ಅಭಿವೃದ್ಧಿ ಬಿಟ್ಟು ಮೋದಿಯಿಂದ ಸೇಡಿನ ರಾಜಕೀಯ

Team Udayavani, Sep 6, 2019, 4:04 PM IST

ಡಿಕೆ ಶಿ ಬಂಧನ ಖಂಡಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೊರಟಗೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಇದ್ದರು.

ಕೊರಟಗೆರೆ: ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಅಭಿವೃದ್ಧಿ ಬಿಟ್ಟು ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯ ಮಂತ್ರಿಯೂ ಆದ ಶಾಸಕ ಡಾ.ಜಿ. ಪರಮೇಶ್ವರ್‌ ಆರೋಪಿಸಿದರು. ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಇಡಿ ಬಂಧಿಸಿರುವುದನ್ನು ವಿರೋಧಿಸಿ ಗುರುವಾರ ಪಟ್ಟಣದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರು ಹಾಗೂ ಡಿ.ಕೆ. ಶಿವಕುಮಾರ್‌ ಅಭಿಮಾನಿ ಬಳಗದಿಂದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು.

ನಾಯಕರ ಹತ್ತಿಕ್ಕುವ ಕೆಲಸ: ಕೇಂದ್ರ ಸರ್ಕಾರ ಪ್ರತಿಪಕ್ಷದ ನಾಯಕರನ್ನು ಹತ್ತಿಕ್ಕಲು ಮುಂದಾಗಿದ್ದು, ಇದಕ್ಕೆ ಇಡಿ, ಸಿಬಿಐ ಇನ್ನಿತರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆರ್ಥಿಕತೆ ಕೆಳಮಟ್ಟಿಗೆ ಇಳಿದಿದೆ. ಲಕ್ಷಾಂತರ ನಿರುದ್ಯೋಗಿಗಳು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಅದರ ಬಗ್ಗೆ ಯೋಚಿಸದೆ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ತನಿಖೆ ನೆಪದಲ್ಲಿ ಕಿರುಕುಳ: ಮಾಜಿ ಹಣಕಾಸು ಸಚಿವ ಚಿದಂಬರಂ ಮತ್ತು ಡಿ.ಕೆ. ಶಿವಕುಮಾರ್‌ಗೆ ತನಿಖೆ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. ಕಾನೂನು ರೀತಿಯಲ್ಲಿ ಪ್ರಶ್ನಿಸಿ ಕ್ರಮ ಕೈಗೊಳ್ಳುವುದು ನ್ಯಾಯ ಸಮ್ಮತವೇ ಹೊರತು ಸೇಡಿನ ರಾಜಕೀಯವಲ್ಲ, 1 ವರ್ಷದಿಂದ ತನಿಖೆ ನಡೆಸಿದ ಇಡಿ ಇಲಾಖೆ ನಂತರ ಬಂಧಿಸಿರುವುದು ಕಾನೂನು ಬಾಹಿರ. ಜನಪ್ರತಿನಿಧಿ ಗಳಿಗೆ ನ್ಯಾಯ ದೊರೆಯದಿದ್ದರೆ, ಇನ್ನು ಜನಸಾಮಾನ್ಯ ರಿಗೆ ನ್ಯಾಯ ದೊರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸಮ್ಮಿಶ್ರ ಸರ್ಕಾರ ಕೆಡವಲು ಶಾಸಕರಿಗೆ ಹಣ, ಅಧಿಕಾರದ ಅಸೆ ತೋರಿಸಿ ಖರೀದಿಸಲು ಬಿಜೆಪಿಗೆ ಹಣ ಎಲ್ಲಿಂದ ಬಂತು. ಈ ಬಗ್ಗೆಯೂ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

ತನಿಖಾ ಸಂಸ್ಥೆಗಳ ದುರ್ಬಳಕೆ: ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ, ಕೇಂದ್ರ ಸರ್ಕಾರ ಇಡಿ, ಸಿಬಿಐ ಸೇರಿ ಕೆಲ ಇಲಾಖೆ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಗುಜರಾತ್‌ನ ಕಾಂಗ್ರೆಸ್‌ ಶಾಸಕರಿಗೆ ಕರ್ನಾಟಕದಲ್ಲಿ ಆಶ್ರಯ ನೀಡಿದ್ದಕ್ಕೆ ಡಿಕೆಶಿ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಬಂಧಿಸಲಾಗಿದೆ ಎಂದು ದೂರಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಎಸ್‌ಎಸ್‌ಆರ್‌ ವೃತ್ತದವರೆಗೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು, ಸಾವಿರಾರು ಕಾರ್ಯ ಕರ್ತರು ಮೆರವಣಿಗೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಜಿಪಂ ಸದಸ್ಯ ಶಿವಾಮಯ್ಯ, ಮಾಜಿ ಸದಸ್ಯ ಪ್ರಸನ್ನ ಕುಮಾರ್‌, ತಾಪಂ ಸದಸ್ಯ ಚಿಕ್ಕನರಸಯ್ಯ, ಮಾಜಿ ಸದಸ್ಯರಾದ ಪ್ರಕಾಶ್‌, ರವಿಕುಮಾರ್‌, ಜೆಡಿಎಸ್‌ ತಾಲೂಕು ಕಾರ್ಯಾಧ್ಯಕ್ಷ ನರಸಿಂಹರಾಜು, ಯುವ ಕಾಂಗ್ರಸ್‌ ಮಾಜಿ ಅಧ್ಯಕ್ಷ ನಟರಾಜು, ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ಸಿದ್ದರಾಜು, ಮುಖಂಡರಾದ ಸಂಜೀವ ರೆಡ್ಡಿ, ಚಿಕ್ಕ ರಂಗಯ್ಯ, ಕೊಡ್ಲಹಳ್ಳಿ ವೆಂಕಟೇಶ್‌, ಜಿ.ಡಿ. ನಾಗ ಭೂಷಣ್‌, ರವಿರಾಜ ಅರಸ್‌, ಯತ್ತಗಾನಹಳ್ಳಿ ನಾಗ ರಾಜು, ಕಾಕಿಮಲ್ಲಯ್ಯ, ರಾಜು ಇತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ