ಸುರಕ್ಷತಾ ಕ್ರಮವಿಲ್ಲದೆ ಅಪಾಯಕಾರಿಯಾದ ನೆಂಪು ಜಂಕ್ಷನ್‌

Team Udayavani, Jul 11, 2019, 5:12 AM IST

ಕುಂದಾಪುರ: ಎರಡು ಪುರಾಣ ಪ್ರಸಿದ್ಧ ದೇವಸ್ಥಾನಗಳನ್ನು ಸಂಪರ್ಕಿಸುವ ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿಯ 27ರ ನೆಂಪುವಿನಲ್ಲಿ ರಸ್ತೆ ವಿಸ್ತರಣೆಗೊಂಡಿದ್ದು, ಇಲ್ಲಿನ ಜಂಕ್ಷನನ್ನು ಕೂಡ ಅಭಿವೃದ್ಧಿ ಪಡಿಸಲಾಗಿದೆ. ಆದರೆ ಇಲ್ಲಿ ಸರಿಯಾದ ಮಾರ್ಗಸೂಚಿಗಳಿಲ್ಲದೆ, ವೇಗ ನಿಯಂತ್ರಕಗಳಿಲ್ಲದೆ ಅಪಾಯಕಾರಿ ಜಂಕ್ಷನ್‌ ಆಗಿದೆ.

ಕುಂದಾಪುರ – ಕೊಲ್ಲೂರು ಮಾರ್ಗವಾಗಿ ಸಂಚರಿಸುವಾಗಲೂ ನೆಂಪು ಜಂಕ್ಷನ್‌ ಪ್ರಮುಖವಾಗಿದೆ. ಇದಲ್ಲದೆ ಆಗುಂಬೆ, ಹೆಬ್ರಿ, ಹಾಲಾಡಿಯಿಂದಲೂ ನೇರಳಕಟ್ಟೆ ಮೂಲಕವಾಗಿ ಇದೇ ಮಾರ್ಗವಾಗಿ ಕೊಲ್ಲೂರಿಗೆ ತೆರಳ ಬೇಕಾಗಿದೆ. ಕುಂದಾಪುರದಿಂದ ಸುಮಾರು 15 ಕಿ.ಮೀ. ದೂರವಿದ್ದರೆ, ಕೊಲ್ಲೂರಿಗೆ ನೆಂಪುವಿನಿಂದ ಸುಮಾರು 24 ಕಿ.ಮೀ. ಅಂತರವಿದೆ.

ಸಮಸ್ಯೆಯೇನು?

ಹೆಮ್ಮಾಡಿಯಿಂದ ಕೊಲ್ಲೂರಿಗೆ ಬರುವ ವಾಹನಗಳು ಒಂದೆಡೆಯಾದರೆ, ನೇರಳಕಟ್ಟೆ ಮಾರ್ಗವಾಗಿ ಕೊಲ್ಲೂರಿಗೆ ಹಾಗೂ ಕೊಲ್ಲೂರಿನಿಂದ ಕುಂದಾಪುರ ಅಥವಾ ನೇರಳಕಟ್ಟೆ ಕಡೆಗೆ ತೆರಳುವ ವಾಹನಗಳು ಇನ್ನೊಂದೆಡೆ. ಈ ಮೂರು ಕಡೆಗಳಿಂದಲೂ ಇದೇ ಜಂಕ್ಷನ್‌ ಮೂಲಕಹಾದು ಹೋಗುತ್ತವೆ. ಜಂಕ್ಷನ್‌ನಲ್ಲೂವಾಹನ ವೇಗವಾಗಿ ಹೋಗುವುದರಿಂದ ಅಪಘಾತದ ಸಾಧ್ಯತೆ ಹೆಚ್ಚಿದೆ.

ಸುರಕ್ಷತಾ ಕ್ರಮವಿಲ್ಲ

ಈ ಜಂಕ್ಷನ್‌ ಮೂಲಕವಾಗಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ವಾಹನಗಳ ವೇಗ ನಿಯಂತ್ರಿಸಲು ಬ್ಯಾರಿಕೇಡ್‌ ಹಾಕಲಾಗಿಲ್ಲ ಅಥವಾ ಹಂಪ್ಸ್‌ ಕೂಡ ಮಾಡಿಲ್ಲ. ಇನ್ನು ರಸ್ತೆಯ ಎರಡೂ ಬದಿಗಳಲ್ಲಿ ರಾತ್ರಿ ವೇಳೆ ವಾಹನ ಸವಾರಿಗೆ ನೆರವಾಗುವಂತಹ ರಿಫ್ಲೈಕ್ಟರ್‌ಗಳು ಕೂಡ ಇಲ್ಲ. ಬೀದಿ ದೀಪವೂ ಇಲ್ಲ. ಯಾವ ಕಡೆಗೆ ಸಂಚರಿಸಬೇಕು ಎನ್ನುವ ಸರಿಯಾದ ಮಾರ್ಗಸೂಚಿಯೂ ಇಲ್ಲ. ಈಗ ಇರುವ ಹಳೆಯ ಮಾರ್ಗಸೂಚಿಯ ಫಲಕ ನೇರಳಕಟ್ಟೆ ಕಡೆಯಿಂದ ಬರುವ ವಾಹನ ಸವಾರರಿಗೆ ಕಾಣುವುದೇ ಇಲ್ಲ. ಅವರು ವಾಹನದಿಂದ ಇಳಿದು ಬೋರ್ಡ್‌ ನೋಡಿ ಹೋಗಬೇಕಾದ ಸ್ಥಿತಿಯಿದೆ.

– ಪ್ರಶಾಂತ್‌ ಪಾದೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ