ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ: ನಳಿನ್‌ ವಿಶ್ವಾಸ

Team Udayavani, Sep 11, 2019, 5:37 AM IST

ಉಡುಪಿ: ಮೂರೂವರೆ ವರ್ಷದ ಬಳಿಕ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನವನ್ನು ಗಳಿಸಿ ಮತ್ತೆ ಸುಸ್ಥಿರ ವಾಗಿ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿಯಿಂದ ಕಿದಿಯೂರು ಹೊಟೇಲ್‌ ಸಭಾಂಗಣದಲ್ಲಿ ಮಂಗಳವಾರ ಆಯೋಜನೆಗೊಂಡ ಅಭಿನಂದನ ಸಮಾರಂಭದಲ್ಲಿ ಮಾತ ನಾಡಿದ ಅವರು, ಕಳೆದ ಹತ್ತು ದಿನಗಳಲ್ಲಿ ಮೈಸೂರಿನಿಂದ ಬೀದರ್‌ ತನಕ ಪ್ರವಾಸ ನಡೆಸಿದ್ದೇನೆ. ಸಜ್ಜನಿಕೆ ರಾಜಕಾರಣವನ್ನು ಮುಂದಿನ ದಿನಗಳಲ್ಲಿ ನಡೆಸುವ ಮೂಲಕ, ಕಾರ್ಯಕರ್ತರ ಪರಿಶ್ರಮದಿಂದ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇನೆ ಎಂದರು.

ಹೈ.ಕರ್ನಾಟಕ ಮುಕ್ತಿ!
ಜಮ್ಮು ಕಾಶ್ಮೀರ ರಾಜ್ಯದ ದಿಕ್ಕನ್ನು ಕೇಂದ್ರ ಸರಕಾರ ಹೇಗೆ ಬದಲಾಯಿಸಿತೋ ಹಾಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಹೈದರಾಬಾದ್‌ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿ ಗುಲಾಮಗಿರಿ ಹೆಸರನ್ನು ತೆಗೆದರು. ಇದನ್ನು ಜನರೂ ಸ್ವಾಗತಿಸಿದ್ದಾರೆ ಎಂದು ನಳಿನ್‌ ಹೇಳಿದರು.

ಮುಖರ್ಜಿ ಕನಸು ನನಸು
ಪಕ್ಷಕ್ಕಿಂತ ದೇಶ ಶ್ರೇಷ್ಠ ಎಂದು ದೀನ್‌ದಯಾಳ್‌ ಉಪಾಧ್ಯಾಯ ಹೇಳುತ್ತಿದ್ದರು. ನೆಹರೂ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರು ನೆಹರೂ ಅವರ ವಿದೇಶಾಂಗ ನೀತಿ, ಜಮ್ಮು ಕಾಶ್ಮೀರದ ಕುರಿತ ನೀತಿಯನ್ನು ಖಂಡಿಸಿ ಹೊರ ಬಂದು ಜನಸಂಘವನ್ನು ಸ್ಥಾಪಿಸಿ ಅದೇ ಹೋರಾಟದಲ್ಲಿ ಅಸುನೀಗಿದರು. ಏಳು ದಶಕಗಳ ಬಳಿಕ ಮುಖರ್ಜಿಯವರ ಕಾಶ್ಮೀರ ಕುರಿತು ಇದ್ದ ಕನಸನ್ನು ಮೋದಿ, ಅಮಿತ್‌ ಶಾ ನನಸು ಮಾಡಿದ್ದಾರೆ ಎಂದು ತಿಳಿಸಿದರು.

ಟ್ರಂಪ್‌ಗೂ ಮೋದಿ ಆದರ್ಶ
ಹಿಂದೆಲ್ಲ ಆಡಳಿತ ನಡೆಸಿದವರು ಭಾರತವನ್ನು ವಿದೇಶಗಳ ರೀತಿ ಮಾಡುತ್ತೇವೆ ಎನ್ನುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರು ಮೋದಿ ರೀತಿ ಆಡಳಿತ ಕೊಡುತ್ತೇನೆ ಎನ್ನುವ ಸ್ಥಿತಿಗೆ ಭಾರತ ಬಂದಿದೆ ಎಂದು ನಳಿನ್‌ ಬೆಟ್ಟು ಮಾಡಿದರು.

ಕಾರ್ಯಕರ್ತರಿಗೆ ಶಾ ಸಂದೇಶ
ಹೋರಾಟದ ಮೂಲಕ ಬಂದ ನಳಿನ್‌ ಕುಮಾರರನ್ನು ರಾಜ್ಯಾಧ್ಯಕ್ಷರಾಗಿ ಮಾಡುವ ಮೂಲಕ ಸಾಮಾನ್ಯ ಕಾರ್ಯಕರ್ತರಿಗೂ ಇಂತಹ ಅವಕಾಶಗಳಿವೆ ಎಂಬುದನ್ನು ರಾಷ್ಟ್ರಾಧ್ಯಕ್ಷರು ತೋರಿಸಿದ್ದಾರೆಂದು ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಮೆಂಡನ್‌, ವಿಭಾಗ ಪ್ರಭಾರಿ ಕೆ. ಉದಯ ಕುಮಾರ ಶೆಟ್ಟಿ ಶುಭಕೋರಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಸ್ತಾವನೆಗೈದರು. ಪ್ರ.ಕಾರ್ಯದರ್ಶಿ ಕುಯಿಲಾಡಿ ಸುರೇಶ ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷರಾದ ಉಡುಪಿಯ ನೀತಾ ಗುರುರಾಜ್‌, ಕುಂದಾಪುರದ ಶ್ಯಾಮಲಾ ಕುಂದರ್‌, ನಾಯಕರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕುತ್ಯಾರು ನವೀನ್‌ ಶೆಟ್ಟಿ, ಸಂಧ್ಯಾ ರಮೇಶ್‌, ಯು.ಕೆ. ಸದಾನಂದ, ಸುರೇಶ ಶೆಟ್ಟಿ ಕಾಡೂರು, ಪ್ರತಾಪ ಹೆಗ್ಡೆ ಮಾರಾಳಿ, ಪ್ರಭಾಕರ ಪೂಜಾರಿ, ಪ್ರಕಾಶ ಶೆಟ್ಟಿ ಪಾದೆಬೆಟ್ಟು, ಹೇಮಂತಕುಮಾರ್‌, ಬಿ.ಎನ್‌. ಶಂಕರ ಪೂಜಾರಿ, ಸೋಜನ್‌ ಪಿ. ಜೇಮ್ಸ್‌, ಮಧ್ವನಗರ ಶಂಕರ ಪೂಜಾರಿ ಉಪಸ್ಥಿತರಿದ್ದರು.

ಶ್ರೀಕೃಷ್ಣ ಮಠಕ್ಕೆ ಭೇಟಿ
ನಳಿನ್‌ ಕುಮಾರ್‌ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ‌ ರಘುಪತಿ ಭಟ್‌ ಜತೆಗಿದ್ದರು.

ಸೀಟ್‌ಬೆಲ್ಟ್ ಧರಿಸದ ನಳಿನ್‌!
ನಳಿನ್‌ ಕುಮಾರ್‌ ಅವರು ಉಡುಪಿಯಲ್ಲಿ ಕಾರಿನಲ್ಲಿ ಸಾಗುವಾಗ ಸೀಟ್‌ ಬೆಲ್ಟ್ ಧರಿಸದೆ ಇರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ದಂಡ ವಿಧಿಸಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರಾಜೀನಾಮೆಯಲ್ಲ, ಆತ್ಮಹತ್ಯೆ ಮಾಡಿಕೊಳ್ಳಬೇಕಾಗಬಹುದು
ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿದ್ದಕ್ಕೆ, ಅಲ್ಪಸಂಖ್ಯಾಕ ಹೆಮ್ಮಕ್ಕಳ ಕಣ್ಣೀರು ಒರೆಸಿದ ತ್ರಿವಳಿ ತಲಾಖ್‌ ರದ್ದತಿ ವಿರೋಧಿಸಿ ದ.ಕ. ಜಿಲ್ಲಾಧಿಕಾರಿಯಾಗಿದ್ದ ಸೆಂಥಿಲ್‌ ರಾಜೀನಾಮೆ ನೀಡಿದರು. ವಿಧಿ ರದ್ದತಿ ಬಳಿಕ ಕಾಶ್ಮೀರದಲ್ಲಿ ಗಲಭೆ ಆಗಿದೆಯೆ? ತಮಿಳುನಾಡಿನಲ್ಲಿ ಚುನಾವಣೆಯಲ್ಲಿ ನಿಲ್ಲಬೇಕಾದರೆ ದೇಶದ ಪ್ರಶ್ನೆ ಎತ್ತಬೇಡಿ. ಪ್ರಧಾನಿಯವರ ನಿರ್ಧಾರವನ್ನು ದೇಶದ ಜನರು ಒಪ್ಪಿಕೊಂಡಿದ್ದಾರೆ. ಮುಂದೆ ಇಂಥವರು ರಾಜೀನಾಮೆಯಲ್ಲ ಆತ್ಮಹತ್ಯೆಯೇ ಮಾಡಿಕೊಳ್ಳುವಂಥ ನಿರ್ಧಾರಗಳನ್ನು ಮೋದಿ ಸರಕಾರ ಕೈಗೆತ್ತಿಕೊಳ್ಳಲಿದೆ.
– ಸುನಿಲ್‌ ಕುಮಾರ್‌, ಕಾರ್ಕಳ ಶಾಸಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ