ರೈಲ್ವೆ ವಸತಿ ಗೃಹ ಸರ್ವಿಸ್‌ ಮಾರ್ಗದಲ್ಲಿ ಕುಡುಕರ ಹಾವಳಿ

ಭಯಭೀತಗೊಂಡ ಸ್ಥಳೀಯ ನಿವಾಸಿಗರು • ರೈಲ್ವೆ ಪೊಲೀಸರ ನೇಮಕಕ್ಕೆ ನಾಗರಿಕರ ಒತ್ತಾಯ

Team Udayavani, Jun 11, 2019, 11:56 AM IST

ಕುಣಿಗಲ್: ಇಲ್ಲಿನ ರೈಲ್ವೆ ನಿಲ್ದಾಣದ ವಸತಿ ಗೃಹದ ಸರ್ವಿಸ್‌ ರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಹಳಿಯು ರಾತ್ರಿ ವೇಳೆ ಪುಂಡರು- ಮದ್ಯವ್ಯಸನಿಗಳ ಮೋಜು ಮಸ್ತಿ ಗುಂಡು ಸೇವನೆಯ ತಾಣ ವಾಗಿದೆ. ಇದು ಪ್ರಯಾಣಿಕರು ಹಾಗೂ ಸ್ಥಳೀಯರ ಆತಂಕಕ್ಕೆಕಾರಣವಾಗಿದೆ.

ನೈರುತ್ಯ ರೈಲ್ವೆ ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣದ ಕೆಆರ್‌ಎಸ್‌ ಅಗ್ರಹಾರದಲ್ಲಿ ರೈಲ್ವೆ ನಿಲ್ದಾಣ ವನ್ನು ನಿರ್ಮಾಣ ಮಾಡಿದೆ. ಆದರೆ ಸಂಜೆಯಾಗು ತ್ತಿದಂತೆ ಇಲ್ಲಿನ ರೈಲ್ವೆ ವಸತಿ ಗೃಹ ಸರ್ವಿಸ್‌ ರಸ್ತೆ, ರೈಲ್ವೆ ಅಳಿ ಮೋಜು ಮಸ್ತಿಯ ತಾಣವಾಗುತ್ತಿದ್ದು, ಮದ್ಯ ಪ್ರಿಯರು ಗುಂಡು ಸೇವನೆಗೆ ಈ ಪ್ರಶಾಂತ ಸ್ಥಳವನ್ನು ಬಳಸಿಕೊಳ್ಳುತ್ತಿದ್ದಾರೆ.

ಶತಮಾನ ಕಳೆದರೂ ಬೆಂಗಳೂರು, ಕುಣಿಗಲ್, ಹಾಸನ, ಮಂಗಳೂರು ಮಾರ್ಗದಲ್ಲಿ ರೈಲ್ವೆ ಸಂಪರ್ಕ ವಿಲ್ಲದೆ, ಈ ಮಾರ್ಗದ ಪ್ರಯಾಣಿಕರು, ರೈತರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ರೈಲ್ವೆ ಸೌಲಭ್ಯದಿಂದ ವಂಚಿತರಾಗಿದ್ದರು, ಇದನ್ನು ಅರಿತ ಎಚ್.ಡಿ. ದೇವೇಗೌಡ 1996 ರಲ್ಲಿ ಪ್ರಧಾನಿ ಮಂತ್ರಿಯಾಗಿದ್ದ ಅವಧಿಯಲ್ಲಿ ಈ ಮಾರ್ಗದ ರೈಲ್ವೆ ಕಾಮಗಾರಿ ಯೋಜನೆಯನ್ನು ಕೈಗೆತ್ತಿಕೊಂಡು ಚಾಲನೆ ನೀಡಿದರು. ಆದರೆ ಕಾಮಗಾರಿಗೆ ಚಾಲನೆ ನೀಡಿ 20 ವರ್ಷದ ಬಳಿಕ ಕಾಮಗಾರಿ ಪೂರ್ಣಗೊಂಡು 2017 ರಲ್ಲಿ ರೈಲು ಸಂಚಾರ ಪ್ರಾರಂಭವಾಯಿತು.

ಅನುಕೂಲ: ಕುಣಿಗಲ್, ಎಡಿಯೂರು, ಹುಲಿಯೂರು ದುರ್ಗ, ಮಾಗಡಿ, ಕುದೂರು, ಸೋಲೂರು, ತುರುವೇಕೆರೆ, ಹೆಬ್ಬೂರು ಸೇರಿದಂತೆ ಹತ್ತಾರು ಊರಿನ ಪ್ರಯಾಣಿಕರು ಈ ಹಿಂದೆ ಕುಕ್ಕೆ ಸುಬ್ರಮಣ್ಯ, ಮಂಗಳೂರು, ಕಾರವಾರ, ಕಣ್ಣೂರು, ಮಂತ್ರಾಲಯ ಸೇರಿದಂತೆ ಹಲವು ಪ್ರಸಿದ್ಧ ಹಾಗೂ ಧಾರ್ಮಿಕ ಸ್ಥಳಗಳಿಗೆ ಹೊಗಬೇಕೆಂದರೆ ತುಮಕೂರು ಅಥವಾ ಬೆಂಗಳೂರಿಗೆ ಹೋಗಿ ಹೋಗಬೇಕಾಗಿತ್ತು. ಇದರಿಂದ ಜನರಿಗೆ ಪ್ರಯಾಣವೆಚ್ಚ ದುಬಾರಿ ಜತೆಗೆ ಶ್ರಮವೂ ಅಧಿಕವಾಗಿತ್ತು. ಆದರೆ, ಈಗ ಬೆಂಗಳೂರು, ಕುಣಿಗಲ್, ಹಾಸನ ನಡುವೆ ರೈಲ್ವೆ ಮಾರ್ಗವಾಗಿ ರುವುದು ಈ ಭಾಗದ ಜನರಿಗೆ ಅನುಕೂಲವಾಗಿದೆ. ಹೀಗಾಗಿ ನಿತ್ಯ ಪಟ್ಟಣದ ವಯೋವೃದ್ಧರು, ಮಹಿಳೆ ಯರು ಸೇರಿದಂತೆ ನೂರಾರು ಜನ ನಾಗರಿಕರು ಬೆಳಗ್ಗೆ ಸಂಜೆ ವಾಯು ವಿಹಾರ ಮಾಡುತ್ತಿದ್ದಾರೆ.

ರೈಲ್ವೆ ನಿಲ್ದಾಣದ ಸಮೀಪದಲ್ಲಿ ರೈಲ್ವೆ ಇಲಾಖೆ ನೌಕರರ ವಸತಿ ಗೃಹವಿದೆ ಇದರ ಪಕ್ಕದಲ್ಲಿ ಸರ್ವಿಸ್‌ ಮಾರ್ಗವಿದೆ. ಇಲ್ಲಿ ರೈಲ್ವೆ ಹಳಿ ಹಾದು ಹೋಗಿದೆ. ಇದು ನಿರ್ಜನ ಪ್ರದೇಶವಾಗಿದೆ. ಅಲ್ಲದೆ ಜನಸಂದಣಿ ಇರುವುದಿಲ್ಲ, ಇದನ್ನೇ ಬಂಡವಾಳವಾಗಿಸಿಕೊಂಡಿರುವ ಮದ್ಯವ್ಯಸನಿಗಳು ನಿರ್ಜನವಾದ ಪ್ರಶಾಂತ ವಾತಾ ವರಣದಲ್ಲಿ ಗುಂಪಾಗಿ ಬಂದು ಮದ್ಯವನ್ನು ಹೀರುತ್ತಾ ಹರಟೆಹೊಡೆಯುವುದು,ರೈಲ್ವೆ ಹಳಿ ಬಳಿ ಆಟೋ, ಬೈಕ್‌ಗಳನ್ನು ನಿಲ್ಲಿಸಿಕೊಂಡು ಕುಡಿಯುವುದು ಸಾಮಾನ್ಯವಾಗಿದೆ. ನೂರಾರು ಮದ್ಯದ ಬಾಟಲ್ಗಳ ಜತೆಗೆ ತಿಂಡಿಯ ಖಾಲಿ ಪಟ್ಟಣಗಳು, ಸಿಗರೇಟ್ ಪ್ಯಾಕ್‌ ಬಿದ್ದು ಪರಿಸರ ಹಾನಿಗೊಳಗಾಗಿದೆ. ಇದರಿಂದ ಆತಂಕಗೊಂಡಿರುವ ಸ್ಥಳೀಯರು ಇಲ್ಲಿ ಪೊಲೀಸ್‌ ಬೀಟ್ ವ್ಯವಸ್ಥೆ ಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯುತ್‌ ದೀಪ ಅಳವಡಿಸಿ: ರೈಲ್ವೆ ಹಳಿ ಹಾದು ಹೋಗಿರುವ ಇಲ್ಲಿ ಹತ್ತಾರು ವಾಸದ ಮನೆಗಳು ಹಾಗೂ ಹೊಲ, ಗದ್ದೆ, ತೋಟವಿದ್ದು, ಈ ಮಾರ್ಗದಲ್ಲಿ ಜನರು ತಮ್ಮ ಮನೆ ಹಾಗೂ ಜಮೀನಿಗೆ ಹೋಗಲು ಇಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ ಆದರೆ ಒಂದು ಭಾಗ ಹೊರತು ಪಡಿಸಿದರೆ ನಾಗರಿಕರ ವಾಸಿಸುವ ಮನೆಗೆ ಹೊಗಲು ಸೇತುವೆಗೆ ವಿದ್ಯುತ್‌ ದೀಪ ಅಳವಡಿಸಿಲ್ಲ. ಪುಂಡರ ಹಾವಳಿಯಿಂದ ಇಲ್ಲಿನ ನಾಗರಿಕರು ಹಾಗೂ ರೈತರು ರಾತ್ರಿ ವೇಳೆ ತಿರುಗಾಡಲು ಭಯಭೀತರಾಗಿದ್ದಾರೆ. ಈ ಭಾಗದಲ್ಲಿ ವಿದ್ಯುತ್‌ ದೀಪ ಅಳವಡಿಸುವಂತೆ ಒತ್ತಾಯಿಸಿದ್ದಾರೆ.

ರೈಲ್ವೆ ಪೊಲೀಸರು ಇಲ್ಲದೆ ಇರುವುದೇ ಇಷ್ಟೇಲ್ಲಾ ಅವ್ಯವಸ್ಥೆಗೆ ಕಾರಣವಾಗಿದೆ ಎಂದು, ಇಲ್ಲಿನಿ ಸಾರ್ವ ಜನಿಕರ ಆರೋಪವಾಗಿದೆ. ಕೂಡಲೇ ರೈಲ್ವೆ ಪೊಲೀಸರನ್ನು ನಿಯೋಜನೆ ಮಾಡಿ ಅಕ್ರಮ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ನಾಗರೀಕರ ಆಗ್ರಹವಾಗಿದೆ.

● ಕೆ.ಎನ್‌.ಲೋಕೇಶ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ