ನೀರಿನ ಸಮಸ್ಯೆ ಬರದಂತೆ ಜಾಗೃತೆ ವಹಿಸಿ

ಅನುಮತಿಗೆ ಕಾಯದೆ ಪರಿಹಾರ ಒದಗಿಸಿ • ಅಧಿಕಾರಿಗಳಿಗೆ ಡಿಸಿಎಂ ಡಾ.ಪರಮೇಶ್ವರ ಸೂಚನೆ

Team Udayavani, Jun 16, 2019, 1:01 PM IST

ತುಮಕೂರು: ಈ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಬರದಂತೆ ಅಧಿಕಾರಿಗಳು ಜಾಗೃತೆ ವಹಿಸಿಬೇಕು. ಯಾವುದೇ ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಗ್ರಾಮದಿಂದ ನೀರಿನ ಸಮಸ್ಯೆ ಇರುವ ಬಗ್ಗೆ ಜನರಿಂದ ದೂರು ಬಾರದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಕೊಳವೆ ಬಾವಿ ಕೊರೆಯುವುದು, ಪಂಪ್‌ಸೆಟ್-ಮೋಟಾರ್‌ ಅಳವಡಿಕೆ, ವಿದ್ಯುತ್‌ ಸಂಪರ್ಕ ಕಲ್ಪಿಸುವುದು, ಕೊಳವೆ ಬಾರಿ ದುರಸ್ತಿ, ಕ್ರಿಯಾ ಯೋಜನೆಗೆ ಮೇಲಧಿಕಾರಿಗಳ ಅನುಮತಿಗೆ ಕಾಯದೆ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.

ತಾರತಮ್ಯ ಬೇಡ: ಪಾವಗಡ, ಕೊರಟಗೆರೆ, ತುಮಕೂರು, ಮಧುಗಿರಿ, ಶಿರಾ ತಾಲೂಕುಗಳಲ್ಲಿ ಮಾತ್ರ ಕೊಳವೆ ಬಾವಿ ಕೊರೆಯಲು ಆದ್ಯತೆ ನೀಡ ಲಾಗುತ್ತಿದ್ದು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು ತಾಲೂಕುಗಳಿಗೆ ಆದ್ಯತೆ ನೀಡುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಹಾಗೂ ತಿಪಟೂರು ಶಾಸಕ ಬಿ.ಸಿ.ನಾಗೇಶ್‌, ತುರುವೇಕೆರೆ ಶಾಸಕ ಎ.ಎಸ್‌. ಜಯರಾಂ ಜಂಟಿಯಾಗಿ ಒತ್ತಾಯಿಸಿದಾಗ, ಪ್ರತಿ ಕ್ರಿಯಿಸಿದ ಡಿಸಿಎಂ ಕುಡಿಯುವ ನೀರಿಗೆ ಸಂಬಂಧಿಸಿ ಯಾವುದೇ ಭೇದ-ಭಾವ ತೋರದೆ ಎಲ್ಲ ತಾಲೂಕುಗಳಿಗೂ ಆದ್ಯತೆ ನೀಡಬೇಕು ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಇಫ್ತಿಕಾರ್‌ ಅಹಮದ್‌ಗೆ ಆದೇಶಿಸಿದರು.

14464 ವಸತಿ ಪೂರ್ಣ: ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಮಾಂಕಾಳಪ್ಪ ಮಾತನಾಡಿ, 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬಸವ, ಅಂಬೇಡ್ಕರ್‌ ಪ್ರಧಾನಮಂತ್ರಿ ಆವಾಸ್‌, ದೇವರಾಜ್‌ ಅರಸ್‌ ವಸತಿ ಯೋಜನೆಯಡಿ 17450 ವಸತಿ ನಿರ್ಮಾಣ ಗುರಿ ಹೊಂದಲಾಗಿತ್ತು. ಈ ಪೈಕಿ 14464 ವಸತಿ ಪೂರ್ಣಗೊಳಿಸುವ ಮೂಲಕ ಶೇ.82 ಸಾಧನೆ ಮಾಡಲಾಗಿದೆ. ಉಳಿದ ಕಾಮಗಾರಿ ಪೂರ್ಣಗೊಳಿ ಸಲು 543 ಕೋಟಿ ರೂ. ಅನುದಾನ ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಅಗತ್ಯ ಅನುದಾನ ಶೀಘ್ರ ಬಿಡುಗಡೆ ಮಾಡಲು ಸಿಎಂ ಜತೆ ಚರ್ಚಿಸಲಾಗುವುದು ಎಂದು ಡಿಸಿಎಂ ತಿಳಿಸಿದರು. ಉಪ ಕಾರ್ಯದರ್ಶಿ ಬಿ.ಕೃಷ್ಣಪ್ಪ ಮಾತನಾಡಿ, ನರೇಗಾ ಯೋಜನೆಯಡಿ 2019- 20ನೇ ಸಾಲಿಗೆ 75ಲಕ್ಷ ಮಾನವ ದಿನಗಳ ಗುರಿಯಿದ್ದು, ಕೇವಲ ಎರಡೇ ತಿಂಗಳಲ್ಲಿ 9,10,000 ಮಾನವ ದಿನ ಸೃಜಿಸಲಾಗಿದೆ. ಕಳೆದ ವರ್ಷ ನಿಗದಿ ಯಾಗಿದ್ದ 50ಲಕ್ಷ ಮಾನವ ದಿನಗಳಿಗೆ 51ಲಕ್ಷ ಮಾನವ ದಿನ ಸೃಜಿಸುವ ಮೂಲಕ ಗುರಿ ಸಾಧಿಸಲಾಗಿದೆ ಎಂದು ವಿವರಿಸಿದರು.

ನರೇಗಾ ಕಾಮಗಾರಿಗಳನ್ನು ಮಾರ್ಗಸೂಚಿ ಅನ್ವಯ ಕೂಲಿ ಹಾಗೂ ಸಾಮಗ್ರಿಗಳನ್ನು 60ಃ40 ಅನುಪಾತದಲ್ಲಿ ಕೈಗೊಳ್ಳಬೇಕು. ಕಾಮಗಾರಿ ಕೈಗೊಳ್ಳು ವಾಗ ಅನುಪಾತದಲ್ಲಿ ವ್ಯತ್ಯಾಸವಾಗಿದೆ ಎಂದು ಶಾಸಕರಿಂದ ದೂರುಗಳು ಕೇಳಿ ಬರುತ್ತಿವೆ. ಅನು ದಾನವನ್ನು ಯಂತ್ರಗಳಿಗೆ ಬಳಸದೆ ಕಡ್ಡಾಯ ವಾಗಿ ಉದ್ಯೋಗ ಒದಗಿಸುವಲ್ಲಿ ವಿನಿಯೋಗಿಸಬೇಕೆಂದು ಡಿಸಿಎಂ ತಾಕೀತು ಮಾಡಿದರು.

ಸಹಾಯಧನ ಸಿಕ್ಕಿಲ್ಲ: ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಪಶುಭಾಗ್ಯ ಯೋಜನೆಯಡಿ ಕಳೆದ ಸಾಲಿನಲ್ಲಿ ಆಯ್ಕೆಯಾಗಿರುವ 1206 ಫ‌ಲಾನುಭವಿ ಗಳಿಗೆ ಸಹಾಯಧನ ಈವರೆಗೂ ಪಾವತಿಯಾಗಿಲ್ಲ ಎಂದರು. ಉತ್ತರಿಸಿದ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಪ್ರಕಾಶ್‌, ಫ‌ಲಾನು ಭವಿಗಳಿಗೆ ವಿತರಿಸಬೇಕಾದ ಸಹಾಯಧನವನ್ನು ಈಗಾಗಲೇ ಸಂಬಂಧಿಸಿದ ಸೇವಾ ಬ್ಯಾಂಕಿಗೆ ಜಮಾ ಮಾಡಲಾಗಿದೆ. ಬ್ಯಾಂಕಿನವರು ತಡ ಮಾಡಿದ್ದಾರೆ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಗತಿ ಕುರಿತು ಡಿಸಿಎಂ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕುಣಿಗಲ್ ತಾಲೂಕಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿರುವ 929 ರೈತರಿಗೆ ಈವರೆಗೂ ಹಣ ಪಾವತಿಯಾಗಿಲ್ಲ. ಬೆಳೆ ದರ್ಶಕ್‌ ಆ್ಯಪ್‌ ಅನ್ವಯ ಹಣವನ್ನು ತಡೆಹಿಡಿಯ ಲಾಗಿದ್ದು, ಕೂಡಲೇ ಪಾವತಿಗೆ ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ನೀಡಬೇಕೆಂದು ಕುಣಿಗಲ್ ತಾಲೂಕು ಶಾಸಕ ಡಾ. ಹೆಚ್.ಡಿ. ರಂಗನಾಥ್‌ ಒತ್ತಾಯಿಸಿದಾಗ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಡಿಸಿಎಂ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಅಂಕಿ-ಅಂಶಗಳ ಪ್ರಕಾರ ಶೇ. 84 ಬಿಪಿಎಲ್ ಪಡಿತರ ಚೀಟಿದಾರರಿದ್ದಾರೆ. ಕೂಡಲೇ ಅನರ್ಹ ಪಡಿತರದಾರರನ್ನು ಗುರುತಿಸಿ ಬಿಪಿಎಲ್ ಪಡಿತರ ಚೀಟಿ ಸೌಲಭ್ಯದಿಂದ ಕೈಬಿಡಬೇಕೆಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯಗೆ ಸೂಚನೆ ನೀಡಿದರಲ್ಲದೆ ಪಶುಭಾಗ್ಯ ಯೋಜನೆಯಡಿ ಬಾಕಿ ಇರುವ ರೈತರ ಸಹಾಯಧನವನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಜ್ಯೋತಿಗಣೇಶ್‌ಗೆ ಪರಮೇಶ್ವರ ಸೂಚಿಸಿದರು.

416430 ಹೆಕ್ಟೇರ್‌ ಗುರಿ: ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 697 ಮಿ.ಮೀ. ಇದ್ದು, ಮೇ ಅಂತ್ಯಕ್ಕೆ 132 ಮಿ.ಮೀ. ವಾಡಿಕೆ ಮಳೆಯಾಗಿದೆ. ವಾಸ್ತವಿಕ ವಾಗಿ 109 ಮಿ.ಮೀ. ಮಾತ್ರ ಮಳೆಯಾಗಿದ್ದು, 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 416430 ಹೆಕ್ಟೇರ್‌ ಗುರಿ ಹೊಂದಲಾಗಿದೆ. ಈ ಪೈಕಿ ಮಳೆ ಕೊರೆತೆಯಾದ ಕಾರಣ 6136 ಹೆ. ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ರೈತರಿಗೆ ತೊಂದರೆಯಾಗದಂತೆ ಜಿಲ್ಲೆಯ 50 ರೈತ ಸಂಪರ್ಕ ಕೇಂದ್ರಗಳು ಮತ್ತು 11 ಹೆಚ್ಚುವರಿ ಮಾರಾಟ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸಮವಸ್ತ್ರ, ಪಠ್ಯಪುಸ್ತ ವಿತರಣೆ ಶೇ.80 ವಿತರಿಸಲಾಗಿದ್ದು, ಉಳಿದ ಶೇ.20ರಷ್ಟು ಸಮವಸ್ತ್ರವನ್ನು ಶೀಘ್ರ ವಿತರಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್‌.ಕಾಮಾಕ್ಷಿ ತಿಳಿಸಿದರು.

ತಿಪಟೂರು ತಾಲೂಕಿನ ಹಳೇಪಾಳ್ಯ ಶಾಲೆಯಲ್ಲಿ ನೀಡಿಲ್ಲದಿರುವ ಬಗ್ಗೆ ದೂರು ಬಂದಿದ್ದು, ಕೂಡಲೇ ಸಮವಸ್ತ್ರ ವಿತರಿಸಬೇಕು. ಅಲ್ಲದೇ ಸರ್ಕಾರದಿಂದ ಶಾಲಾ ಕೊಠಡಿಗೆಂದೇ 1300 ಕೋಟಿ ರೂ. ಮಂಜೂರು ಮಾಡಲಾಗಿದೆ ಕಾಮಗಾರಿ ಮಾಡು ವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚಿಸಿದರು.

ಸಂಸದರಾದ ಜಿ.ಎಸ್‌.ಬಸವರಾಜ್‌, ಎ.ನಾರಾಯಣಸ್ವಾಮಿ, ಕಾರ್ಮಿಕ ಸಚಿವ ವೆಂಕಟರಮಣಪ್ಪ, ಶಾಸಕರಾದ ಬಿ.ಸತ್ಯನಾರಾಯಣ, ಡಿ.ಸಿ.ಗೌರಿಶಂಕರ್‌, ಎಂ.ವಿ. ವೀರಭದ್ರಯ್ಯ, ಜಿ.ಬಿ.ಜ್ಯೋತಿ ಗಣೇಶ್‌, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್‌, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ ಕುಮಾರ್‌, ಜಿಪಂ ಸಿಇಒ ಶುಭಾ ಕಲ್ಯಾಣ್‌ ಮತ್ತಿತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ದಾವಣಗೆರೆ: ಕುಂದುವಾಡ ಕೆರೆಯನ್ನು ಪ್ರವಾಸಿ ತಾಣ....ಎಂದು ಘೋಷಣೆ ಮಾಡಬೇಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ...

  • ಹುಬ್ಬಳ್ಳಿ: ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ನವೀಕರಿಸದಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಶನ್‌ ನೇತೃತ್ವದಲ್ಲಿ...

  • ಜಗಳೂರು: ಭದ್ರಾ ಮೇಲ್ದಂಡೆ ಜಗಳೂರು ಶಾಖಾ ಕಾಲುವೆಯ ಮಾರ್ಗ ಬದಲಾವಣೆ ಮಾಡದಂತೆ ಮತ್ತು ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಭದ್ರಾ ಮೇಲ್ದಂಡೆ ನೀರಾವರಿ...

  • ವಾಡಿ: ರಾವೂರ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರವಾಡಿ ಗ್ರಾಮದಲ್ಲಿ ಮತ್ತೆ ವಾಂತಿ ಬೇಧಿ ಪ್ರಕರಣಗಳು ಕಾಣಿಸಿಕೊಂಡಿದ್ದು, ರೋಗಿಗಳು ನರಳುತ್ತ ಆಸ್ಪತ್ರೆಗೆ...

  • ಹುಬ್ಬಳ್ಳಿ: ಏಷ್ಯಾದ ಅತಿದೊಡ್ಡ ಹಾಗೂ ಉತ್ತರ ಕರ್ನಾಟಕದ ಮೊದಲ ಸೂಕ್ಷ್ಮ ನೀರಾವರಿ ಯೋಜನೆ ಹೆಗ್ಗಳಿಕೆಗೆ ಪಾತ್ರವಾಗಿರುವ ಬಾಗಲಕೋಟೆ ಜಿಲ್ಲೆಯ ರಾಮಥಾಳ ಯೋಜನೆ...

  • ಕಲಬುರಗಿ: ಎಚ್.ಡಿ.ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವಲ್ಲಿ ವಿಫ‌ಲರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಜಿಲ್ಲೆಯ ಅಫ‌ಜಲ ಪುರ ವಿಧಾನಸಭಾ...