ಕೊರಟಗೆರೆ: ಸಂಘಟನಾ ಕಾರ್ಯದರ್ಶಿಗಳ ವಿರುದ್ದ ಬಿಜೆಪಿ ಕಾರ್ಯಕರ್ತರ ತೀವ್ರ ಅಸಮಾಧಾನ
ಜೇಷ್ಠ ಹಾಗೂ ವಿಕಾಸ್ ಪುತ್ತೂರು ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ; ರಾಜೀನಾಮೆ
Team Udayavani, Dec 5, 2022, 9:31 PM IST
ಕೊರಟಗೆರೆ: ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಹಾಗೂ ನಿಷ್ಟಾವಂತರನ್ನು ಕಡೆಗಣಿಸುತ್ತಿರುವುದರಿಂದ ಮಧುಗಿರಿ ವಿಭಾಗದ ಬಿಜೆಪಿ ಕಾರ್ಯಕರ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು,ಶೂನ್ಯ ಹಂತದಿಂದ ಪಕ್ಷ ಸಂಘಟನೆ ಮಾಡುತ್ತಾ ಬಂದಿರುವ ನಮಗೆ ಇತ್ತೀಚಿನ ದಿನಗಳಲ್ಲಿ ಕೊರಟಗೆರೆ ಕ್ಷೇತ್ರದ ನಮ್ಮಂತಹ ನಿಷ್ಠಾವಂತರಿಗೆ ಗೌರವ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಕಾರ್ಯದರ್ಶಿ ತಿಮ್ಮಜ್ಜ ಮಾತನಾಡಿ 20ಕ್ಕೂ ಹೆಚ್ಚು ಜನರು ಪದಾಧಿಕಾರಿಗಳು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದಲ್ಲಿ ದಾವಣಗೆರೆ ವಿಭಾಗದ ಸಂಘಟನಾ ಕಾರ್ಯದರ್ಶಿ ಜೇಷ್ಠ ಹಾಗೂ ವಿಕಾಸ್ ಪುತ್ತೂರು ಅವರನ್ನು ಕ್ಷೇತ್ರದಲ್ಲಿ ಸಂಘಟನೆಗೆ ಕಳುಹಿಸಲಾಗಿದೆ. ಆದರೆ ಅವರು ಸಂಘಟನೆ ಮಾಡದೆ ಕಾರ್ಯಕರ್ತರ ಕಡೆಗಣನೆ ಮಾಡುತ್ತಿದ್ದು,ಪಕ್ಷದಲ್ಲಿ ಹಣ ಇರುವವರಿಗೆ ಮನ್ನಣೆ ನೀಡಲಾಗುತ್ತಿದೆ. ನಾವು ಪದಾಧಿಕಾರಿಗಳ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದು ಪಕ್ಷದಲ್ಲಿ ಕಾರ್ಯಕರ್ತರಾಗಿ ಮುಂದುವರಿಯುತ್ತೇವೆ. ಮುಂದೆಯೂ ಇದೇ ರೀತಿ ಪಕ್ಷ ಕಾರ್ಯಕರ್ತರನ್ನು ಕಡೆಗಣಿಸಿದರೆ ರಾಜೀನಾಮೆ ಪರ್ವವೇ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಓಬಿಸಿ ಜಿಲ್ಲಾ ಕಾರ್ಯದರ್ಶಿ ತೋವಿನಕೆರೆ ಹನುಮಂತರಾಜು ಮಾತನಾಡಿ 37 ವರ್ಷಗಳಿಂದ ಪಕ್ಷದ ಉಳಿವಿಗಾಗಿ ದುಡಿದ ತಿಮ್ಮಜ್ಜರವರನ್ನೇ ಈ ರೀತಿ ಪಕ್ಷ ಕಡೆಗಣಿಸುತ್ತಿದ್ದಾರೆ ಎಂದರೆ ಮುಂದಿನ ದಿನಗಳಲ್ಲಿ ನಮಗೂ ಕೂಡಾ ಇಂತಹ ಸನ್ನಿವೇಶಗಳು ಬರಬಹುದು. ಎಂಬುದರಲ್ಲಿ ಸಂಶಯವಿಲ್ಲ. ಆದ್ದರಿಂದ ಇಂದು ನಾವು ಒಗ್ಗಟ್ಟಾಗಿ ತಿಮ್ಮಜ್ಜರವರಿಗೆ ಬೆಂಬಲಿಸಿ ಈ ಸಮಸ್ಯೆ ಇಂದೆಯೇ ಬಗೆಹರಿಯಬೇಕು.
ಮುಖಂಡರ ನಡೆಯಿಂದ ಬೇಸತ್ತು ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕೊರಟಗೆರೆಯ ಕೆಲವು ತಮ್ಮ ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮಧುಗಿರಿ, ಪಾವಗಡದ ಇನ್ನೂ ಅನೇಕ ಜನ ಕಾರ್ಯಕರ್ತರು ಇಂದು ಮತ್ತು ನಾಳೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ನೊಂದ ಬಿಜೆಪಿ ಪದಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರೈತ ಮೋರ್ಚಾ ಸಿದಪ್ಪ,ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್,ಜಿಲ್ಲಾ ಎಸ್ ಟಿ ಮೋರ್ಚಾಧ್ಯಕ್ಷ ಪ್ರಕಾಶ್ ಬಾಬು,ಕೆಂಪರಾಜು,ಉಮೇಶ್ ಚಂದ್ರ,ರವಿ ಶಂಕರ್,ರಮೇಶ್,ಶಂಕರ್,ನಾಗೇಂದ್ರ ಸೇರಿ ಇತರರೂ ಹಾಜರಿದ್ದರು.