡೆಯುವ ವರೆಗೂ ಹೋರಾಟ ನಿಲ್ಲದು ಎಂದು ಆನಂದ್‌ ಪಟೇಲ್ ತಿಳಿಸಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್‌ ಮಾತನಾಡಿ, ರಾಜ್ಯ ಸರ್ಕಾರ ಭೂ ಮಾಲೀಕರು ಮತ್ತು ಉದ್ದಿಮೆದಾರರ ನಡುವಿನ ದಲ್ಲಾಳಿಯಂತೆ ಕೆಲಸ ಮಾಡುತ್ತಿದೆ.

ರೈತರ ಫ‌ಲವತ್ತಾದ ಭೂಮಿಯನ್ನು ವಶಪಡಿಸಿ ಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನೀಡಿ, ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಇದು ಖಂಡನೀಯ. ಇದರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಉಗ್ರ ಸ್ವರೂಪ ಪಡೆದು ಕೊಳ್ಳಲಿದೆ ಎಂದು ಎಚ್ಚರಿಸಿದರು.ಜಿಲ್ಲಾ ಕಾರ್ಯಾಧ್ಯಕ್ಷ ಧನಂಜಯ ಆರಾಧ್ಯ, ಕೊರಟಗೆರೆ ತಾಲೂಕ್‌ ಅಧ್ಯಕ್ಷ ಕೋಡಿಹಳ್ಳಿ ಸಿದ್ಧರಾಜು, ತುರುವೇಕೆರೆ ತಾಲೂಕು ಅಧ್ಯಕ್ಷ ಹಳೆಸಂಪಿಗೆ ಕೀರ್ತಿ, ಪ್ರಸನ್ನ, ಲಕ್ಕಣ್ಣ, ಬೆಟ್ಟೇಗೌಡ, ವೆಂಕಟೇಶ್‌ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕುಣಿಗಲ್: ಗೌರವಧನಕ್ಕಾಗಿ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ, ಅಧಿಕಾರಿಗಳ ದೌರ್ಜನ್ಯ,...

  • ಪಾವಗಡ: ಸಮರ್ಪಕ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಖಾಸಗಿ ಬಸ್‌ ನಿಲ್ದಾಣದಲ್ಲಿ ಬಸ್‌ ತಡೆದು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳಿಗೆ...

  • ಕೊರಟಗೆರೆ: ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದಿರಾ.. ಕಾಮಗಾರಿ ಮಾಡಿಸಲು ನಿರ್ಲಕ್ಷ್ಯವೇಕೆ?, ನೀವು ಕೆಲಸ ಮಾಡಿಸದಿದ್ದರೆ ನಾನೇ ಕ್ರಮಕ್ಕೆ ಮುಂದಾ ಗುತ್ತೇನೆ.....

  • ತಿಪಟೂರು: ತಾಲೂಕಿನಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದರಿಂದ ಜನರ ಪಡಿಪಾಟಲು ಹೇಳತೀರದಾಗಿದೆ. ಶಾಲಾ-ಕಾಲೇಜುಗಳಿಗೆ ತೆರಳುವ...

  • ತುಮಕೂರು: ನಗರದ ಅಲ್ಪಸಂಖ್ಯಾತ ಕಡು ಬಡವರಿಗೆ 600 ಕೋಟಿ ರೂ.ಗೂ ಹೆಚ್ಚು ವಂಚಿಸಿ ಪರಾರಿಯಾಗಿರುವ ಆರೋಪಿಗಳನ್ನು ಕೂಡಲೇ ಪೊಲೀಸರು ಬಂಧಿಸಬೇಕು. ನೆರವು ನೀಡಿದವರನ್ನು...

ಹೊಸ ಸೇರ್ಪಡೆ