ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ 15 ಲಕ್ಷ ಡೀಲ್‌!​​​​​​​

Team Udayavani, Aug 5, 2018, 6:00 AM IST

ತುಮಕೂರು: ಗುಬ್ಬಿ ತಾಲೂಕಿನ ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ 15 ಲಕ್ಷ ರೂ.ಗೆ ಒಪ್ಪಂದ ನಡೆದಿದೆ ಎನ್ನಲಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಗ್ರಾಮ ಪಂಚಾಯಿತಿಯಲ್ಲಿ ಈಗ 5 ವರ್ಷದ ಅವಧಿಗೆ ಜಾವಿದ್‌ ಪಾಷ ಅಧ್ಯಕ್ಷರಾಗಿದ್ದಾರೆ. ಅವರ ವಿರುದ್ಧ ಅವಿಶ್ವಾಸ ನಿರ್ಣಯ ತಂದು, ಅವರನ್ನು ಕೆಳಗಿಳಿಸಿ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಗ್ರಾಪಂ ಸದಸ್ಯರು ತೀರ್ಮಾನ ಕೈಗೊಂಡಿದ್ದಾರೆ. ಈ ಸಂಬಂಧ ಚಟುವಟಿಕೆಗಳು ಬಿರುಸುಗೊಂಡಿವೆ.

ಜಾವಿದ್‌ ಪಾಷ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಉಳಿದ 22 ತಿಂಗಳ ಅವಧಿಗೆ ತಲಾ 11 ತಿಂಗಳು ಅಧಿಕಾರ ನಡೆಸಲು ಇಬ್ಬರು ಸದಸ್ಯರ ನಡುವೆ ತೀರ್ಮಾನಿಸಲಾಗಿದೆ. ಈ ಪೈಕಿ, ಮೊದಲು ಅಧಿಕಾರ ನಡೆಸುವವರು 15 ಲಕ್ಷ ರೂ.ನೀಡಬೇಕು.ಈ ಬಗ್ಗೆ ದೇವಾಲಯದಲ್ಲಿ ಪ್ರಮಾಣ ಮಾಡಿ ಹಣ ನೀಡಲಾಗಿದೆ ಎಂಬ ಸಂಗತಿ ವೈರಲ್‌ ಆಗಿರುವ ವಿಡಿಯೋದಲ್ಲಿದೆ. ಹೀಗಾಗಿ, ಗ್ರಾಪಂ ಅಧ್ಯಕ್ಷ ಸ್ಥಾನ 15 ಲಕ್ಷಕ್ಕೆ ಮಾರಾಟವಾಗಿದೆ ಎಂದು ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

ಹಾಲಿ ಅಧ್ಯಕ್ಷರಾಗಿರುವ ಜಾವಿದ್‌ ಪಾಷ ವಿರುದ್ಧ ಅವಿಶ್ವಾಸ ತಂದು, ಕೆಳಗಿಳಿಸುವುದು. ಉಳಿದ 22 ತಿಂಗಳ ಅವಧಿ ಪೈಕಿ 11 ತಿಂಗಳಿಗೆ ಗ್ರಾಪಂ ಸದಸ್ಯ ಗಿರೀಶ್‌ ಅಧ್ಯಕ್ಷರಾಗುವುದು. ಅದಕ್ಕೆ ಪ್ರತಿಯಾಗಿ 15 ಲಕ್ಷ ರೂ.ಗಳನ್ನು ನಂತರದ 11 ತಿಂಗಳಿಗೆ ಅಧ್ಯಕ್ಷರಾಗುವ ಮತ್ತೂಬ್ಬ ಸದಸ್ಯ ಶಿವಾನಂದ್‌ಗೆ ನೀಡುವುದು. ಬಳಿಕ, ಗಿರೀಶ್‌ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಉಳಿದ 11 ತಿಂಗಳ ಅವಧಿಗೆ ಇನ್ನೊಬ್ಬ ಸದಸ್ಯ ಶಿವಾನಂದ್‌ ಅಧ್ಯಕ್ಷರಾಗುವುದು. ಈ ವೇಳೆ, ಶಿವಾನಂದ್‌ ಅವರು ಗಿರೀಶ್‌ಗೆ 15 ಲಕ್ಷ ರೂ. ವಾಪಸ್‌ ನೀಡುವುದು ಎಂದು ಗ್ರಾಮಸ್ಥರ ಸಮ್ಮುಖದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಬಳಿಕ, ಗ್ರಾಮ ದೇವತೆಗೆ ಪೂಜೆ ಸಲ್ಲಿಸಲಾಗಿದೆ. ಗಿರೀಶ್‌ ಹಾಗೂ ಶಿವಾನಂದ್‌ ಪರಸ್ಪರ ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಂಡಿದ್ದಾರೆ. ಈ ವೇಳೆ, ಉಭಯ ನಾಯಕರ ಬೆಂಬಲಿಗರು ಜಯಕಾರ ಮೊಳಗಿಸಿದ್ದಾರೆ. ಬಳಿಕ,
ಒಪ್ಪಂದದಂತೆ 15 ಲಕ್ಷ ರೂ.ಗಳಿದ್ದ ಬ್ಯಾಗ್‌ನ್ನು ಶಿವಾನಂದ್‌ಗೆ ಗಿರೀಶ್‌ ನೀಡಿದ್ದಾರೆ. ಶಿವಾನಂದ್‌ ಹಣ ಪಡೆದು ಅದನ್ನು ಎಣಿಸಿದ್ದಾರೆ. ಇದನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನನ್ನ ವಿರುದ್ಧ ಷಡ್ಯಂತ್ರ
ಈ ಸಂಬಂಧ “ಉದಯವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಕಡಬ ಗ್ರಾಪಂ ಅಧ್ಯಕ್ಷ ಜಾವಿದ್‌ ಪಾಷ, “ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಕೆಲವರು ಷಡ್ಯಂತ್ರ ರೂಪಿಸುತ್ತಿದ್ದಾರೆ. ಮೂರು ವರ್ಷದಲ್ಲಿ ಉತ್ತಮ ಆಡಳಿತ ನೀಡಿದ್ದೇನೆ. ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದಲ್ಲದೆ, ವಿಶ್ವಾಸ ನಿರ್ಣಯ ಮಂಡಿಸುವ ಪ್ರಯತ್ನವನ್ನೂ ನಡೆಸಿದರು. ಆದರೆ, ಆ ರೀತಿ ಅವಿಶ್ವಾಸ ತಂದು ಕೆಳಗಿಳಿಸಲು ಬರುವುದಿಲ್ಲ. ಬಲವಾದ ಕಾರಣ ಬೇಕು. ಗ್ರಾಪಂನಲ್ಲಿ ಹಗರಣ ನಡೆದಿರಬಹುದು ಎಂದು ಭಾವಿಸಿ ಪಂಚಾಯತಿಯ ಲೆಕ್ಕಪತ್ರಗಳನ್ನು ಆಡಿಟ್‌ ಮಾಡಿಸುತ್ತಿದ್ದಾರೆ. ಆದರೆ, ನಾನು ಯಾವುದೇ ಹಗರಣ ಮಾಡಿಲ್ಲ. ಹಗರಣಗಳಿದ್ದರೆ ತೋರಿಸಲಿ, ಕಾನೂನಿಗೆ ತಲೆ ಬಾಗುತ್ತೇನೆ’ ಎಂದು ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ