ಡಿಕೆಸು ಹ್ಯಾಟ್ರಿಕ್‌ ಗೆಲುವಿಗೆ ಜೆಡಿಎಸ್‌ ಅಡ್ಡಿ?

Team Udayavani, Mar 15, 2019, 7:26 AM IST

ಕುಣಿಗಲ್‌: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವಿನ ತವಕದಲ್ಲಿ ಇರುವ ಸಂಸದ ಡಿ.ಕೆ.ಸುರೇಶ್‌ಗೆ ಸ್ಥಳೀಯ ಜೆಡಿಎಸ್‌ ಕಾರ್ಯಕರ್ತರ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಜೆಡಿಎಸ್‌ ಮತಗಳು ಸುರೇಶ್‌ಗೆ ಬೀಳುವುದು ಅನುಮಾನ! 

ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸೀಟು ಹಂಚಿಕೆಯಾಗಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಈಗಾಗಲೇ ಘೋಷಣೆ ಮಾಡಲಾಗಿದೆ. ಆದರೆ, ತಳಮಟ್ಟದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಒಮ್ಮತ ಇಲ್ಲದೆ ಇರುವುದು ಕುಣಿಗಲ್‌ ವಿಧಾನಸಭಾ ಕ್ಷೇತ್ರದ್ಯಾಂತ ಕಂಡು ಬಂದಿದೆ.

ಈ ಸಂಬಂಧ ಜೆಡಿಎಸ್‌ ಕಾರ್ಯಕರ್ತರ ಹೇಳಿಕೆಗಳು ಸಾಮಾಜಿಕ ಜಾಲತಾಣ ಹಾಗೂ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ. ಮತ್ತೆ ಹಲವು ಕಾರ್ಯಕರ್ತರು ನಾವು ಡಿ.ಕೆ.ಸುರೇಶ್‌ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದರೆ ಮತ್ತೆ ಕೆಲವರು ಮೈತ್ರಿ ಧರ್ಮ ಪರಿಪಾಲನೆಗೆ ಬದ್ಧರೆಂದು ಹೇಳುತ್ತಿದ್ದಾರೆ. ಆದರೆ, ಜೆಡಿಎಸ್‌ ಕಾರ್ಯಕರ್ತರ ದ್ವಂದ್ವ ಹೇಳಿಕೆಗಳ ಬಗ್ಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

2009ರಲ್ಲಿ ತುಮಕೂರಿಗೆ ಸೇರಿತ್ತು: ಕುಣಿಗಲ್‌ ವಿಧಾನಸಭಾ ಕ್ಷೇತ್ರವು 2009ರ ವರೆಗೂ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸೇರಿತ್ತು. ನಂತರ ನಡೆದ ಲೋಕಸಭಾ ಕ್ಷೇತ್ರಗಳ ವಿಂಗಡಣೆ ವೇಳೆಯಲ್ಲಿ ಕುಣಿಗಲ್‌ ವಿಧಾನಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿತು. 2009ರಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್‌ ತೇಜಸ್ವಿನಿಗೌಡ ವಿರುದ್ಧ ಗೆಲುವು ಸಾಧಿಸಿದರು. ಆದರೆ, 2013 ರ ವಿಧಾನಸಭಾ ಚುನಾವಣೆ ವೇಳೆ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 

ಎರಡು ಬಾರಿ ಗೆಲುವು: ತೆರವಾದ ಲೋಕಸಭಾ ಕ್ಷೇತ್ರಕ್ಕೆ 2013ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದರು. ಕುಣಿಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್‌ ಅವರು 56,340 ಮತಗಳು ಪಡೆದರೆ, ಅನಿತಾಕುಮಾರಸ್ವಾಮಿ 51,442 ಮತಗಳು ಪಡೆದರು. ಈ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ ಗೆಲುವು ಸಾಧಿಸಿದರು.

ಬಳಿಕ 2014ರಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್‌, ಬಿಜೆಪಿಯಿಂದ ಮುನಿರಾಜುಗೌಡ ಹಾಗೂ ಜೆಡಿಎಸ್‌ನಿಂದ ಪ್ರಭಾಕರ್‌ರೆಡ್ಡಿ ಸ್ಪರ್ಧಿಸಿದರು. ಕುಣಿಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್‌ 64,763 ಮತ ಪಡೆದರೆ ಅವರ ಪ್ರತಿಸ್ಪರ್ಧಿಸಿ ಮುನಿರಾಜುಗೌಡ 32,923 ಹಾಗೂ ಪ್ರಭಾಕರ್‌ರೆಡ್ಡಿ 32,303 ಪಡೆದರು. ಈ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ ಅಭೂತ ಪೂರ್ವ ಗೆಲುವು ಸಾಧಿಸಿದರು.

ಇದಕ್ಕೆ ಕಾಂಗ್ರೆಸ್‌ ಹಿರಿಯ ಮುಖಂಡ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಡಿ.ಕೆ.ಸುರೇಶ್‌ ಗೆಲುವಿಗೆ ಸಾಥ್‌ ನೀಡಿದರು. ಆದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ರಾಮಸ್ವಾಮಿಗೌಡ ಅವರಿಗೆ ಟಿಕೆಟ್‌ ಕೈ ತಪ್ಪಲು ಡಿ.ಕೆ.ಸುರೇಶ್‌ ಅವರೇ ಕಾರಣ ಎಂದು ತೀವ್ರ ಅಸಮಾಧಾನಗೊಂಡಿರುವ ರಾಮಸ್ವಾಮಿಗೌಡ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ ಅವರ ಪರ ಪ್ರಚಾರ ಮಾಡುತ್ತಾರೋ ಅಥವಾ ಇಲ್ಲವೋ ಎಂಬುದು ಕಾದು ನೋಡಬೇಕಾಗಿದೆ.

ತಾಲೂಕಿನಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮೂರು ಪಕ್ಷಗಳು ಬಲಿಷ್ಠವಾಗಿವೆ. ಆದರೆ, ಈವರೆಗೂ ಬಿಜೆಪಿ ಅಭ್ಯರ್ಥಿ ಯಾರೆಂದು ಆ ಪಕ್ಷ ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್‌ ಅಭ್ಯರ್ಥಿ ಆಗಲಿದ್ದಾರೆ ಎಂಬುದು ಆ ಪಕ್ಷದ ಕಾರ್ಯಕರ್ತರು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ಡಿಕೆಸು ಗೆಲುವಿಗೆ ಶಾಸಕ ಶ್ರಮ: ಡಿ.ಕೆ.ಸುರೇಶ್‌ ಅವರ ಸಂಬಂಧಿ ಬಲಗೈ ಬಂಟ ಶಾಸಕ ಡಾ.ರಂಗನಾಥ್‌ ಕಳೆದ ಏಳು, ಎಂಟು ತಿಂಗಳಿನಿಂದ ಕ್ಷೇತ್ರ ಅಭಿವೃದ್ಧಿ ಜೊತೆಗೆ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿ ಆ ಮೂಲಕ ತಮ್ಮ ನಾಯಕ ಡಿ.ಕೆ.ಸುರೇಶ್‌ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಪಕ್ಷದ ಬಲಾಬಲ: ತಾಲೂಕಿನ ಐದು ಜಿಪಂ ಪೈಕಿ ಕಾಂಗ್ರೆಸ್‌ ಮೂರು, ಜೆಡಿಎಸ್‌ ಹಾಗೂ ಬಿಜೆಪಿ ತಲಾ ಒಂದೊಂದು ಸ್ಥಾನ ಹೊಂದಿದ್ದರೇ, ತಾಲೂಕು ಪಂಚಾಯ್ತಿಯ 20 ಸ್ಥಾನಗಳ ಪೈಕಿ ಜೆಡಿಎಸ್‌ 10, ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ ಐದು ಸ್ಥಾನಗಳು ಹೊಂದಿವೆ ಹಾಗೂ ಪುರಸಭಾ ಆಡಳಿತ ಕಾಂಗ್ರೆಸ್‌ ಅಧೀನದಲ್ಲಿ ಇದೆ, ಇನ್ನೂ ವಿಎಸ್‌ಎಸ್‌ಎನ್‌ ಬಹುತೇಕ ಕಾಂಗ್ರೆಸ್‌ ಆಡಳಿತದಲ್ಲಿ ಇವೆ. 36 ಗ್ರಾಪಂ ಪೈಕಿ ಕಾಂಗ್ರೆಸ್‌ ಸಿಂಹ ಪಾಲು ಹೊಂದಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಯಾವುದೇ ಧಕ್ಕೆ ಇಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭೆ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಪರವಾಗಿ ಮಾಜಿ ಶಾಸಕ ಜೆಡಿಎಸ್‌ ಹಿರಿಯ ಮುಖಂಡ ಡಿ.ನಾಗರಾಜಯ್ಯ ಹಾಗೂ ಆ ಪಕ್ಷದ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. ಮೈತ್ರಿ ಧರ್ಮ ಪರಿಪಾಲನೆ ಮಾಡಲಿದ್ದಾರೆ.
-ಡಾ.ರಂಗನಾಥ್‌, ಶಾಸಕ

ಮೈತ್ರಿ ಧರ್ಮ ಪರಿಪಾಲನೇ ವಿಧಾನಸೌಧಕ್ಕೆ ಮಾತ್ರ ಸೀಮಿತವಾಗಿದೆ. ಆದರೆ, ಇದು ತಾಲೂಕಿನಲ್ಲಿ ಅವಶ್ಯಕತೆ ಇಲ್ಲ ಎಂದು ಶಾಸಕ ಡಾ.ರಂಗನಾಥ್‌ ಅವರೇ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾದಗಿನಿಂದಲ್ಲೂ ಜೆಡಿಎಸ್‌ ಕಾರ್ಯಕರ್ತರಿಗೆ ಶಾಸಕರು ತೊಂದರೆ ನೀಡುತ್ತಾ ಬಂದಿದ್ದಾರೆ. ಆದರೆ, ಹೈಕಮಾಂಡ್‌ ಆದೇಶ ಪಾಲನೆ ಮಾಡುವುದು ನಮ್ಮ ಧರ್ಮವಾಗಿದೆ.
-ಬಿ.ಎನ್‌.ಜಗದೀಶ್‌, ಜೆಡಿಎಸ್‌ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ

* ಕೆ.ಎನ್‌.ಲೋಕೇಶ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ